CM Yatnal: ಸೆ. 9 ರಂದು ವಿಜಯಪುರಕ್ಕೆ ಸಿಎಂ ಭೇಟಿ- ಸುಮಾರು ರೂ. 465 ಕೋ. ವೆಚ್ಚದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ- ಯತ್ನಾಳ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ. 9 ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದು, ವಿಜಯಪುರ ನಗರ ವಿಧಾನ ಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರೂ. 4.65 ಕೋ. ವೆಚ್ಚದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 9 ರಂದು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಲಿದ್ದಾರೆ.  ಅಲ್ಲದೇ, ಆಲಮಟ್ಟಿಯಲ್ಲಿಯೇ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ(ಕೆಬಿಜೆಎನ್‌ಎಲ್)ದ ನೂತನ ಪ್ರವಾಸಿ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಆಲಮಟ್ಟಿಯಿಂದ ವಿಜಯಪುರ ನಗರದ ಸೈನಿಕ ಶಾಲೆಗೆ ಆಗಮಿಸಲಿರುವ ಅವರು, ಅಲ್ಲಿ ಹಾಕಿ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.  ನಂತರ ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರ ಪಕ್ಕದಲ್ಲಿ ಸ್ವಸ್ತಿಕ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ನಿಸರ್ಗ ಸ್ನೇಹಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.  ಅಲ್ಲದೇ, ಸುಮಾರು ರೂ. 465 ಕೋ. ವೆಚ್ಚದಲ್ಲಿ ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ನಾನಾ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಸಾರ್ವಜನಿಕ ಸಭೆ ಕೂಡ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧಿ ಭವನ, ಸಮಾಜ ಕಲ್ಯಾಣ ಇಲಾಖೆಯ ಡಾ. ಬಾಬು ಜಗಜೀವನರಾಮ ಭವನ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಮತ್ತು ಮಹಿಳಾ ವಸ್ತು ಸಂಗ್ರಹಾಲಯ ಕಟ್ಟಡ ನಿರ್ಮಾಣ ಕಾಮಗಾರಿ, ವಿಜಯಪುರ ತಾಲೂಕು ಪಂಚಾಯಿತಿಯ ತಾ. ಪಂ. ವಾಣಿಜ್ಯ ಸಂಕೀರ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯಪುರ ನಗರದ ಸರಕಾರಿ ವೀಕ್ಷಣಾಲಯದ ಹೊಸ ಕಚೇರಿ ಕಟ್ಟಡ, ಉಪನಿರ್ದೇಶಕರ ಕಚೇರಿಯ ಮೊದಲನೇ ಮಹಡಿ ಕಟ್ಟಡ ಮತ್ತು ಲೋಕೋಪಯೋಗಿ ಇಲಾಖೆಯ ಪ್ರಗತಿಯಲ್ಲಿರುವ 11 ನಾನಾ ಕಾಮಗಾರಿಗಳು ಸೇರಿದಂತೆ ಇತರ ಇಲಾಖೆಗಳಿಂದ ಉದ್ಘಾಟನೆಗೆ ಸಿದ್ಧವಿರುವ ನಾನಾ ಕಟ್ಟಡ ಮತ್ತು ನಾನಾ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ಯತ್ನಾಳ ಮಾಹಿತಿ ನೀಡಿದರು.

ವಿಜಯಪುರ ನಗರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಸಹಕಾರ ಸಿಕ್ಕಿದೆ.  ವಿಜಯಪುರ ಜಿಲ್ಲೆಗೆ ಮತ್ತೊಂದು ವೈದ್ಯಕೀಯ ಕಾಲೇಜು ಹಾಗೂ ಮತ್ತೊಂದು ಜಿಲ್ಲಾ ಕ್ರೀಡಾಂಗಣ ನಿರ್ಮಾಣ, ಕಿತ್ತೂರ ರಾಣಿ ಚೆನ್ನಮ್ಮ ನಾಟ್ಯ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.  ನಗರದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಶ್ರಮಿಸಲಾಗುವುದು.  ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರರ ವಿಮಾನ ನಿಲ್ದಾಣ ಎಂದು, ನಗರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರ ಚೆನ್ನಮ್ಮ ಬಸ್ ನಿಲ್ದಾಣ, ಸೆಟಲೈಟ್ ಬಸ್ ನಿಲ್ದಾಣಕ್ಕೆ ಛತ್ರಪತಿ ಶ್ರೀ ಶಿವಾಜಿ ಮಹಾರಾಜ ಎಂದು ನಾಮಕರಣ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ವಿಜಯಪುರ ನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ರಿಂಗ್ ರೋಡ್ ನಿರ್ಮಾಣಕ್ಕಾಗಿ ಅನುದಾನ ಸಂಬಂಧ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ.  ನಗರದಲ್ಲಿನ 32 ಪ್ರಮುಖ ರಸ್ತೆಗಳಿಗೆ ಮಹಾತ್ಮರ ಹೆಸರನ್ನಿಡಲು ಅನುಮೋದನೆ ಸಿಕ್ಕಿದೆ.  ವಿಜಯಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಸ್ತೆ ನಾಮಕರಣ ಘೋಷಣೆ ಮಾಡಲಿದ್ದಾರೆ.  ವಿಜಯಪುರ ಜಿಲ್ಲೆಯ ಶ್ರೀ ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ಧಸಿರಿ ಸಂಸ್ಥೆಗಳೆರಡೂ ಜನಮುಖಿ ಕಾರ್ಯ ಮಾಡುತ್ತ ನಾಡಿನಾದ್ಯಂತ ಹೆಸರು ಮಾಡಿವೆ ಎಂದು ಬಸನಗೌಡ ಪಾಟೀಲ ಯತ್ನಾಳ ಎರಡೂ ಸಂಸ್ಥೆಗಳ ನಾನಾ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಈ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಜಾಧವ, ರಾಘವ ಅಣ್ಣಿಗೇರಿ, ಪರಶುರಾಮ ರಜಪೂತ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌