ಮಹೇಶ ವಿ. ಶಟಗಾರ
ವಿಜಯಪುರ: ಸತತವಾಗಿ ಎರಡು ವರ್ಷ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿದ್ದ ಬಸವ ನಾಡು ವಿಜಯಪುರ ಜಿಲ್ಲಾಸ್ಪತ್ರೆಗೆ ಈಗ ಕೇಂದ್ರ ಸರಕಾರದಿಂದ ಮತ್ತೋಂದು ಗೌರವ ಪ್ರಾಪ್ತವಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಾರಿ ರಾಜ್ಯದಲ್ಲಿ ಜಿಲ್ಲಾಸ್ಪತ್ರೆ ವಿಭಾಗದಲ್ಲಿ ನಾನಾ ಅಂಶಗಳನ್ನು ಪರಿಗಣಿಸಿ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ(NQAS) ಪ್ರಶಸ್ತಿ ಪ್ರಕಟಿಸಿದೆ. ಈ ವಿಭಾಗದಲ್ಲಿ ಗೌರವಕ್ಕೆ ಪಾತ್ರವಾದ ಏಕೈಕ ಆಸ್ಪತ್ರೆ ಇದಾಗಿದೆ.
ಕಳೆದ ಜೂ. 22 ಮತ್ತು 23ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಜಿಲ್ಲಾಪತ್ರೆಯಲ್ಲಿ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿತ್ತು.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ಸ್ವಚ್ಛತೆ, ರೋಗಿಗಳ ನೋಂದಣಿ ವ್ಯವಸ್ಥೆ, ರೋಗಿಗಳ ರೋಗಗಳ ಮಾಹಿತಿ ದತ್ತಾಂಶ ಮತ್ತು ಮಾಹಿತಿ ನಿರ್ವಹಣೆ, ವೈದ್ಯರು ಮತ್ತು ದಾದಿಯರು ಹಾಗೂ ಇತರ ಸಿಬ್ಬಂದಿಯ ಸೇವೆ, ಪ್ರಯೋಗಾಲಯಗಳು, ಶೌಚಾಲಯ ವ್ಯವಸ್ಥೆ, ಚಿಕಿತ್ಸೆ ಕೊಠಡಿ, ವಾರ್ಡುಗಳ ಮಾಹಿತಿ ನಕ್ಷೆ, ಚಿಕಿತ್ಸೆ ಪಡೆದ ರೋಗಿಗಳಿಂದ ಅಭಿಪ್ರಾಯವನ್ನು ಕೇಂದ್ರ ಅಧಿಕಾರಿಗಳ ತಂಡ ಸಂಗ್ರಹಿಸಿತ್ತು.
ನಂತರ ಬೆಂಗಳೂರಿಗೆ ತೆರಳಿದ ಈ ತಂಡ ರಾಜ್ಯ ಇತರ ಜಿಲ್ಲಾಸ್ಪತ್ರೆಗಳ ಮಾಹಿತಿಯನ್ನೂ ಸಂಗ್ರಹಿಸಿತ್ತು. ಅಲ್ಲದೇ, ಈ ಪ್ರಶಸ್ತಿಗೆ ಅಗತ್ಯವಾಗಿರುವ ಮಾನದಂಡಗಳನ್ನು ಪರಿಗಣಿಸಿ ವಿಜಯಪುರ ಜಿಲ್ಲಾಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ರಾಜ್ಯದಲ್ಲಿ ಜಿಲ್ಲಾಸ್ಪತ್ರೆಗಳ ವಿಭಾಗದಲ್ಲಿ ವಿಜಯಪು ಮಾತ್ತ ಆಯ್ಕೆಯಾಗಿದ್ದು, ನಾನಾ ಮಾನದಂಡಗಳನ್ನು ಕ್ರೂಢೀಕರಿಸಿ ಕೇಂದ್ರ ನಿಗದಿಪಡಿಸಿದ ಒಟ್ಟು 100ರಲ್ಲಿ ಶೇ. 97 ರಷ್ಟು ಅಂಕಗಳನ್ನು ಪಡೆಯುವ ಮೂಲಕ ವಿಜಯಪುರ ಜಿಲ್ಲಾಸ್ಪತ್ರೆಯ ಸೇವೆ ಸದ್ದು ಮಾಡಿ ಮತ್ತೊಮ್ಮೆ ಕರ್ನಾಟಕವಷ್ಟೇ ಅಲ್ಲ, ಈಗ ದೇಶಾದ್ಯಂತ ಗಮನ ಸೆಳೆದಿದೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(HIMS)ಗೆ ವೈದ್ಯಕೀಯ ಸಂಸ್ಥೆಗಳ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದ್ದು, ಈ ಸಂಸ್ಥೆ ಶೇ. 95 ಅಂಕಗಳನ್ಬು ಪಡೆದಿದೆ
ಇನ್ನು ಸಮುದಾಯ ಆರೋಗ್ಯ ಕೇಂದ್ರಗಳ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಬೆತಮಂಗಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಲಭಿಸಿದ್ದು ಈ ಆಸ್ಪತ್ರೆ ಶೇಕಡ 79.26 ರಷ್ಟು ಅಂಕಗಳನ್ನು ನೀಡಿ ಷರತ್ತುಗಳಿಗೆ ಒಳಪಡಿಸಿ ರಾಜ್ಯದ ಅತ್ಯುತ್ತಮ ಸಮುದಾಯ ಆರೋಗ್ಯ ಕೇಂದ್ರ ಪ್ರಶಸ್ತಿ ಪ್ರಕಟಿಸಿದೆ.
ಜಿಲ್ಲಾ ಶಸ್ತ್ರಚಿಕತ್ಸಕರ ಸಂತಸ
ವಿಜಯಪುರ ಜಿಲ್ಲಾಪತ್ರೆಗೆ ಉತ್ತಮ ಸೇವೆಗಾಗಿ ಕೇಂದ್ರ ಸರಕಾರ ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯ ವೈದ್ಯರು,ಸಿಬ್ಬಂದಿ ಮತ್ತು ಇಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಹಕಾರದಿಂದಾಗಿ ಈ ಗೌರವ ಲಭಿಸಿದೆ ಎಂದು ಡಾ. ಎಸ್. ಎಲ್. ಲಕ್ಕಣ್ಣವರ ಬಸವ ನಾಡು ವೆಬ್ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಅತೀ ಶೀಘ್ರದಲ್ಲಿ ಕೇಂದ್ರ ಸರಕಾರ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲಿದೆ. ಅಲ್ಲದೇ, ಇದರಿಂದಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಅನುದಾನ ಕೂಡ ಲಭ್ಯವಾಗುವ ನಿರೀಕ್ಷೆಯಿದೆ.
ವಿಜಯಪುರ ಜಿಲ್ಲಾಸ್ಪತ್ರೆಯ ಎಲ್ಲ ಸಿಬ್ನಂದಿಗೆ ಬಸವ ನಾಡು ಕೂಡ ಶುಭಾಷಯಗಳನ್ನು ಕೋರಿದೆ.