ವಿಜಯಪುರ: ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಧಾಳಿ ನಡೆಸಿ 980 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಂಗಾಪುರ ಕ್ರಾಸ್ ಬಳಿ ನಡೆದಿದೆ.
ಪತಸಪ್ಪ ಚನ್ನಪ್ಪ ಸಿಂಗೆ ಎಂಬಾತ ತನ್ನ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ ಒಣ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆ ಈ ಧಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ 980 ಗ್ರಾಂ ಒಣ ಗಾಂಜಾ ಮತ್ತು ದ್ವಿಚಕ್ರ ವಾಹನ ವಶಪಡಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಒಣ ಗಾಂಜಾ ಮತ್ತು ದ್ವಿಚಕ್ರ ವಾಹನದ ಮೌಲ್ಯ ರೂ. 1 ಲಕ್ಷ ಎಂದು ಅಂದಾಜಿಸಲಾಗಿದೆ.
ಬೆಳಗಾವಿ ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ ಮತ್ತು ವಿಜಯಪುರ ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಉಪ ಅಧೀಕ್ಷಕ ಎಲ್. ಎಸ್. ಸಲಗರೆ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಇನ್ಸಪೆಕ್ಟರ್ ಮಹಾದೇವ ಪೂಜಾರಿ ನೇತೃತ್ವದ ತಂಡ ಈ ಧಾಳಿ ನಡೆಸಿದೆ.
ಈ ಧಾಳಿಯಲ್ಲಿ ಅಬಕಾರಿ ಇಲಾಖೆ ಪೇದೆಗಳಾದ ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ ಮತ್ತು ವಾಹನ ಚಾಲಕ ಪರಶುರಾಮ ತೆಲಗಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.