Temple Bridge Drown: ವಿಜಯಪುರ ಜಿಲ್ಲೆಯಲ್ಲಿ ಮಳೆಯ ಅವಾಂತರ- ಕಳ್ಳಕವಟಗಿಯಲ್ಲಿ ದೇವಸ್ಥಾನ ಜಲಾವೃತ- ಅಡವಿ ಹುಲಗಬಾಳ ಬಳಿ ಕೊಚ್ಚಿ ಹೋದ ಸೇತುವೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುಳಿದ ಭಾರಿ ಮಳೆಯಿಂದಾಗಿ ದೇವಸ್ಥಾನ ಮುಳುಗಡೆ ಮತ್ರು ಸೇತುವೆ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ.

ಜಿಲ್ಲೆಯ ಅಲ್ಲಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳೆದ ಹಲವಾರು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಮೋಡ ಮುಸುಕಿದ ವಾತಾವರಣ ಜಿಲ್ಲೆಯ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ.

ಕಳ್ಳಕವಟಗಿಯಲ್ಲಿ ಸಂಗಮನಾಥ ದೇವಸ್ಥಾನ ಜಲಾವೃತವಾಗಿರುವುದು

ಕಳ್ಳಕವಟಗಿ ಬಳಿ ದೇವಸ್ಥಾನ ಮುಳುಗಡೆ

ಈ ಮಧ್ಯೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾಗಿದೆ. ಈ ಭಾಗದಲ್ಲಿ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

ಕಳ್ಳಕವಟಗಿ ಗ್ರಾಮದ ಬಳಿ ಇರುವ ಸಂಗಮನಾಥ ಹಳ್ಳ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಹಳ್ಳದ ನೀರು ಸಂಗಮನಾಥ ದೇವವಸ್ಥಾನವನ್ನು ಜಲಾವೃತ ಮಾಡಿದೆ. ಸಂಗಮನಾಥ ಗುಡಿ ಭಾಗಶಃ ಮುಳುಗಡೆಯಾಗಿದ್ದು ಒಳಗಡೆ ಪ್ರವೇಶ ಮಾಡಲು ಕೂಡ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೂಜಾರಿಗಳು ಹೊರಗಡೆಯಿಂದಲೇ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಗೂ ನೀರು ಹೊಕ್ಕಿದೆ.

ಕಳ್ಳಕವಟಗಿ ಸಂಗಮನಾಥ ದೇವಸ್ಥಾನದ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿರುವುದು

ಅಷ್ಟೇ ಅಲ್ಲ ಕಳ್ಳಕವಟಗಿಯಿಂದ ಘೊಣಸಗಿ ಮತ್ತು ಹುಬನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೂ ಹಳ್ಳದ ನೀರು ಹರಿಯುತ್ತಿದೆ.

ಆದರೂ ಇದೇ ರಸ್ತೆಯ ಮೂಲಕ ಗ್ರಾಮಸ್ಥರು ನಡೆದುಕೊಂಡು ಮತ್ತು ನಾನಾ ವಾಹನಗಳ ಮೇಲೆ ಸಂಚಾರ ಮಾಡುತ್ತ ಹಳ್ಳವನ್ನು ದಾಟುತ್ತಿದ್ದಾರೆ.

ಅಡವಿ ಹುಲಗಬಾಳ ಬಳಿ ಕೊಚ್ಚಿಹೋದ ಸೇತುವೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿಯೂ‌ ಮಳೆಯ ಅಬ್ಬರ ಜೋರಾಗಿದೆ. ಅಡವಿ ಹುಲಗಬಾಳ ಗ್ರಾಮದ ಹಳ್ಳ
ತುಂಬಿ ಹರಿಯುತ್ತಿದೆ. ಅಡವಿ ಹುಲಗಬಾಳ ಗ್ರಾಮದ ಹೊರ ಭಾಗದಲ್ಲಿರುವ ಹಳ್ಳದ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ. ಅಡವಿ ಹುಲಗಬಾಳ ಮತ್ತು ಅಡವಿ ಹುಲಗಬಾಳ ತಾಂಡಾ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ತಾಂಡಾ ಹಾಗೂ ಈ ಬದಿಯ ಗ್ರಾಮಸ್ಥರ ಪರದಾಡುವಂತಾಗಿದೆ.
ಸೇತುವೆ ಸಮೇತ ಹಳ್ಳದಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಪರಿಣಾಮ ಅಡವಿ ಹುಲಗಬಾಳ ತಾಂಡಾದ ಮಕ್ಕಳು ಮತ್ತು ಇತರರು ಅಡವಿ ಹುಲಗಬಾಳ ಗ್ರಾಮದಲ್ಲಿ ಸಿಲಿಕಿದ್ದಾರೆ.

ಅಡವಿ ಹುಲಗಬಾಳ ಬಳಿ ಸೇತುವೆ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿರುವುದು

ಅತ್ತ ಕಡೆಯ ಜಮೀನುಗಳಿಗೆ ಹೋಗಲು ಸಾದ್ಯವಾಗದೇ ಅಡವಿ ಹುಲಗಬಾಳ ಗ್ರಾಮದ ರೈತರ ಪರದಾಡುತ್ತಿದ್ದಾರೆ. ಕೂಡಲೇ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಬೇಕು ಎಂದಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಳಿಕೋಟೆ ಜನರಿಗೆ ಪರೂರಿಗೆ ಹೋಗಲು ಸಂಕಷ್ಟ

ಮತ್ತೊಂದೆಡೆ ತಾಳಿಕೋಟೆ ತಾಲೂಕಿನಲ್ಲಿಯೂ ಉತ್ತಮ ಮಳೆಯಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಡೋಣಿ ನದಿ ಮತ್ತು ಸೊಗಲಿ ಹಳ್ಳ ಕೂಡ ತುಂಬಿ ಹರಿಯುತ್ತಿದೆ. ಪರಿಣಾಮ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕ ಕಡಿತಗೊಂಡಿದ್ದು ಜನರು ಪರದಾಡುವಂತಾಗಿದೆ. ತಾಳಿಕೋಟೆ ವಿಜಯಪುರ ರಸ್ತೆಯಲ್ಲಿರುವ ಕೆಳಗಡೆ ಸೇತುವೆ ಡೋಣಿ ನದಿ ಪ್ರವಾದಲ್ಲಿ ಮುಳುಗಡೆಯಾಗಿದೆ. ಪರಿಣಾಮ ತಾಳಿಕೋಟೆ ಪಟ್ಟಣದಿಂದ ವಿಜಯಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಬಾಗಲಕೋಟೆ, ಹುಬ್ಬಳ್ಳಿ, ಇಳಕಲ್ ಸೇರಿದಂತೆ ಮಿಣಜಿಗೆ, ಮೂಕಿಹಾಳ, ಮಡಿಕೇಶ್ವರ, ಡವಳಗಿ, ಬಳಗಾನೂರ ಗ್ರಾಮಗಳಿಂದ ತಾಲೂಕು ಹಾಗೂ ಪ್ರಮುಖ ವಾಣಿಜ್ಯ ನಗರವಾದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಈ ಗ್ರಾಮಗಳಿಗೆ ಮತ್ತು ನಗರಗಳಿಗೆ ಸಂಚರಿಸಬೇಕಾದ ಪ್ರಯಾಣಿಕರು ಮತ್ತು ಸಾರ್ವಜನಿಕರು ಬೇರೆ ಮಾರ್ಗಗಳ ಮೂಲಕ ಹಲವಾರು ಕಿ. ಮೀ. ಸುತ್ತಿ ಬಳಸಿ ಸಂಚರಿಸುವಂತಾಗಿದೆ.

Leave a Reply

ಹೊಸ ಪೋಸ್ಟ್‌