ವಿಜಯಪುರ: ತುಂಬು ಸಂಸಾರ ನಡೆಸಿದ ದಂಪತಿ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ಬಸವನಾಡು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಸಾವಿಗೀಡಾದ ದಂಪತಿಯನ್ನು ದುಂಡವ್ವ ದೇವೇಂದ್ರ ವಳಸಂಗ(90) ಮತ್ತು ದೇವೇಂದ್ರ ಶಾಮರಾಯ ವಳಸಂಗ(106) ಎಂದು ಗುರುತಿಸಲಾಗಿದೆ.
ದುಂಡವ್ವ ದೇವೇಂದ್ರ ವಳಸಂಗ ಕಳೆದ ಎರಡು ದಿನಗಳ ಹಿಂದೆ ಸ್ವಲ್ಪ ಅಸ್ವಸ್ಥರಾಗಿದ್ದರು. ತಿಕೋಟಾದಲ್ಲಿ ಚಿಕಿತ್ಸೆಯ ನಂತರ ಅವರನ್ನು ಸೋಮದೇವರಹಟ್ಟಿ ಗ್ರಾಮದ ತೋಟದ ವಸ್ತಿಗೆ ಕರೆತರಲಾಗಿತ್ತು.
ಬೆ. 8. 30ಕ್ಕೆ ದುಂಡವ್ವ ಕೊನೆಯುಸಿರೆಳೆದಿದ್ದಾರೆ. ಪತ್ನಿ ಸಾವಿನ ಸುದ್ದಿ ತಿಳಿದ ಶತಾಯುಷಿ ಪತಿ ದೇವೇಂದ್ರ ಕೂಡ ಅಘಾತಕ್ಕೊಳಗಾಗಿದ್ದಾರೆ. ಅಲ್ಲದೇ, ಬೆ. 10ರ ಸುಮಾರಿಗೆ ಪತಿ ದೇವೇಂದ್ರ ಕೂಡ ಕೊನೆಯುಸಿರೆಳೆದಿದ್ದಾರೆ.
ಈ ಸುದ್ದಿ ಗ್ರಾಮಸ್ಥರು ಮತ್ತು ಸಂಬಂಧಿಕರಲ್ಲಿ ದಿಗ್ಭ್ರಮೆ ಮೂಡಿಸಿದೆ. ತೀಟದ ವಸ್ತಿಗೆ ತೆರಳಿದ ಸಾವಿರಾರು ಜನರು ಸತಿಪತಿಯ ಅಂತಿಮ ದರ್ಶನ ಪಡೆದರು. ತೋಟದ ಆವರಣದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.
ಕಳೆದ ಕೆಲವು ತಿಂಗಳ ಹಿಂದೆ ಇವರ ಮಕ್ಜಳು ಮತ್ತು ಮೊಮ್ಮಕ್ಕಳು ಸೇರಿಕೊಂಡು ಮರಿಮೊಮ್ಮಕ್ಜಳನ್ನು ಕಾಣುವ ಸೌಭಾಗ್ಯ ಹೊಂದಿದ್ದ ದುಂಡವ್ವ ಮತ್ತು ದೇವೇಂದ್ರ ವಳಸಂಗ ದಂಪತಿಗೆ ಬಂಗಾರದ ಹೂವು ಹಾರಿಸುವ ಕಾರ್ಯಕ್ರಮ ಆಯೋಜಿದ್ದರು.
ಅಂದಹಾಗೆ, ಈ ದುಂಡವ್ವ ದೇವೇಂದ್ರ ವಳಸಂಗ ಮತ್ತು ದೇವೇಂದ್ರ ಶ್ಯಾಮರಾಯ ವಳಸಂಗ ದಂಪತಿ ಐದು ಜನ ಪುತ್ರರು, ಮೂರು ಜನ ಪುತ್ರಿಯರು, 24 ಜನ ಮೊಮ್ಮಕ್ಕಳು ಹಾಗೂ 16 ಜನ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.