Eco Friebdly Ganesh: ಬಸವ ನಾಡಿನಲ್ಲಿ ಸದ್ದಿಲ್ಲದೆ ನಡೆಯಿತು 2000 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಉಚಿತ ವಿತರಣೆ

ವಿಜಯಪುರ- ಬಸವನಾಡು ವಿಜಯಪುರ ನಗರದಲ್ಲಿ ಗಣೇಶೋತ್ಸವ ಸಂಭ್ರಮ ಜೋರಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಸಾರ್ವಜನಿಕ ಗಣೇಶ ಉತ್ಸವಕ್ಕೆ ಈಗ ನಿಷೇಧ ತೆರವಾಗಿರುವುದು ವರದಾನವಾಗಿದೆ.

ಇದರ ಜೊತೆಯಲ್ಲಿಯೇ ವಿಜಯಪುರ ನಗರದಲ್ಲಿ ಪರಿಸರಕ್ಕೆ ಪೂರಕವಾದ ಕಾರ್ಯವೊಂದು ಸದ್ದಿಲ್ಲದೆ ನಡೆಯುತ್ತಿದೆ. ಕಳೆದ ವರ್ಷ ಆರಂಭವಾದ ಈ ಕಾರ್ಯ ಎರಡನೇ ವರ್ಷವಾದ ಈ ಬಾರಿ ಮತ್ತಷ್ಟು ವೇಗ ಪಡೆದಿದ್ದು ಸಾರ್ವಜನಿಕರಿಗೂ ಖುಷಿ ತಂದಿದೆ.

ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದ ಮಾಜಿ‌ ಸಚಿವ ಅಪ್ಪು ಪಟ್ಟಣಶೆಟ್ಟಿ

ಗಣೇಶ್ ಚತುರ್ಥಿ ಅಂಗವಾಗಿ ಕಳೆದ ವರ್ಷದಿಂದ ವಿಜಯಪುರ ನಗರದಲ್ಲಿ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಕೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸಂಸ್ಥಾಪಕರಾಗಿರುವ ಈ ಮಹಾಮಂಡಳದ ವತಿಯಿಂದ ಕಳೆದ ಬಾರಿ ಸಾರ್ವಜನಿಕರಿಗೆ ಸುಮಾರು 400 ರಿಂದ 500 ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿತ್ತು. ಈ ಬಾರಿ ಈ ಸಂಖ್ಯೆ ದುಪ್ಪಟ್ಟಾಗಿದ್ದು ಸುಮಾರು 2000 ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ.

ಪಿ ಓ ಪಿ ಎಂದರೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಬಳಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಸರಕಾರ ಈಗಾಗಲೇ ಅಂಥ ಮೂರ್ತಿಗಳ ಬಳಕೆಯನ್ನು ನಿಷೇಧ ಮಾಡಿದೆ. ಆದರೆ ಇದು ಸಾರ್ವಜನಿಕರಿಗೆ ಆತಂಕಕ್ಕೆ ಕಾರಣವಾಗಿತ್ತು. ಮಣ್ಣಿನಿಂದ ಮಾಡಲಾದ ಗಣೇಶ ಮೂರ್ತಿಗಳು ಬಾಳಿಕೆ ಬರಲ್ಲ. ಅಲ್ಪಸಲ್ಪ ಮೂರ್ತಿಯಲ್ಲಿ ಏನಾದರೂ ಬದಲಾವಣೆಯಾದರೂ ಅವುಗಳನ್ನು ಬಳಸಲು ಆಗಲ್ಲ ಎಂಬ ಆತಂಕವಿತ್ತು. ಆದರೆ ಈ ಆತಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರಕಾರದ ಜೊತೆ ಕೈಜೋಡಿಸಿದ ಶ್ರೀ ಗಜಾನನ ಮಹಾಮಂಗಳ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಯ ಬಗ್ಗೆ ಅರಿವು ಮೂಡಿಸಲು ಯಶಸ್ವಿಯಾಗಿದೆ.

ಈ ಬಾರಿ ಬಹುತೇಕ ಕಡೆಗಳಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಬಹುತೇಕ ಮೂರ್ತಿಗಳಿಗೆ ತರಹೇವಾರಿ ಬಣ್ಣಗಳನ್ನು ಹಚ್ಚದೇ ಮಣ್ಣಿನ ಮೂಲ ಬಣ್ಣವನ್ನೇ ಉಳಿಸಿಕೊಳ್ಳಲಾಗಿದೆ.

ವಿಜಯಪುರ ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ್ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಲವಾರು ಕಡೆಗಳಲ್ಲಿ ಆರೇಳು ಅಡಿಗಿಂತಲೂ ಹೆಚ್ಚಿನ ಎತ್ತರದ ಮೂರ್ತಿಗಳನ್ನು ಈ ಮುಂಚೆ ಬಳಸಲಾಗುತ್ತಿತ್ತು. ಆದರೆ ಈ ಬಾರಿ ಪಿಓಪಿ ಗಣೇಶ ಮೂರ್ತಿಗಳ ಅವಲಂಬನೆ ಕಡಿಮೆಯಾಗಿದೆ. ಈಗ ಗಣೇಶ ಮೂರ್ತಿಗಳ ಗಾತ್ರ ಸ್ವಲ್ಪ ಕಡಿಮೆಯಾಗಿದ್ದರೂ ಕೂಡ ಜನ ಕೂಡ ಇದಕ್ಕೆ ಸ್ಪಂದನೆ ಮಾಡುತ್ತಿದ್ದಾರೆ.

ಸುಮಾರು ವರ್ಷಗಳ ಹಿಂದೆ ಆರಂಭವಾದ ಶ್ರೀ ಗಜಾನನ ಮಹಾಮಂಡಳ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶೋತ್ಸವ ಸಮಿತಿ ಮತ್ತು ಮತ್ತು ಮಂಡಳಗಳ ಸಭೆ ನಡೆಸಿ ಸಾರ್ವಜನಿಕರಲ್ಲಿಯೂ ಕೂಡ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಗ್ಗೆ ಅರಿವು ಮೂಡಿಸಿದೆ. ಹೀಗಾಗಿ ಈ ಬಾರಿ ಬಹುತೇಕ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ.

 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಶ್ರೀ ಗಜಾನನ ಉತ್ಸವ ಸಮಿತಿಗಳ ಒಳಗೊಂಡಿರುವ ಶ್ರೀ ಗಜಾನನ ಮಹಾಮಂಡಲ ಕಾರ್ಯಕರ್ತರ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿಸಲು‌ ಹಗಲಿರುಳು ಶ್ರಮಿಸಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆಯೇ ಮಣ್ಣಿನ‌ ಗಣೇಶ ಮೂರ್ತಿಗಳನ್ನು ತಯಾರಿಸಲು ಕ್ರಮ ಕೈಗೊಂಡಿದ್ದಾರೆ. ಈ ಮೂರ್ತಿಗಳ ತಯಾರಿಕೆಗೆ ಸಾಕಷ್ಡು ಕಾಲಾವಕಾಶವೂ ಬೇಕಾಗುವುದರಿಂದ ಮೊದಲೇ ಮುಂಗಡವಾಗಿ‌ ಬೇಡಿಕೆ ಸಲ್ಲಿಸಿದ್ದಾರೆ. ಅವರ ಶ್ರಮದ ಫಲವಾಗಿ ಈಗಾಗಲೇ ಸುಮಾರು 1500 ಪರಿಸರ ಮಣ್ಣಿನ‌ ಗಣೇಶ ಮೂರ್ತಿಗಳನ್ನು ತರಿಸಲಾಗಿದೆ. ಸುಮಾರು 200ಕ್ಕೂ ಹೆಚ್ಚು ದೊಡ್ಡ ಗಾತ್ರದ ಅಂದರೆ, ಸಾರ್ವಜನಿಕ‌ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗಳನ್ನು ತರಿಸಲಾಗಿದೆ ಎಂದು ತಿಳಿಸಿದರು.

ಒಂದು ಅಡಿಯಿಂದ ಎರಡು ಮೂರ್ನಾಲ್ಕು ಅಡಿಗಳ ವರೆಗೆ ನಾನಾ ಗಾತ್ರದ ಮಣ್ಣಿನ ಮೂರ್ತಿಗಳನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯಿಂದ ಖರೀದಿ ಮಾಡಿ ತರಲಾಗಿದೆ. ಈಗಾಗಲೇ ಬಹುತೇಕ ಮೂರ್ತಿಗಳನ್ನು ಉಚಿತವಾಗಿ ವಿತರಣೆಯನ್ನೂ ಮಾಡಲಾಗಿದೆ. ವಿಜಯಪುರ ನಗರದ ಗಣೇಶ ಮಹಾಮಂಡಲ ಕಾರ್ಯಕರ್ತರ ಶ್ರಮ ಫಲ ನೀಡುತ್ತಿದೆ. ಮಣ್ಣಿನ ಮೂರ್ತಿಗಳು ದೊರೆಯುವುದು ಕಷ್ಟವಾಗಿರವಾಗ ಕಾರ್ಯಕರ್ತರು ಬೇರೆ ಬೇರೆ ಕಡೆ ಹುಡುಕಾಡಿ ಈ ಮೂರ್ತಿಗಳನ್ನು ತರಿಸಿದ್ದಾರೆ ಎಂದು ಅವರು ತಿಳಿಸಿದರು.

ಪರಿಸರ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಬಗ್ಗೆ ಕೇವಲ ಮಾತಿನಲ್ಲಿ ಹೇಳಿದರೆ ಸಾಲದು. ಅದು ಕೃತಿಯಲ್ಲಿ ಜಾರಿ ಆಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮಣ್ಣಿನ ಮೂರ್ತಿಗಳು ಎಲ್ಲಿ ಸಿಗುತ್ತವೆ ಅವುಗಳನ್ನು ಎಲ್ಲಿಂದ ತರುವುದು ಅವುಗಳ ಬೆಲೆ ಎಷ್ಟು ಎಂಬುದು ಜನರಲ್ಲಿ ವಿಜಯಪುರ ಜನರಲ್ಲಿ ಗೊಂದಲವಿತ್ತು. ಅಷ್ಟೇ ಅಲ್ಲ, ಅವುಗಳ ಬೆಲೆ ಜಾಸ್ತಿ ಇರುತ್ತೆ ಮತ್ತು ಅವುಗಳ ಸಂರಕ್ಷಣೆ ಕಷ್ಟ ಎಂಬ ಭಾವನೆ ಜನರಲ್ಲಿತ್ತು. ಈ ಹಿನ್ನೆಲೆಯಲ್ಲಿ ಗಜಾನನ ಮಹಾಮಂಡಳದ ಕಾರ್ಯಕರ್ತರು ನಾಲ್ಕಾರು ಕಡೆ ಚೌಕಾಸಿ ಮಾಡಿ ಅವುಗಳ ಮೂರ್ತಿಗಳ ಗುಣಮಟ್ಟವನ್ನು ಪರಿಶೀಲನೆ ನಡೆಸಿ ತರಿಸಿದ್ದಾರೆ. ಈವ ಜನ ಕೂಡ ನಮ್ಮ ಪ್ರಯತ್ನವನ್ನು ಮೆಚ್ಚಿದ್ದು, ಇನ್ನೂ ಸಾಕಷ್ಟು ಮಂದಿ ತಮಗೂ ಮಣ್ಣಿನ ಮೂರ್ತಿಗಳು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಜನರ ಬೇಡಿಕೆಯನ್ನು ಇಡುತ್ತಿದ್ದಾರೆ. ಇದನ್ನು ಗಮನಿಸಿದರೆ ವಿಜಯಪುರ ನಗರದ ಸಾರ್ವಜನಿಕರಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಬಗ್ಗೆ ಅರಿವು ಹೆಚ್ಚಾಗಿದೆ. ಎರಡು ವರ್ಷಗಳಿಂದ ನಾವು ಮಣ್ಣಿನ ಗಣೇಶ್ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದೆವು. ಇದರಿಂದ ನಮಗೂ ಕೂಡ ಖುಷಿ ಸಿಕ್ಕಿದೆ. ನಮ್ಮ ನಿರೀಕ್ಷೆಯಂತೆ ಮೂರ್ನಾಲ್ಕು ವರ್ಷಗಳಲ್ಲಿ ವಿಜಯಪುರ ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಬಳಕೆ ಕುರಿತು ಅರಿವು ಅರಿವು ಮೂಡಿಸುವ ಯೋಚನೆ ಇತ್ತು. ಆದರೆ ಎರಡೇ ವರ್ಷಗಳಲ್ಲಿ ವಿಜಯಪುರ ನಗರದ ಜನರಿಗೆ ಮಣ್ಣಿನ ಗಣೇಶ ಮೂರ್ತಿಗಳ ಮಹತ್ವ ಗೊತ್ತಾಗಿದೆ. ಮುಂದಿನ ವರ್ಷ ಇಡೀ ವಿಜಯಪುರ ನಗರದ ಜನತೆ ಪರಿಸರ ಸ್ನೇಹಿತರೇ ಮೂರ್ತಿಗಳನ್ನು ಬಳಸಲಿದ್ದಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌