ವಿಜಯಪುರ: ಭಾವನೆಗಳನ್ನು ವ್ಯಕ್ತಗೊಳಿಸಲು ಹಿಂದಿ ಭಾಷೆಯು ಸಹಕಾರಿಯಾಗಿದೆ. ದೇಶಾದ್ಯಂತ ಹಿಂದಿ ಸಂವಹನ ಭಾಷೆಯಾಗಿ ಬೆಳೆದಿದೆ ಎಂದು ವಿಜಯಪುರ ಎನ್ ಸಿ ಸಿ ಚೀಫ್ ಹವಾಲ್ದಾರ ಮೇ. ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ವಿಜಯಪುರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗವು ಆಯೋಜಿಸಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
14ನೇ ಸೆಪ್ಟೆಂಬರ್ 1949 ರಂದು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಸೂಚಿಸಲು ಒಪ್ಪಿದರು. ಆದರೆ, ದಕ್ಷಿಣ ಭಾರತೀಯರು ಒಪ್ಪದ ಕಾರಣ ಹಿಂದಿ ರಾಜ್ಯ ಭಾಷೆಯಾಗಿಯೇ ಉಳಿಯಿತು. ರಾಷ್ಟ್ರಭಾಷೆಗೆ ಇರಬೇಕಾದ ಅರ್ಹತೆ, ಗೌರವ ಹಿಂದಿಗೆ ಸಿಕ್ಕಿದೆ. ಜನರು ಹಿಂದಿಯನ್ನು ಒಪ್ಪಿದ್ದಾರೆ, ಅಪ್ಪಿದ್ದಾರೆ. ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನವಿದೆ. ಇತರ ಭಾಷೆಗಳಿಗೂ ಇದು ಸಹಕಾರಿಯಾಗಿದೆ. ಹಿಂದಿಯನ್ನು ಉಳಿಸಿ ಬೆಳೆಸೋಣ ಎಂದು ಮೇ. ರಾಜೇಂದ್ರ ಸಿಂಗ್ ಹೇಳಿದರು.
ಪ್ರೊ. ಐ. ಬಿ. ಚಿಪ್ಪಲಕಟ್ಟಿ ಮಾತನಾಡಿ, ಉತ್ತಮ ಸಂವಹನಕ್ಕಾಗಿ ಪ್ರತಿ ವ್ಯಕ್ತಿಯೂ ಮಾತೃಭಾಷೆ, ರಾಜ್ಯಭಾಷೆ, ರಾಷ್ಟ್ರಭಾಷೆ ಹಾಗೂ ಅಂತಾರಾಷ್ಟ್ರೀಯ ಭಾಷೆಗಳನ್ನು ಅರಿಯಬೇಕು. ಆಗ ಜಗತ್ತಿನ ಯಾವ ಭಾಗದಲ್ಲಿದ್ದರೂ ನೆಮ್ಮದಿಯ ಜೀವನ ನಡೆಸಬಹುದು. ಹಿಂದಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ಹೇಳಿದರು.
ಹಿಂದಿ ದಿವಸದ ಅಂಗವಾಗಿ ನಾನಾ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನಿಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ಎಲ್ಲ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಪುಸ್ತಕಗಳನ್ನು ವಿತರಿಸಲಾಯಿತು.
ಪ್ರೊ. ಪಿ.ಎಸ್. ತೋಳನೂರ, ಪ್ರೊ. ಸುರೇಶ ಜೀರಗಾಳಿ ವೇದಿಕೆ ಮೇಲಿದ್ದರು. ಡಾ. ಭಕ್ತಿ ಮಹಿಂದ್ರಕರ, ಪ್ರೊ. ಸುಶ್ಮಿತಾ ತುಂಗಳ, ಪ್ರೊ. ಐಶ್ವರ್ಯ ಮಿರಜಕರ ಉಪಸ್ಥಿತರಿದ್ದರು.
ಶ್ರೀದೇವಿ ಚಿಂಚಲಿಯವರ ಪ್ರಾರ್ಥಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಮಹಾನಂದಾ ಪಾಟೀಲ ಸ್ವಾಗತಿಸಿ ಹಿಂದಿ ಭಾಷೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಿತಾ ಪಟ್ಟಣಶೆಟ್ಟಿ ನಿರೂಪಿಸಿದರು. ಅನನ್ಯ ಸಕ್ರಿ ವಂದಿಸಿದರು.