ವಿಜಯಪುರ: ರಾಜ್ಯ ಜಾಗೃತ ಕೋಶ ಕೃಷಿ ನಿರ್ದೇಶಕ ಅನೂಪ ಕೆ. ಜಿ. ನೇತೃತ್ವ ಮತ್ತು ಬೆೞಗಾವಿ ಜಾಗೃತ ಕೋಶ ವಿಭಾಗದ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೋಕಾಶಿ ಹಾಗೂ ವಿಜಯಪುರ ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಂಟಿ ಧಾಳಿ ನಡೆಸಿ 280 ಕೆಜಿ ರಸಗೊಬ್ಬರ ಜಪ್ತಿ ಮಾಡಿದ್ದಾರೆ.
ವಿಜಯಪುರ ನಗರದ ಕೃಷಿ ಪರಿಕರಗಳ ಮಾರಾಟ ಮಳಿಗೆಗಳ ಮೇಲೆ ಇತ್ತೀಚೆಗೆ ಈ ತಂಡಗಳು ದಾಳಿ ನಡೆಸಿವೆ.
ಅನುಮತಿ ಪಡೆಯದ ಅಕ್ರಮವಾಗಿ ಜಿಂಕ್ ಮತ್ತು ಬೋರಾನ್ ಮಿಶ್ರಣ ಇಡಿಟಿಎ ಮತ್ತು ಅನುಮೋದಿಸದೇ ಇರುವ ನಾನಾ ಲಘು ಪೋಷಕಾಂಶ ಮಿಶ್ರಣ ಮಾಡಿದ 280 ಕೆಜಿ ರಸಗೊಬ್ಬರ ವಶಪಡಿಸಿಕೊಂಡಿದ್ದಾರೆ. ಒಟ್ಟು 96290 ಮೌಲ್ಯದ ನಾನಾ ರಸಗೊಬ್ಬರಗಳನ್ನು ದಾಳಿಯ ಸಂದರ್ಭದಲ್ಲಿ ಜಪ್ತಿ ಮಾಡಲಾಗಿದೆ.
ಇಂಡಿ, ಚಡಚಣ, ಬಸವನ ಬಾಗೇವಾಡಿ ಮತ್ತು ಕೋಲಾರ ತಾಲೂಕಿನ ನಾನಾ ಕೃಷಿ ಪರಿಕರಗಳ ಮಾರಾಟ ಮಳಿಗೆಗಳನ್ನು ಇದೆ ವೇಳೆ ಪರಿಶೀಲನೆ ಕೂಡ ಮಾಡಲಾಗಿದೆ.
ಸಣ್ಣ ನೂನ್ಯತೆಗಳು ಕಂಡು ಬಂದ ಮಾರಾಟಗಾರರಿಗೆ ಪರಿಕರಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಕೀಟನಾಶಕ ಮತ್ತು ಪೋಷಕಾಂಶ ಶಂಕಿತ 34 ಜೈವಿಕ ಮಾದರಿಗಳನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪರಿಕರ ಮಾರಾಟಗಾರರಿಗೆ ಸೂಚನೆ
ಅನುಮತಿ ನೀಡದ ಲಘು ಪೋಷಕಾಂಶ ಮಿಶ್ರಣ ರಸಗೊಬ್ಬರಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಿ ಕಾನೂನು ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿಗಳ ತಂಡ ಇದೇ ವೇಳೆ ಎಚ್ಚರಿಕೆ ನೀಡಿದೆ.
ಕಾಯಿದೆ ಉಲ್ಲಂಘಿಸಿದರೆ ಕ್ರಮ
ಕೃಷಿ ಪರಿಕರ ಮಾರಾಟಗಾರರು ತಮ್ಮ ಮಳಿಗೆ ಮುಂಭಾಗದಲ್ಲಿ ದಾಸ್ತಾನು ಇರುವ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಪ್ರಮಾಣ ಮತ್ತು ದರವನ್ನು ರೈತರಿಗೆ ಸುಲಭವಾಗಿ ಕಾಣಿಸುವ ಹಾಗೂ ಅರ್ಥವಾಗುವಂತೆ ಪ್ರದರ್ಶಿಸಬೇಕು. ಒಂದು ವೇಳೆ ಎಂ ಆರ್ ಪಿ ಮುದ್ರಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಮತ್ತು ರಸೀದಿ ನೀಡದಿದ್ದರೆ ಹಾಗೂ ಕಳಪೆ ಗುಣಮಟ್ಟದ ಪರಿಕರ ಮಾರಾಟ ಮಾಡಿದರೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇದೆ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.