Taj Boudi Issue:‌ ತಾಜಬಾವಡಿ ವಿಚಾರದಲ್ಲಿ ಐದು ವರ್ಷ ಶಾಸಕರು ಮಾಡಿದ್ದೇನು? ಗೂಂಡಾ ಕಾಯಿದೆ ಹೇಳಿಕೆತನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಲಿ- ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ವಿಜಯಪುರ ನಗರದಲ್ಲಿ ಗಣೇಶ ವಿಸರ್ಜನೆಗೆ ಐತಿಹಾಸಿಕ ತಾಜಮಾವಡಿ ಬಳಕೆ ವಿಚಾರ ಈಗ ತೀವ್ರ ವಾಕ್ ಸಮರಕ್ಕೆ ಕಾರಣವಾಗಿದೆ. ತಾಜಬಾವಡಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದತೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಬಿಜೆಪಿಯವರೇ ಆದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕಿಡಿ ಕಾರಿದ್ದಾರೆ‌.

ವಿಜಯಪುರದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿದರು

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪ್ಪು ಪಟ್ಟಣಶೆಟ್ಟಿ, ಐದು ವರ್ಷಗಳ ಹಿಂದೆ ಅಂದಿನ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೂಳು ತೆಗೆದು ಐತಿಹಾಸಿಕ ತಾಜಬಾವಡಿಯನ್ನು ಸ್ಚಚ್ಛಗೊಳಿಸಿದ್ದರು. ಆಗ‌ ನಾವು ಎಂ. ಬಿ. ಪಾಟೀಲ ಅವರ ನಿರ್ಧಾರವನ್ನು ಸ್ವಾಗತಿಸಿ ಬೆಂಬಲ ನೀಡಿದ್ದೇವು ಎಂದು ಅವರು ತಿಳಿಸಿದರು.

ಎಂ. ಬಿ. ಪಾಟೀಲ ಅವರ ಸರಕಾರದ ಅವಧಿ ಮುಗಿದ ನಂತರ ಆಯ್ಕೆಯಾದ ವಿಜಯಪುರ ನಗರ ಶಾಸಕರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಈ ತಾಜಬಾವಡಿ ಭಾವಿಯ ನೀರನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಲ್ಲಿ ಅಳವಡಿಸಲಾಗಿದ್ದ ಯಂತ್ರಗಳು ತುಕ್ಕು ಹಿಡಿದಿವೆ. ಹೀಗಾಗಿ ಆ ಭಾವಿಯಲ್ಲಿನ ನೀರು ನಿರುಪಯುಕ್ತ ಆಗುತ್ತಿದೆ ಎಂಬ ಕಾರಣದಿಂದ ತಾಜಬಾವಡಿಯಲ್ಲಿ ಈ ಮುಂಚೆ ನಡೆಯುತ್ತಿದ್ದ ರೀತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡುವಂತೆ ಗಜಾನನ ಮಹಾಮಂಡಳ ಆಯೋಜಿಸಿದ್ದ ಸಭೆಯಲ್ಲಿ ಹಿಂದೂಪರ ಕಾರ್ಯಕರ್ತರು ಆಗ್ರಹಿಸಿದ್ದರು. ಅಲ್ಲದೇ, ಎರಡು ಬಾರಿ ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನೂ ಸಲ್ಲಿಸಿದ್ದರು.

ಆದರೂ, ವಿಜಯಪುರ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈವರೆಗೆ ಮನವಿ ನೀಡಿದವರ ಜೊತೆ ಯಾವುದೇ ರೀತಿಯಲ್ಲಿ ಮಾತುಕತೆ ನಡೆಸಿಲ್ಲ. ಯಾವುದೇ ಉತ್ತರವನ್ನೂ ನೀಡಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದರು.

ಗೂಂಡಾ ಕಾಯಿದೆ ವಿಚಾರ ಕ್ರಮಕ್ಕೆ ಆಗ್ರಹ

ಐತಿಹಾಸಿಕ ತಾಜಬಾವಡಿಯಲ್ಲಿ ಈಗ ಗಣೇಶ ವಿಸರ್ಜನೆಗೆ ಅವಕಾಶ ಕೊಡಿ ಎಂದು ಹಿಂದೂಪರ ಸಂಘಟನೆಗಳು ಮನವಿ ಮಾಡಿದರೆ, ಅವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿ ಶಾಸಕ ಯತ್ನಾಳ ಬೆದರಿಕೆ ಹಾಕುತ್ತಿದ್ದಾರೆ. ಈ ಮೂಲಕ ಅವರೇ ಗೂಂಡಾ ರೀತಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವರು ಆರೋಪಿಸಿದರು.

ಗೂಂಡಾ ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಿರುವ ಶಾಸಕರ ಹೇಳಿಕೆಯನ್ನು ಐಜಿ ಮತ್ತು ಎಸ್ಪಿ ಗಂಭೀರವಾಗಿ ಪರಿಗಣಿಸಬೇಕು ಆಗ್ರಹಿಸಿದ ಅವರು, ಈಗಾಗಲೇ ನಾಲ್ಕೈದು ಜನರನ್ನು ಗೂಂಡಾ ಕಾಯ್ದೆ ಅಡಿ ಜೈಲಿಗೆ ಕಳುಹಿಸಿರುವುದಾಗಿ ಶಾಸಕರು ಹೇಳುತ್ತಿದ್ದಾರೆ. ಹಾಗಾದರೆ ವಿಜಯಪುರ ಪೊಲೀಸರು ಶಾಸಕ ಯತ್ನಾಳ ಅವರ ಕೈಗೊಂಬೆಯಾಗಿದ್ದಾರಾ? ಎಂದು ಪ್ರಶ್ನಿಸಿದರು.

ಶಾಸಕರ ಹೇಳಿಕೆಗೆ ನಾವ್ಯಾರು ಹೆದರುವುದಿಲ್ಲ. ತಾಜವಾವಡಿಯಲ್ಲಿಯೇ ಗಣೇಶ ವಿಸರ್ಜನೆಗಾಗಿ ಹೋರಾಟ ಮಾಡುತ್ತೇವೆ ಎಂದು ನಾವು ಎಲ್ಲೂ ಹೇಳಿರಲಿಲ್ಲ. ಅಷ್ಟರಲ್ಲಿ ವಿಜಯಪುರ ನಗರ ಶಾಸಕರು ತಾಜಬಾವಡಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಯಾರಾದರೂ ವಿಸರ್ಜನೆ ಮಾಡಿದರೆ ಅವರು ವಿರುದ್ಧ ಗೂಂಡಾ ಕಾಯ್ದೆಯನ್ನು ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಶಾಸಕರಿಗೆ ತಾಜಬಾವಡಿ ಬಗ್ಗೆ ಐದು ವರ್ಷಗಳಲ್ಲಿ ಇಲ್ಲದ ಕಾಳಜಿ ಈಗೇಕೆ? ಐದು ವರ್ಷಗಳ ಅವಧಿಯಲ್ಲಿ ಮಹಾನಗರ ಪಾಲಿಕೆ ಅಧಿಕಾರ ಇವರ ಕೈಯಲ್ಲಿಯೇ ಇತ್ತು ಆಗ ಇವರೇನು ಮಾಡಿದರು? ಎಂದು ಅಪ್ಪು ಪಟ್ಟಣಶೆಟ್ಟಿ ಖಾರವಾಗಿ ಪ್ರಶ್ನಿಸಿದರು.

ಮಹಾಮಂಡಳ ಗಣೇಶೋತ್ಸವ

ಈ ಬಾರಿ ಮಹಾಮಂಡಳ ಗಣೇಶೋತ್ಸವ ಅದ್ದೂರಿ ಕಾರ್ಯಕ್ರಮ ಮಾಡುತ್ತೇವೆ. ಒಂಬತ್ತು ದಿನಗಳ ಕಾಲ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಇರುವುದರಿಂದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ವಿಚಾರಗಳನ್ನು ಪ್ರಸ್ತುತ ಪಡಿಸುತ್ತೇವೆ. ಸಾವರ್ಕರ್ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಗಜಾನನ ಮಹಾಮಂಡಕ ಅಧ್ಯಕ್ಷ ಶ್ರೀಕಾಂತ ಶಿಂಧೆ, ಮಾಜಿ ಅಧ್ಯಕ್ಷ ಮಹೇಶ ಜಾಧವ, ಪ್ರಭಾಕರ ಭೋಸಲೆ, ಗೋಪಾಲ ಘಟಕಾಂಬಳೆ, ವಿಜಯ ಜೋಶಿ, ಸಿದ್ದು ಮಲ್ಲಿಕಾರ್ಜುನಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌