Jammu Gold: ಜಮ್ಮುವಿನ ಯುವ ವೈದ್ಯನಿಗೆ ಒಲಿದು ಬಂದ ಆರು ಚಿನ್ನದ ಪದಕಗಳು- ಬಿ ಎಲ್ ಡಿ ಇ ಡೀಮ್ಡ್ ವಿವಿ ಘಟಿಕೋತ್ಸವದ ವಿಶೇಷ

ವಿಜಯಪುರ: ಆತ ಜಮ್ಮುವಿನ ಯುವಕ.  ತಂದೆ ಯೋಗೇಶ ಅರೊರಾ ಎನ್ ಜಿ ಓ ಒಂದರಲ್ಲಿ ಭದ್ರತಾ ವಿಭಾಗದ ಮುಖ್ಯ ಆಡಳಿತಾಧಿಕಾರಿ.  ತಾಯಿ ರೊಮಿಕಾ ಅರೊರಾ ಪ್ರಾಥಮಿಕ ಶಾಲೆಯ ಶಿಕ್ಷಕಿ.  ವೈದ್ಯನಾಗಬೇಕೆಂಬ ಈ ವಿದ್ಯಾರ್ಥಿಯ ಛಲ ಈಗ ಈಡೇರಿದ್ದಷ್ಟೇ, ಅಲ್ಲ, ಎಂಬಿಬಿಎಸ್ ಪದವಿಯೊಂದಿಗೆ ಆರು ಚಿನ್ನದ ಪದಕಗಳು ಈತನಿಗೆ ಬಯಸದೇ ಬಂದಿರುವುದು ವಿಶೇಷ.

ಈ ಯುವ ವೈದ್ಯನ ಹೆಸರು ಗೌರವ ಅರೊರಾ.  ಬಸವ ನಾಡು ವಿಜಯಪುರದಲ್ಲಿ ನಡೆದ ಪ್ರತಿಷ್ಠಿತ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಎಂಬಿಬಿಎಸ್ ವಿಭಾಗದಲ್ಲಿ ಒಟ್ಟು ಆರು ಚಿನ್ನದ ಪದಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.  ಈ ಕಾರ್ಯಕ್ರದಮಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಎಂ. ಬಿ. ಪಾಟೀಲ ಮತ್ತು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ವಿ. ವಿಜಯರಾಘವನ್ ಪದವಿ ಮತ್ತು ಚಿನ್ನದ ಪದಕ ಪ್ರದಾನ ಮಾಡಿದರು.

ಘಟಿಕೋತ್ಸವದ ಬಳಿಕ ಗಣ್ಯರೊಂದಿಗೆ ಗೌರವ ಅರೊರಾ

ಈ ಕುರಿತು ವಿಜಯ ಕರ್ನಾಟಕ ವೆಬ್ ಜೊತೆ ಸಂತಸ ಹಂಚಿಕೊಂಡಿರುವ ಅವರು, ಚಿನ್ನದ ಪದಕ ನಿರೀಕ್ಷಿಸಿದ್ದೆ.  ಆದರೆ, ಆರು ಚಿನ್ನದ ಪದಕ ಬರುತ್ತವೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂತಸ ಹಂಚಿಕೊಂಡಿರುವ ಅವರು, ತಮ್ಮ ಶೈಕ್ಷಣಿಕ ಪಯಣ ತುಂಬಾ ಚೆನ್ನಾಗಿತ್ತು. ಅವಧಿಯಲ್ಲಿ ವಿವಿ ಶಿಕ್ಷಕರು ಉತ್ತಮ ಬೋಧನೆ ಮಾಡಿ, ಮಾರ್ಗದರ್ಶನ ಮಾಡಿದ್ದಾರೆ. ವಿವಿಯಲ್ಲಿರುವ ಸೌಕರ್ಯಗಳು ಅತ್ಯುತ್ತಮವಾಗಿದ್ದವು. ನಾವು ಉನ್ನತ ಶಿಕ್ಷಣ ಪಡೆಯಲು ಆಡಳಿತ ಮಂಡಳಿ ಮತ್ತು ವಿವಿಯ ಹಿರಿಯ ಸಿಬ್ಬಂದಿಗಳು ಸೂಕ್ತ ಸಮಯದಲ್ಲಿ ನುರಿತ ತಜ್ಞರಿಂದಲೂ ನಮಗೆ ಬೋಧನೆ ಮಾಡಿಸಿದ್ದಾರೆ. ಚಿನ್ನದ ಪದಕ ನಿರೀಕ್ಷಿಸಿದ್ದೆ. ಆದರೆ 6 ಚಿನ್ನದ ಪದಕ ಪಡೆಯುತ್ತೇನೆ ಎಂದು ನಂಬಲಾಗುತ್ತಿಲ್ಲ. ದೇವರ ದಯೆಯಿಂದ, ಗುರುಗಳ ಮಾರ್ಗದರ್ಶನ, ತಂದೆ-ತಾಯಿ ಶುಭಹಾರೈಕೆಯಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ತನ್ನ ಈ ಸಾಧನೆ ಮತ್ತು ಚಿನ್ನದ ಪದಕಗಳನ್ನು ತನ್ನ ಅಜ್ಜಿಗೆ ಸಮರ್ಪಿಸುವುದಾಗಿ ತಿಳಿಸಿರುವ ಗೌರವ ಅರೊರಾ, ನನ್ನ ಅಜ್ಜಿ ನಾನು ಜಮ್ಮುವಿನಿಂದ ದೂರದಲ್ಲಿರುವ ವಿಜಯಪುರದಲ್ಲಿ ಎಂಬಿಬಿಎಸ್ ಓದುವಾಗ ಸತತವಾಗಿ ದೂರವಾಣಿ ಮೂಲಕ ಸಂಪರ್ಕಿಸಿ, ಚೆನ್ನಾಗಿ ಓದು ಎಂದು ಸದಾ ಪ್ರೋತ್ಸಾಹ ನೀಡುತ್ತಿದ್ದರು.  ಸಂಕಷ್ಟ ಸಮಯದಲ್ಲಿ ಧೈರ್ಯ ತುಂಬುತ್ತಿದ್ದರು.  ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ವಿಷಯ ಶಿಕ್ಷಕರು ಅಧ್ಯಯನ್ನಕ್ಕೆ ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ.  ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ್ದಾರೆ.  ಭವಿಷ್ಯದಲ್ಲಿ ನಾನು ಶಸ್ತ್ರಚಿಕಿತ್ಸಕನಾಗಲು ಇಷ್ಟ ಪಡುತ್ತೇನೆ ಎಂದು ಗೌರವ ಅರೊರಾ ಸಂತಸ ವ್ಯಕ್ತಪಡಿಸಿದ್ದಾರೆ.

ಬಿ ಎಲ್ ಡಿ ಇ ಡೀಮ್ಡ್ ವಿವಿ ಘಟಿಕೋತ್ಸವದಲ್ಲಿ 6 ಚಿನ್ನದ ಪದಕ ಪಡೆದ ಗೌರವ ಅರೊರಾ

ಈ ಮಧ್ಯೆ, ಈ ಘಟಿಕೋತ್ಸವದಲ್ಲಿ, ಈ ಸಂದರ್ಭದಲ್ಲಿ ಒಟ್ಟು 287 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 4 ಜನರಿಗೆ ಪಿ ಎಚ್ ಡಿ, 62 ವೈದ್ಯಕೀಯ ಸ್ನಾತಕೋತ್ತರ ಪದವಿ, 2 ಎಮ್. ಎಚ್. ಎ 2 ಎಮ್. ಪಿ. ಎಚ್, 202 ಎಂಬಿಬಿಎಸ್ ಹಾಗೂ 15 ವಿದ್ಯಾರ್ಥಿಗಳಿಗೆ ಬಿ. ಎಸ್ಸಿ. (ಎಂ. ಐ. ಟಿ) ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಾಡಲಾಯಿತು.

ಈ ಪದವಿ ಪ್ರಧಾನ ಸಮಾರಂಭದಲ್ಲಿ 17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸ್ನಾತಕೋತ್ತರ ವಿಭಾಗದಲ್ಲಿ ಡಾ. ನಮ್ರತಾ ಬಿ . ಎಂ- 2 ಚಿನ್ನದ ಪದಕಗಳನ್ನು, ಎಂಬಿಬಿಎಸ್ ಪದವಿ ವಿಭಾಗದಲ್ಲಿ ಡಾ. ಗೌರವ ಅರೊರಾ 6 ಚಿನ್ನದ ಪದಕ, ಡಾ. ರುಚಿ ಸಿಂಗ್ 3 ಚಿನ್ನದ ಪದಕ ಮತ್ತು 2 ನಗದು ಬಹುಮಾಗಳು ಹಾಗೂ ಡಾ. ಯಾಶಿಕಾ ಸಿ ಅವರಿಗೆ 2 ಚಿನ್ನದ ಪದಕಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ. ಡೀಮ್ಡ ವಿವಿ ಕುಲಪತಿ ಎಂ.ಬಿ.ಪಾಟೀಲ, ಉಪಕುಲಪತಿ ಡಾ. ಆರ್.ಎಸ್.ಮುಧೋಳ, ಡಾ. ನಿಲಿಮಾ ಡೊಂಗ್ರೆ, ಡಾ. ಕುಶಾಲ ದಾಸ್, ಡಾ. ವೈ. ಎಂ. ಜಯರಾಜ, ಡಾ. ಚಂದ್ರಕಾಂತ ಕೊಕಟೆ, ಡಾ. ಅರಣ ಚ. ಇನಾಮದಾರ, ಡಾ. ನಿರಂಜನ ಕುಮಾರ, ಡಾ. ಅರವಿಂದ ಪಾಟೀಲ,  ಡಾ. ಆರ್. ವಿ. ಕುಲಕರ್ಣಿ, ಡಾ. ಎಸ್. ಎಸ್. ದೇವರಮನಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌