ವಿಜಯಪುರ: 10ಕ್ಕೂ ಹೆಚ್ಚು ಪತ್ರಿಕಾ ವಿತರಕರನ್ನು ಸನ್ಮಾನಿಸುವ ಮೂಲಕ ನಗರದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಜಯಪುರ ನಗರದಲ್ಲಿ ನಗರದಲ್ಲಿ ಹೊಸ ಪತ್ರಿಕಾ ಬವನದಲ್ಲಿ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸರಳ ಸಮಾರಂಭದಲ್ಲಿ 10ಕ್ಕೂ ಅಧಿಕ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಪತ್ರಿಕಾ ವಿತರಕರ ಕಾಯಕಕ್ಕೆ ಉತ್ತೇಜನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪತ್ರಿಕಾ ವಿತರಕರು ಆಯಾ ಪತ್ರಿಕೆಗಳ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾದಂಥ ಸಂಕಷ್ಟ ಸಮಯದಲ್ಲಿ ಲಾಕಡೌನ್ ಸಂದರ್ಭದಲ್ಲಿಯೂ ಆತಂಕವನ್ನು ಮೆಟ್ಟಿ ನಿಂತು ಮನೆ, ಮನೆಗೂ ಪತ್ರಿಕೆಗಳನ್ಬು ವಿತರಿಸುವ ಮೂಲಕ ಕೊರೊನಾ ವಾರಿಯರ್ಸ್‌ಗಳಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ ಎಂದು ಹೇಳಿದರು.
ವಿಜಯ ಕರ್ನಾಟಕ ದಿನಪತ್ರಿಕೆ ಪ್ರಸಾರಾಂಗ ವ್ಯವಸ್ಥಾಪಕ ರಮೇಶ ವಿಟ್ಲಾಪುರ ಮಾತನಾಡಿ, ಹಲವಾರು ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕಾ ವಿತರಕರು ಎದುರಿಸುತ್ತಿರುವ ತಾಪತ್ರಯಗಳಿಗೆ ಲೆಕ್ಕವಿಲ್ಲ. ಆದರೆ ಅವುಗಳನ್ನೆಲ್ಲ ಮೆಟ್ಟಿ ನಿಂತು ಜನರಿನ್ನೂ ನಿದ್ರೆಯ ಮಂಪರಿನಲ್ಲಿದ್ದಾಗಲೇ ಅವರ ಮನೆಗೆ ಪತ್ರಿಕೆ ತಲುಪಿಸುವ ಕಾರ್ಯ ಶ್ರೇಷ್ಠವಾದುದು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತ ಕೌಶಲ್ಯಾ ಪನಾಳಕರ ಮಾತನಾಡಿ, ಪತ್ರಿಕೆಯೊಂದರ ಸಂಪಾದಕಿಯಾಗಿರುವ ತಮಗೆ ಪತ್ರಿಕಾ ವಿತರಕರ ಕಷ್ಟ-ಕಾರ್ಪಣ್ಯಗಳ ಸಂಪೂರ್ಣ ಅರಿವಿದೆ. ಆದರೂ ಧೃತಿಗೆಡದೇ ಪ್ರತಿದಿನ ಪತ್ರಿಕೆಗಳನ್ನು ತಲುಪಿಸುವ ವಿತರಕರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ವಿಜಯವಾಣಿ ಪತ್ರಿಕೆ ಪ್ರಸಾರಾಂಗ ವಿಭಾಗದ ಈರಣ್ಣ ಅವಟಿ, ಪ್ರಜಾವಾಣಿ ಪ್ರಸಾರಂಗ ವಿಭಾಗದ ಬಸವರಾಜ, ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಬು ಮಂಗಾನವರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯನಿರಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿಗ ರಾಹುಲ ಆಪ್ಟೆ, ದೀಪಕ ಶಿಂತ್ರೆ, ಸಂಘದ ಸದಸ್ಯ ಸಂಜು ಅಕ್ಕಿ, ವಿತರಕರಾದ ಗಣೇಶ ರುದ್ರಘಂಟಿ, ದಯಾನಂದ ಶಿರಶ್ಯಾಡ, ಶಿವಾನಂದ ಹೂಗಾರ, ಸುರೇಶ ಬೂದಿಹಾಳ, ನಾಗರಾಜ ಅವಜಿ, ಭೀಮು ವಳಸಂಗ, ಮಲ್ಲಿಕಾರ್ಜುನ ಹಳ್ಳದ ಮುಂತಾದವರು ಉಪಸ್ಥಿತರಿದ್ದರು.