ವಿಜಯಪುರ: ಆಟಗಳಲ್ಲಿ ಸೋಲು-ಗೆಲುವಿಗಿಂತ ಪಾಲ್ಗೋಳ್ಳುವಿಕೆ ಮುಖ್ಯವಾಗಿದೆ ಎಂದು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಬಜಾರ ಸರ್ಕಲ್ ನಲ್ಲಿರುವ ಶ್ರೀ ಗಜಾನನ ತರುಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಸಲಾಗಿದ್ದ ಹೊನಲು ಬೆಳಕಿನ ಆಹ್ವಾನಿತ ಮಹಿಳಾ ಮತ್ತು ಪುರುಷರ ಅಂತಾರಾಜ್ಯ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿ ಉದ್ಗಾಟಿಸಿ ಅವರು ಮಾತನಾಡಿದರು.
ಶ್ರೀ ಗಜಾನನ ತರುಣ ಮಂಡಳಿ ಸತತ 50 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಇದಕ್ಕಾಗಿ ಮಂಡಳಿಯ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ಈ ಮಂಡಳಿಯವರು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಕಲೆಗಳು ಮತ್ತು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತಿದ್ದು, ಈ ವರ್ಷ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಸಂಘಟಿಸುವ ಮೂಲಕ ಕರ್ನಾಟಕವಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದಲೂ ಕ್ರೀಡಾಪಟುಗಳು ಬಬಲೇಶ್ವರ ಪಟ್ಟಣಕ್ಕೆ ಆಗಮಿಸಿದ್ದು, ಈ ಊರಿನ ಛಾಪು ಎಲ್ಲೆಡೆ ಮೂಡಿಸುವಂತಾಗಿದೆ ಎಂದು ಹೇಳಿದರು.
ಆಟಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆದರೆ, ಕ್ರೀಡೆಯಲ್ಲಿ ಪಾಲ್ಗೋಳ್ಳುವುದು ಮುಖ್ಯವಾಗಿದೆ. ಸೌಹಾರ್ದತೆಯಿಂದ ಮತ್ತು ಕ್ರೀಡಾಸ್ಪೂರ್ತಿಯಿಂದ ಉತ್ತಮ ಪ್ರದರ್ಶನ ತೋರಬೇಕು. ಈ ಮೂಲಕ ಕ್ರೀಡಾಕೂಟ ಸಂಘಟಕರಿಗೂ ಹೆಮ್ಮೆ ತರುವಂಥ ಕೆಲಸ ಮಾಡಬೇಕು ಎಂದು ಕ್ರೀಡಾಪಟುಗಳಿಗೆ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು.
ವಿಜಯಪುರ ಜಿ. ಪಂಚಾಯಿತಿ ಮಾಜಿ ಅಧ್ಯಕ್ಷ ವೀರನಗೌಡ ಎಸ್. ಪಾಟೀಲ ಮಾತನಾಡಿ, ಬಬಲೇಶ್ವರ ಪಟ್ಟಣಕ್ಕೆ ಅದರದೇ ಆದ ಇತಿಹಾಸವಿದೆ. ಕಬ್ಬಡ್ಡಿ ಮತ್ತು ಜಾನಪದ ಕಲೆಗೆ ಗ್ರಾಮೀಣ ಕ್ರೀಡೆಗಳಲ್ಲಿ ಇಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಕಾರ್ಯಕ್ರಮ ಆಯೋಜಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಆಲಗೂರ ವೀರಶೈವ ಪಂಚಮಸಾಲಿ ಗುರುಪೀಠದ ಪೀಠಾಧಿಪತಿ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಎಲ್ಲ ಕ್ರೀಡಾಪಟುಗಳು, ಸಾರ್ವಜನಿಕರು ಮತ್ತು ರೈತ ಬಾಂಧವರಿಗೆ ಶುಭ ಕೋರಿದರು.
ಗ್ರಾಮದ ಮುಖಂಡ ಶಂಕರಗೌಡ ಪಾಟೀಲ ಕ್ರೀಡಾಂಗಣದ ಪೂಜೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಗಿರೀಶ ಕುಲಕರ್ಣಿ, ಬಿ. ಜಿ. ಬಿರಾದಾರ, ಸಂಜೀವಗೌಡ ಪಾಟೀಲ, ಸುರೇಶಗೌಡ ಬಿರಾದಾರ, ಮಲ್ಲಿಕಾರ್ಜುನ ಕನ್ನೂರ, ಭೀಮಸೇನ್ ಕೋಕರೆ, ಶಿವನಗೌಡ ಪಾಟೀಲ, ಆನಂದ ಬೂದಿಹಾಳ, ಮಲ್ಲಿಕಾರ್ಜುನ ಕಲಾದಗಿ, ಈರಣ್ಣ ಸಿರಮಗೊಂಡ, ಬಸವರಾಜ ಕುರುವಿನಶೆಟ್ಟಿ, ಡಾ. ಎಂ. ಬಿ. ಬಿರಾದಾರ, ಅನುಸೂಯ ಬಸವರಾಜ ಕನಾಳ, ಸಂಗಮೇಶ ಪಡಗಾರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುರೇಶ ಗೌಡಪ್ಪಗೋಳ ಕಾರ್ಯಕ್ರಮ ನಿರೂಪಿಸಿದರು.