Impella Heartpump: ಇಂಪೆಲ್ಲಾ ಹಾರ್ಟಪಂಪ್‌ ಸಾಧನ ಹೃದಯಾಘಾತಕ್ಕೆ ಒಳಗಾದವರಿಗೆ ಸಂಜೀವಿನಿ- ಡಾ. ವಿವೇಕ್‌ ಜವಳಿ

ಬೆಂಗಳೂರು: ದೀರ್ಘಕಾಲದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಮೂವರು ವೃದ್ಧರಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ಅಪರೂಪದ ಇಂಪೆಲ್ಲಾ ಹಾರ್ಟ್ ಪಂಪ್ ಅತ್ಯಾಧುನಿಕ ಸಾಧನದ ಸಹಾಯದಿಂದ ಆಂಜಿಯೋಪ್ಲಾಸ್ಟಿ ನಡೆಸುವ ಮೂಲಕ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ಫೊರ್ಟಿಸ್‌ ಆಸ್ಪತ್ರೆ ಇಂಪೆಲ್ಲಾ ಹಾರ್ಟ್‌ ಪಂಪ್‌ ಬಳಸಿದ ಮೊದಲ ಆಸ್ಪತ್ರೆಯಾಗಿದೆ.

ಈ ಕುರಿತು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಹೃದಯ ಖ್ಯಾತ ತಜ್ಞ ಡಾ. ವಿವೇಕ್‌ ಜವಳಿ, ಹೃದಯಾಘಾತ ಆದವರನ್ನು ಹಾಗೂ ಹೃದಯದ ನಾಳ ಬ್ಲಾಕ್‌ ಆದವರನ್ನು ಕೂಡಲೇ ಬದುಕಿಸಲು ಇಂಪೆಲ್ಲಾ ಹಾರ್ಟ್‌ಪಂಪ್‌ ಸಾಧನ ಸಂಜೀವಿನಿಯಂತೆ. ಈ ಹಾರ್ಟ್‌ಪಂಪ್‌ನನ್ನು ನೇರವಾಗಿ ಹೃದಯನಾಳದೊಳಗೆ ಸೇರಿಸಿ, ಪಂಪ್‌ ಮಾಡುವುದರಿಂದ ಹೃದಯದ ನಾಳಗಳು ಬ್ಲಾಕ್‌ ಆಗಿದ್ದರೂ 5 ಲೀ. ನಷ್ಟು ರಕ್ತವನ್ನು ಪಂಪ್‌ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಹೃದಯದ ನಾಲ್ಕು ರಕ್ತನಾಳಗಳು ಸರಾಗವಾಗಿ ರಕ್ತಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಸಾಧನವನ್ನು 81 ಮತ್ತು 85 ವರ್ಷದ ಪುರುಷ, ಹಾಗೂ 71 ವರ್ಷದ ವೃದ್ಧ ಮಹಿಳೆಯರ ಮೇಲೆ ಪ್ರಯೋಗಿಸಿದ್ದು, ಅವರನ್ನು ಬದುಕುಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ರೋಗಿಗಳಿಗೆ ಇಂಪೆಲ್ಲ ಹಾರ್ಟಪಂಪ್ ಅಳಚಡಿಸಿದ ಬೆಂಗಳೂರಿನ ಪೊರ್ಟೀಸ್ ಆಸ್ಪತ್ರೆ ವೈದ್ಯರ ತಂಡ

ಈ ಮೂರು ವೃದ್ಧರು ಕೋಮಾರ್ಬಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಕೆಲವು ವರ್ಷಗಳ ಹಿಂದೆಯೇ ಹೃದಯ ಸಮಸ್ಯೆಗೆ ಒಳಗಾಗಿ ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿತ್ತು. ಇದಾದ ಬಳಿಕವೂ ಸಹ ಅವರಿಗೆ ಗಂಭೀರ ಹೃದಯಾಘಾತ ಸಂಭವಿಸಿತ್ತು, ಅವರನ್ನು ಉಳಿಸಲು ಮತ್ತೊಮ್ಮೆ ಆಂಜಿಯೋಪ್ಲ್ಯಾಸ್ಟಿ ಮಾಡುವುದು ಅಸಾಧ್ಯದ ಕೆಲಸ. ಏಕೆಂದರೆ ದೈಹಿಕವಾಗಿ ಸದೃಢವಾಗಿರದ ಕಾರಣ ಅಸಾಧ್ಯವಾಗಿತ್ತು. ಹೀಗಾಗಿ ಇಂಪೆಲ್ಲಾ ಹಾರ್ಟ್‌ಪಂಪ್‌ ಸಾಧನವನ್ನು ಬಳಸಿದೆವು. ಇದು ಅತ್ಯಂತ ಸುಲಭ ಹಾಗೂ ಶೀಘ್ರವಾಗಿ ಬಳಸುವ ಸಾಧನವಾದ್ದರಿಂದ ಎಲ್ಲಾ ವಯೋಮಾನದವರಿಗೂ ಬಳಸಬಹುದು. ಆದರೆ ಈ ಸಾಧನವನ್ನು ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಬದುಕಿಸಲು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ ಎಂದು ಡಾ. ವಿವೇಕ‌ಜವಳಿ ವಿವರಿಸಿದರು.

ಫೊರ್ಟಿಸ್‌ ಆಸ್ಪತ್ರೆ ಇಂಟರ್‌ವೆನ್ಷನಲ್‌ ಕಾರ್ಡಿಯಾಲಜಿ ನಿರ್ದೇಶಕ ಡಾ. ಆರ್‌. ಕೇಶವ್‌ ಮಾತನಾಡಿ, ಇಂಪೆಲ್ಲಾ ಹೃದಯ ಪಂಪ್‌ನನ್ನು ವಯಸ್ಸಾದವರಿಗೆ ಅದರಲ್ಲೂ ಇನ್ನೇನು ಬದುಕಲು ಸಾಧ್ಯವೇ ಇಲ್ಲ ಎನ್ನುವಂಥ ಅಪರೂಪದ ಹೃದಯಾಘಾತದಂಥ ಪ್ರಕರಣಗಳಿಗೆ ಬಳಸಲಾಗುತ್ತದೆ. ಆದರೆ ಈ ಸಾಧನ ಬಳಕೆಯಿಂದ ಶೇ.100ರಷ್ಟು ಪ್ರಾಣ ಉಳಿಯುವುದು ಗ್ಯಾರಂಟಿ. ಏಕೆಂದರೆ, ಎಂಥ ಬ್ಲಾಕಿಂಗ್‌ ಆಗಿದ್ದರೂ ಈ ಪಂಪ್‌ ಮೂಲಕಹೃದಯದ ರಕ್ತಸಂಚಾರವನ್ನು ಸರಾಗಗೋಳಿಸಬಹುದು. ಈ ಸಾಧನವನ್ನು ದೇಹದೊಳಗೆ ಹಾಕಲು ಕೇವನ 15 ನಿಮಿಷ ಸಾಕು ಎಂದು ಡಾ. ಆರ್. ಕೇಶವ ವಿವರಿಸಿದರು.

Leave a Reply

ಹೊಸ ಪೋಸ್ಟ್‌