ವಿಜಯಪುರ: ಗುಮ್ಮಟ ನಗರಿಯಲ್ಲಿ ಮುಸ್ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಬಿರುಸಿನಿಂದ ಸುರಿದ ಮಳೆಯಿಂದಾಗಿ ಸಂಜೆ ಸೂರ್ಯಾಸ್ತಕ್ಕೂ ಮುನ್ನವೇ ಭಾರಿ ಕತ್ತಲೆಯ ವಾತಾವರಣ ಉಂಟಾಗಿತ್ತು. ನಂತರ ಸುಮಾರು ಹೊತ್ತು ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳೆಲ್ಲವೂ ಹಳ್ಳಗಳಾಗಿ ಮಾರ್ಪಟ್ಟು ಧಾರಾಕಾರ ನೀರು ಹರಿಯುತ್ತಿತ್ತು. ಮತ್ತೋಂದೆಡೆ ತಗ್ಗು ಪ್ರದೇಶಗಳು ಹೊಂಡಗಳಾಗಿ ಮಾರ್ಪಟ್ಟಿದ್ದವು.
ಈ ಮಧ್ಯೆ, ಮನೆಗಳಿಗೆ ನೀರು ನುಗ್ಗಿದ ಪ್ರದೇಶವಾದ ಶಿಕಾರಖಾನೆ ಬಳಿಯ ಗಾಂಧಿನಗರ, ಕಾವಿಪ್ಲಾಟ್ ಸೇರಿದಂತೆ ನಾನಾ ಪ್ರದೇಶಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ತಹಸೀಲ್ದಾರ ಭೋಸಗಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮತ್ತೋಂದೆಡೆ ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗತ್ತಿ ಮತ್ತು ಸಿಬ್ಬಂದಿ ವಿಜಯಪುರ ನಗರದ ಶಹಾಪೇಟೆ ಮತ್ತು ಅಪ್ಸರಾ ಟಾಕೀಸ್ ಬಳಿ ತೆರಳಿ ಮಳೆ ನೀರಿನಿಂದ ಉಂಟಾಗಿರುವ ಹಾನಿಯನ್ನು ಪರಿಶೀಲನೆ ನಡೆಸಿದರು.