Agri CEO: ಕೃಷಿ ಯಂತ್ರೋಪಕರಣ ಘಟಕಗಳ ಫಲಾನುಭವಿಗಳೊಂದಿಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಚರ್ಚೆ- ಸೂರ್ಯಕಾಂತಿ ಬೆಳೆ ಪ್ರಾತ್ಯಕ್ಷಿಕೆ ಪರಿಶೀಲನೆ

ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಕೃಷಿ ಜಂಟಿ ನಿರ್ದೇಶಕ ಕಚೇರಿಗೆ ಭೇಟಿ ನೀಡಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೃಷಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ರೂಪ ಎಲ್. ಅವರು ಜಿಲ್ಲೆಯ ಮಳೆ ಹಾಗೂ ಬೆಳೆ ಪರಿಸ್ಥಿತಿ, ಬೆಳೆ ಹಾನಿ, ಬಿತ್ತನೆ ಬೀಜ ವಿತರಣೆ, ರಸಗೊಬ್ಬರ ಪೂರೈಕೆಯ ಮಾಹಿತಿ ನೀಡಿದರು.

ಜಿ. ಪಂ. ಸಿಇಓ ರಾಹುಲ್ ಶಿಂಧೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಸಿಇಓ ಅವರು, ಗುಣಮಟ್ಟದ ರಸಗೊಬ್ಬರವನ್ನು ಸಕಾಲದಲ್ಲಿ ರೈತರಿಗೆ ಸರಬರಾಜು ಆಗುವಂತೆ ಮತ್ತು ನಿಗದಿತ ದರದಲ್ಲಿ ಮಾರಾಟವಾಗುವಂತೆ ಕ್ರಮವಹಿಸಲು ನಿರ್ದೇಶನ ನೀಡಿದರು.

ಕೃಷಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ನಾನಾ ಯೋಜನೆಗಳ ಕುರಿತು ಇದೆ ವೇಳೆ ಪ್ರಗತಿ ಪರಿಶೀಲನೆ ನೆಡೆಸಿದ ಸಿಇಓ ಅವರು, ನೂತನ ತಾಂತ್ರಿಕತೆಗಳನ್ನು ರೈತರಿಗೆ ಪರಿಚಯಿಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ಬೆಳೆ ವಿಮೆ ಯೋಜನೆಯ ಪ್ರಗತಿ ಪರಿಶೀಲಿಸಿ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿಯಾಗಲು ಹೆಚ್ಚಿನ ಪ್ರಚಾರ ನೀಡುವಂತೆ ಮತ್ತು ಇತ್ತೀಚಿನ ಅತಿವೃಷ್ಟಿ ಹಾಗು ಪ್ರವಾಹದಿಂದ ಬಾಧಿತವಾದ ಫಲಾನುಭವಿಗಳಿಗೆ ಕೂಡಲೇ ಬೆಳೆ ವಿಮೆ ಪರಿಹಾರ ಒದಗಿಸಬೇಕು ಎಂದು ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಐನಾಪುರ ಗ್ರಾಮದಲ್ಲಿ ಕೃಷಿ ಯಂತ್ರೋಪಕರಣ ಘಟಕಗಳ ಫಲಾನುಭವಿಗಳ ಜೊತೆ ಚರ್ಚೆ

ಸಭೆಯ ಬಳಿಕ ವಿಜಯಪುರ ತಾಲೂಕಿನ ಮಧಬಾವಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ

ಯೋಜನೆಯಲ್ಲಿ ಸೂರ್ಯಕಾಂತಿ ಬೆಳೆಯಲ್ಲಿ ಕೈಗೊಳ್ಳಲಾದ ಪ್ರಾತ್ಯಕ್ಷಿಕೆಯನ್ನು ಸಿಇಓ ಪರಿಶೀಲಿಸಿದರು.  ಅಲ್ಲದೇ, ಫಲಾನುಭವಿಗಳೊಂದಿಗೆ ಚರ್ಚಿಸಿ, ನೂತನ ತಾಂತ್ರಿಕತೆ ಅಳವಡಿಕೆಯ ಕುರಿತು ಸಂತಸ ವ್ಯಕ್ತಪಡಿಸಿದರು.  ಗ್ರಾಮದಲ್ಲಿ ಇಲಾಖೆ ಸಹಾಯಧನದ ಅಡಿಯಲ್ಲಿ ಪಡೆದ ಲಘು ನೀರಾವರಿ ಮತ್ತು ಕೃಷಿ ಯಂತ್ರೋಪಕರಣ ಘಟಕಗಳ ಫಲಾನುಭವಿಗಳೊಂದಿಗೆ ಚರ್ಚೆ ನಡೆಸಿದರು.

ವಿಜಯಪುರ ನಗರದಲ್ಲಿ ಪಿಎಂಎಫ್ಎಂಈ. ಯೋಜನೆಯಡಿ ಹೊಸದಾಗಿ ಸ್ಥಾಪಿಸಲಾದ ಸುಜಯ್ ಆಯಿಲ್ ಇಂಡಸ್ಟ್ರಿಯನ್ನು ಉದ್ಘಾಟಿಸಿ, ಫಲಾನುಭವಿಗಳೊಂದಿಗೆ ಚರ್ಚಿಸಿ, ನಾನಾ ಉಪಕರಣಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ವಿಜಯಪುರ ವಿಭಾಗದ ಉಪ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ, ಇಂಡಿ ವಿಭಾಗದ ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ತಾಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌