ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಜಿಲ್ಲಾ ಆಯುಷ್ ಕಚೇರಿ ಮತ್ತು ಜಿಲ್ಲಾ ಆಯುಷ್ ಆಸ್ಪತ್ರೆಗೆ ದೀಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅವರು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆ ಮತ್ತು ಲಭ್ಯವಿರುವ ಸೌಕರ್ಯಗಳ ಬಗ್ಗೆ ಮತ್ತು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಅವರು ಆಸ್ಪತ್ರೆಯ ಒಳ ರೋಗಿಯ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಯುಷ್ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆ ಮತ್ತು ಸೌಕರ್ಯಗಳ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಆಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ದಿನನಿತ್ಯ ಬರುವ ರೋಗಿಗಳ ಸಂಖ್ಯೆ ಹಾಗೂ ಅವರಿಗೆ ನೀಡುವ ಚಿಕಿತ್ಸೆಗಳ ಬಗ್ಗೆ ಖುದ್ದಾಗಿ ಮಾಹಿತಿ ಪಡೆದರು. ಹೊರ ರೋಗಿಯ ವಿಭಾಗದಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು.
ಇದೆ ವೇಳೆ ಪಂಚ ಕರ್ಮ ವಿಭಾಗಕ್ಕೆ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪಂಚ ಕರ್ಮ ವಿಭಾಗಕ್ಕೆ ಬರುವ ರೋಗಿಗಳ ಸಂಖ್ಯೆ ಮತ್ತು ಚಿಕಿತ್ಸೆಗಳ ಕುರಿತು ಹಾಗೂ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಭೇಟಿ ನೀಡಿ ರೋಗಿಗಳಿಗೆ ದೊರೆಯುವ ಪರೀಕ್ಷೆ ಸೌಕರ್ಯಗಳ ಬಗ್ಗೆ ಕೂಡ ಮಾಹಿತಿ ಪಡೆದರು.
ಔಷಧ ವಿತರಣೆ ವಿಭಾಗಕ್ಕೆ ಸಹ ಭೇಟಿ ನೀಡಿ ಔಷಧಿ ಪರಿಶೀಲಿಸಿದ ರಾಹುಲ ಶಿಂಧೆ ಅವರು, ಯಾವ್ಯಾವ ರೋಗಿಗಳು ಚಿಕಿತ್ಸೆಗೆ ಹೆಚ್ಚಾಗಿ ಬರುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿರುವ ಕೋವಿಡ್-19 ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ 2022-2023ನೇ ವರ್ಷದ ಜಿ. ಪಂ. ಕ್ರಿಯಾ ಯೋಜನೆಯಲ್ಲಿರುವ ಕಚೇರಿ ಕಟ್ಟಡಕ್ಕಾಗಿ ಸ್ಥಳ ಪರಿಶೀಲನೆ, ಆಸ್ಪತ್ರೆಯಲ್ಲಿ ವಾಹನಗಳ ನಿಲುಗಡೆಗಾಗಿ ಸ್ಥಳ ಪರಿಶೀಲನೆ ಹಾಗೂ ರೋಗಿಗಳಿಗೆ ಕೂಡಲು ಮೂರು ಆಸನಗಳ ಸಿಮೆಂಟ್ ಕುರ್ಚಿಗಳ ಅವಶ್ಯಕತೆ ಬಗ್ಗೆ ವಿವರಣೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅನುರಾದ ಎಲ್. ಚಂಚಲಕರ, ವೈದ್ಯಾಧಿಕಾರಿಗಳಾದ ಡಾ. ದಯಾನಂದ ಮಾಳಬಾಗಿ, ಡಾ. ಶಶಿಕಾಂತ ಹೊಸಮನಿ, ಡಾ. ಸಂಜಯ ಜೀರ, ಡಾ. ಲೋಕನಾಥ ಅವಧಾನಿ, ಡಾ. ಆಸೀಫ್ ತಾಳಿಕೋಟಿ ಉಪಸ್ಥಿತರಿದ್ದರು.