ವಿಜಯಪುರ: ನೀಟ್(NEET) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ವಿಜಯಪುರದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ, ವಿದ್ಯಾರ್ಥಿಗಳ ಒಳ್ಳೆಯ ಫಲಿತಾಂಶದ ಹಿಂದೆ ಸತತ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಇರುತ್ತದೆ. ಅವಕಾಶವಿದ್ದಾಗ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪಿಯು ಹಂತವು ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖವಾಗಿದೆ. ಜೀವನದ ಉನ್ನತ ಮಟ್ಟಕ್ಕೆ ಹೋಗುಲು ಹಲವಾರು ಅವಕಾಶಗಳಿದ್ದು, ಈ ಸಾಧನೆಗೆ 25 ವರ್ಷದ ವರೆಗೆ ಬ್ರಹ್ಮಚರ್ಯ ಪಾಲನೆ, ತಪಸ್ಸು, ಕಷ್ಟ ಸಾಧಕನಿಗೆ ಸಹಜವಾಗಿವೆ ಎಂದು ಹೇಳಿದರು.
ಶಾಂತಿನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ವೈಷ್ಣವಿ ಮಠಪತಿ(558 ಅಂಕ), ಸುದೀಪ ಬೊಮ್ಮನಹಳ್ಳಿ(523 ಅಂಕ) ಮತ್ತು ರುಚಿತಾ ಕಿರಣ ಶಿವಪೂಜಿ(480 ಅಂಕ) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಅಧ್ಯಕ್ಷೆ ಶೀಲಾ ಎಸ್. ಬಿರಾದಾರ, ನಿರ್ದೇಶಕ ಶರತ ಬಿರಾದಾರ, ಹಣಕಾಸು ಮತ್ತು ಕ್ವಾಲಿಟಿ ಡೆವಲಪ್ಮೆಂಟ್ ಅಧಿಕಾರಿ ಭರತ ಬಿರಾದಾರ, ಪ್ರಾಚಾರ್ಯ ಎಚ್. ಎಂ. ಕೋಲಾರ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.