ವಿಜಯಪುರ: ಸೆ. 4, 6, 8 ಮತ್ತು 10ರಂದು ಗಣೇಶ ವಿಗ್ರಹಗಳ ವಿಸರ್ಜನೆ ನಡೆಯುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ನಗರದ ನಾನಾ ಕಡೆ ಸಂಚರಿಸಿ, ತಾತ್ಕಾಲಿಕ ಹೊಂಡ ನಿರ್ಮಾಣದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ ಅವರೊಂದಿಗೆ ನಗರದ ವಾರ್ಡ 31ರಲ್ಲಿನ ತಾಜಬಾವಡಿ ಸೇರಿದಂತೆ ನಾನಾ ಕಡೆ ತೆರಳಿ, ಮಹಾನಗರ ಪಾಲಿಕೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ ಹೊಂಡಗಳ ಹಾಗೂ ಸಂಚಾರಿ ಗಣೇಶ ಮೂರ್ತಿ ವಿಸರ್ಜನೆ ವಾಹನ ವ್ಯವಸ್ಥೆಯ ಸಮಗ್ರ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಣೇಶ ವಿಗ್ರಹಗಳ ವಿಸರ್ಜನೆ ಕಾರ್ಯಕ್ರಮ ನಡೆಯಬೇಕು. ತಾತ್ಕಾಲಿಕ ಹೊಂಡಗಳು ಸುಭದ್ರವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಹೊಂಡದ ಸುತ್ತಲು ಸಾಕಷ್ಟು ಸ್ಥಳವಕಾಶ ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು 35 ವಾರ್ಡಗಳ ಪೈಕಿ ಕೆಲವು ವಾರ್ಡಗಳಲ್ಲಿ
ಈಗಾಗಲೇ ಕೃತಕ ಹೊಂಡ ನಿರ್ಮಿಸಲಾಗಿದೆ. ಇನ್ನು ಕೆಲವು ವಾರ್ಡಗಳಲ್ಲಿ ಸಂಚಾರಿ ಗಣೇಶ ಮೂರ್ತಿ ವಿಸರ್ಜನೆ ವಾಹನ ನಿರ್ವಹಣೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ತಾತ್ಕಾಲಿಕ ಕೃತಕ ಹೊಂಡ ಹಾಗೂ ಸಂಚಾರಿ ಗಣೇಶ ಮೂರ್ತಿ ವಿಸರ್ಜನೆ ವಾಹನಗಳ ನಿರ್ವಹಣೆಗಾಗಿ ವಾರ್ಡವಾರು ಆರೋಗ್ಯ ನಿರೀಕ್ಷಕರನ್ನು ನೇಮಿಸಲಾಗಿದೆ. ನೈರ್ಮಲ್ಯ ಮೇಲ್ವಿಚಾರಕರೊಂದಿಗೆ ಕಾರ್ಯ ನಿರ್ವಹಿಸಲು ಇವರಿಗೆ ಸೂಚನೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಾರ್ವಜನಿಕರಲ್ಲಿ ಮನವಿ
ನಮ್ಮೆಲ್ಲರ ಜೀವಸೆಲೆಯಂತಿರುವ ಕೆರೆ-ಕಟ್ಟೆ ಮತ್ತು ತೆರೆದ ಭಾವಿಗಳಲ್ಲಿ ಸಾರ್ವಜನಿಕರು ಗಣೇಶ ವಿಗ್ರಹಗಳ ವಿಸರ್ಜನೆ ಮಾಡಬಾರದು. ಬಣ್ಣ ಮತ್ತು ರಸಾಯನ ಲೇಪಿತ ಮೂರ್ತಿಗಳನ್ನು ವಿಸರ್ಜನೆ ಮಾಡಿದಾಗ ಕೆರೆ ಮತ್ತು ಬಾವಿಯ ನೀರಿನಲ್ಲಿರುವ ಜೀವರಾಶಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ ಕೃತಕ ಹೊಂಡಗಳಲ್ಲಿಯೇ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಿ ಪರಿಸರ ಸಂರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಾರ್ಡವಾತು ನಿಯೋಜನೆ ಮಾಡಲಾಗಿರುವ ಆರೋಗ್ಯ ನಿರೀಕ್ಷಕರ ಮಾಹಿತಿ ಪಡೆದು ಅವರಿಗೆ ಕರೆ ಮಾಡಿ ಹೆಚ್ಚಿನ ವಿವರ ತಿಳಿಯಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ
ಸಂಚಾರಿ ಗಣೇಶ ಮೂರ್ತಿ ವಿಸರ್ಜನೆ ವಾಹನ ಚಾಲಕರ ಮೊಬೈಲ್ ಸಂಖ್ಯೆಯನ್ನು ಸಹ ನೀಡಲಾಗಿದೆ ಎಂದು ಅವರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ.ದಾನಮ್ಮನವರ ತಿಳಿಸಿದ್ದಾರೆ.