ವಿಜಯಪುರ: ಭಕ್ತರು ತಮ್ಮಿಷ್ಟದ ದೇವರಿಗೆ ನಾನಾ ರೀತಿಯಲ್ಲಿ ಸೇವೆ ಸಲ್ಲಿಸುವುದು ವಾಡಿಕೆ. ಆದರೆ, ಬಸವ ನಾಡಿನ ಈ ಗೆಳೆಯರ ಬಳಗದ ಕಾಯಕ ಸತತ ಆರು ವರ್ಷಗಳಿಂದ ಪ್ರತಿ ವಾರ ತಪ್ಪದೆ ಸಾಗಿದೆ. ದೇವರು ಮತ್ತು ಸಮಾಜ ಸೇವೆಯ ಮಾಡುವ ಮೂಲಕ ಸಂತಸ ಪಡುತ್ತಿರುವ ಪ್ರೇಮಾನಂದನ ಸ್ಟೋರಿ ಇಲ್ಲಿದೆ.
ಗೆಳೆಯರ ಬಳಗದ ಹೆಸರಿನಲ್ಲಿ ಯುವಪಡೆ ಮೋಜು ಮಸ್ತಿಯಲ್ಲಿ ತೊಡಗುವ ಹಲವಾರು ಉದಾಹರಣೆಗಳಿಗೆ ಅಪವಾದವಾಗಿದೆ ಬಸವ ನಾಡಿನ ಈ ಸ್ನೇಹಿತರ ಸ್ಟೋರಿ.
ಸತತ 350 ವಾರ ಅಂದರೆ ಕಳೆದ ಆರು ವರ್ಷಗಳಿಂದ ವಿಜಯಪುರದ ಈ ಗೆಳೆಯರ ಬಳಗ ನಿರಂತರವಾಗಿ ದೇವರ ಸೇವೆ ಮಾಡುತ್ತ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಗೆಳೆಯರ ಬಳಗಗಳು ಎಂದರೆ ಕೆಲವರು ಟೈಮ್ ಪಾಸ್ ಮಾಡಲು, ಮೋಜು ಮಸ್ತಿಗೆ ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತ ಕಾಲ ಕಾಲ ಕಳೆಯುತ್ತಾರೆ. ಆದರೆ, ವಿಜಯಪುರದ ಈ ಗೆಳೆಯರ ಬಳಗ ಮಾತ್ರ ಸಾಮಾಜಿಕ ಮತ್ತು ಧಾರ್ಮಿಕ ಸೇವೆಯಲ್ಲಿ ಹೇಗೆಲ್ಲ ತೊಡಗಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ಒಂದು ವರ್ಷ ಸಾಮಾಜಿಕ ಸೇವೆ ಮಾಡಲು ಕಷ್ಟಪಡುವವರ ಮಧ್ಯೆ ಕಳೆದ ಆರು ವರ್ಷಗಳಿಂದ ಪ್ರತಿ ಸೋಮವಾರ ದೇವರು ಮತ್ತು ಜನಸೇವೆ ಮಾಡುತ್ತಿರುವ ಈ ಬಳಗ ಪ್ರಚಾರದ ಬಗ್ಗೆ ಗಮನ ನೀಡದೇ ಎಲೆಮರೆಯ ಕಾಯಿಯಂತೆ ಸೇವೆ ಮಾಡುತ್ತ ಸಾಗಿದೆ.
ಬಸವನಾಡು ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಗೆಳೆಯರ ಬಳಗ ಹೆಸರಿನ ತಂಡವೊಂದು ಪ್ರತಿ ಸೋಮವಾರ ಪ್ರಸಾದ ವಿತರಿಸುತ್ತಿದೆ. ಕಳೆದ ಆರು ವರ್ಷಗಳಿಂದ ಪ್ರಸಾದ ವಿತರಿಸುತ್ತಿತು ಈ ಗೆಳೆಯರ ಬಳಗದ ಸೇವೆ ಈಗ 350 ಸೋಮವಾರ ಪೂರೈಸಿದೆ.
ವಿಜಯಪುರ ನಗರದ ಉದ್ಯಮಿ ಪ್ರೇಮಾನಂದ ಹತ್ತಿ ಎಂಬುವರು 2018 ರಲ್ಲಿ ಸಿದ್ದೇಶ್ವರ ದೇವಸ್ಥಾನ ದಲ್ಲಿ ಆರಂಭಿಸಿರುವ ಬಾಳೆಹಣ್ಣು ಮತ್ತು ಸೇಬು ಹಣ್ಣುಗಳನ್ನು ವಿತರಣೆ ಈಗಲೂ ಮುಂದುವರೆದಿದೆ. ಪ್ರೇಮಾನಂದ ಗೆಳೆಯರ ಬಳಗದಿಂದ ಪ್ರತಿ ಸೊಮವಾರ ಬೆಳಿಗ್ಗೆ ಶ್ರೀ ಸಿದ್ದೇಶ್ವರನಿಗೆ ಅಭಿಷೇಕ ಪೂಜೆ ಮಾಡಿಸಿದ ಬಳಿಕ ಪ್ರಸಾದ ವಿತರಣೆ ಮಾಡಲಾಗುತ್ತದೆ. ಪ್ರತಿ ಸೋಮವಾರ ಇಲ್ಲಿ ಈ ಬಳಗದ ವತಿಯಿಂದ 500 ಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಿಸಲಾಗುತ್ತದೆ.
ಪ್ರೇಮಾನಂದ ಹತ್ತಿ ಗೆಳೆಯರ ಬಳಗದ ಸ್ನೇಹಿಯರು ಇಲ್ಲಿಗೆ ಬಂದು ಪ್ರಸಾದ ವಿತರಣೆಗೆ ಕೈ ಜೋಡಿಸುತ್ತಾರೆ. ಎರಡು ವರ್ಷಗಳ ಹಿಂದೆ ಆಘಾತ ನೀಡಿದ ಕೊರೊನಾ ಹೆಮ್ಮಾರಿಯ ಸಂಕಷ್ಟದಲ್ಲಿಯೂ ಪ್ರಸಾದ ವಿತರಣೆ ನಿಲ್ಲಿಸದೇ ಬಂದಷ್ಟು ಜನರಿಗೆ ಭಕ್ತರಿಗೆ ಪ್ರಸಾದ ವಿತರಿಸಿದೆ.
ಅಲ್ಲದೇ, ಕೊರೊನಾ ಸಂಕಷ್ಟ ಸಮಯದಲ್ಲಿ ದೇವಸ್ಥಾನದಲ್ಲಿ ಮಾಸ್ಕ್, ಸೈನಿಟೇಜರ್ ಹಾಗೂ ಪೌಷ್ಟಿಕ ಆಹಾರಗಳನ್ನೂ ವಿತರಿಸಿದೆ.
ಈಗ ಆರನೆಯ ವಾರ್ಷಿಕೋತ್ಸವದ ಅಂಗವಾಗಿ ಅಂಧ ಮಕ್ಕಳಿಗೆ ಉಚಿತವಾಗಿ ಸ್ವೀಟರ್ ಗಳನ್ನು ವಿತರಿಸಿ ಜನಮನ ಸೆಳೆದಿದೆ. ದೇವರ ಸೇವೆಗಾಗಿ ಪ್ರಾರಂಭವಾದ ಈ ಸೇವೆ ಇನ್ನೂ ಮುಂದುವರೆಯಲಿದೆ ಎನ್ನುತ್ತಾರೆ ಈ ಕಾರ್ಯಕ್ರಮದ ರೂವಾರಿ ಪ್ರೇಮಾನಂದ ಹತ್ತಿ.
ಇವರ ಸೇವೆ ಕೇವಲ ಪ್ರಸಾದ ವಿತರಣೆಗೆ ಮಾತ್ರ ಸೀಮಿತವಾಗದೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ನಿರ್ಗತಿಕರಿಗೆ ಆಹಾರದ ಕಿಟ್ ಗಳನ್ನೂ ವಿತರಿಸಿದೆ. ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸುವ ಮೂಲಕ ಲಸಿಕಾ ಕಾರ್ಯಕ್ರಮದಲ್ಲಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡಿದೆ.
ಶ್ರಾವಣ ಮಾಸದಲ್ಲಿ ಬರುವ ಭಕ್ತಾದಿಗಳಿಗೆ ಸಾಬುದಾನಿ, ಹಣ್ಣಿನ ಪ್ರಸಾದ ವಿತರಿಸಿದೆ. ಶಿವರಾತ್ರಿಯಲ್ಲಿ ಕರ್ಜೂರ, ಶೇಂಗಾ ಸೇರಿದಂತೆ ಹಲವು ತರಹದ ಪ್ರಸಾದ ವಿತರಿಸುವ ಮೂಲಕವೂ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರೇಮಾನಂದ ಹತ್ತಿ ಗೆಳೆಯರ ಬಳಗದ ಕಾರ್ಯಕ್ಕೆ ಅರ್ಚಕ ಸಿದ್ದು ಹಿರೇಮಠ ಮತ್ತು ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ನೇಹಿತರು ಎಂದರೆ ಕೇವಲ ಹೊತ್ತು ಕಳೆಯಲು, ಮೋಜು ಮಸ್ತಿಗೆ ಸಮಯ ವ್ಯರ್ಥ ಮಾಡದೇ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಪ್ರೇಮಾನಂದ ಹತ್ತಿ ಗೆಳೆಯರ ಬಳಗ ಮಾದರಿಯಾಗಿದೆ.
ಪ್ರೇಮಾನಂದ ಹತ್ತಿ ಮತ್ತು ಅವರ ಸ್ನೇಹಿತರ ಬಳಗದ ಕಾರ್ಯಕ್ಕೆ ಬಸವ ನಾಡು ಕೂಡ ಶುಭ ಕೋರುತ್ತದೆ.