ವಿಜಯಪುರ: ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮಾಸಿಕ ಗೌರವ ಧನ ಹೆಚ್ಚಳ ಮತ್ತು ಜಲಜೀವನ ಮಿಷನ್ ಯೋಜನೆಗೆ ಗ್ರಾ. ಪಂ. ನ 15ನೇ ಹಣಕಾಸಿನ ಅನುದಾನ ಬಳಕೆಯ ಕುರಿತು ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮತ್ತೋಮ್ಮೆ ಸದನದಲ್ಲಿ ಧ್ವನಿ ಎತ್ತಿದ್ದಾರೆ.
ಗ್ರಾ. ಪಂ. ಜನಪ್ರತಿನಿಧಿಗಳ ಮಾಸಿಕ ಗೌರವ ಧನ ಹೆಚ್ಚಳ ವಿಚಾರದ ಕುರಿತು ಸುನೀಲಗೌಡ ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿರುವ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಖಿತ ಉತ್ತರ ನೀಡಿದ್ದು, ಆ ಉತ್ತರ ಗ್ರಾ. ಪಂ. ಜನಪ್ರತನಿಧಿಗಳ ಪಾಲಿಗೆ ನಿರಾಸೆ ಮೂಡಿಸಿದೆ. ಮಾಸಿಕ ಗೌರವಧನ ಹೆಚ್ಚಳ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಈ ಗೌರವಧನ ಪರಿಷ್ಕರಣೆ ಮಾಡಲು ನಿರ್ಧಿಷ್ಠ ಕಾಲಮಿತಿಯನ್ನು ನಿಗದಿ ಪಡಿಸಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸರಕಾರ ಮಾಸಿಕ ಗೌರವಧನ ಹೆಚ್ಚಸಿಲು ಅನುದಾನದ ಕೊರತೆ ಇದೆಯಾ? ಎಂಬ ಪ್ರಶ್ನೆಗೆ ಗೌರವ ಧನ ಹೆಚ್ಚಳ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಹೇಳುವ ಮೂಲಕ ಸರಕಾರ ಅನುದಾನದ ಕೊರತೆ ಬ್ಗಗೆ ಸ್ಪಷ್ಟ ಉತ್ತರವನ್ನೂ ನೀಡಿಲ್ಲ.
ಈ ಮಧ್ಯೆ, ಜಲಜೀವನ ಮಿಷನ್ ಯೋಜನೆಗೆ ಗ್ರಾ. ಪಂ. ವಂತಿಗೆಯನ್ನು 15ನೇ ಹಣಕಾಸು ಅನುದಾನದಲ್ಲಿ ಬಳಸಿಕೊಳ್ಳುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಮುಖ್ಯಮಂತ್ರಿಗಳು, 15ನೇ ಹಣಕಾಸು ಆಯೋಗದ ನಿರ್ಬಂಧಿತ ಅನುದಾನದಡಿ ಕುಡಿಯುವ ನೀರಿಗಾಗಿ ಕಾಯ್ದಿರಿಸಿರುವ ಶೇ. 50ರಷ್ಟು ಹಣವನ್ನು ಜಲಜೀವನ ಮಿಷನ್ ಕಾಮಗಾರಿಗಳಿಗೆ ಉಪಯೋಗಿಸಲಾಗುತ್ತಿರುವುದರಿಂದ ಇತರೆ ಕಾಮಗಾರಿಗಳಿಗೆ ತೊಂದರೆ ಉಂಟಾಗಿಲ್ಲ. ಇತರ ಅಭಿವೃದ್ಧಿ ಕಾಮಗಾರಿಗಳನ್ನು 15ನೇ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಲ್ಲಿ ಕೈಗೊಳ್ಳಬಹುದಾಗಿದೆ. ಅಲ್ಲದೇ, ಆ. 8 ರಂದು ಜಲಜೀವನ ಮಿಷನ್ ಕಾಮಗಾರಿಗಳಿಗೆ 15ನೇ ಹಣಕಾಸಿನ ಅನುದಾನವನ್ನು ಗ್ರಾ. ಪಂ. ಗಳಿಂದ ಪಡೆಯದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರಕಾರದ ವಿರುದ್ಧ ಸುನೀಲಗೌಡ ಪಾಟೀಲ ಆಕ್ರೋಶ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುನೀಲಗೌಡ ಪಾಟೀಲ, ಸದನದ ಒಳಗೆ ಮತ್ತು ಹೊರಗೆ ಮಾಸಿಕ ಗೌರವ ಧನ ಹೆಚ್ಚಳ ಕುರಿತು ಸತತ ಹೋರಾಟ ಮಾಡುತ್ತ ಬಂದಿದ್ದೇನೆ. ಅಲ್ಲದೇ, ಈ ಹೋರಾಟಕ್ಕೆ ವಿಧಾನ ಪರಿಷತ ಸದಸ್ಯರು ಪಕ್ಷಾತೀತವಾಗಿ ಬೆಂಬಲವನ್ನೂ ನೀಡಿದ್ದಾರೆ. ಅಷ್ಟೇ ಅಲ್ಲ, ಕಳೆದ ವರ್ಷ ನಡೆದ ವಿಧಾನ ಪರಿಷತ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮತ್ತು ಸಚಿವರಾದಿಯಾಗಿ ಎಲ್ಲರೂ ಮಾಸಿಕ ಗೌರವಧನ ಹೆಚ್ಚಳದ ಬಗ್ಗೆ ಆಶ್ವಾಸನೆ ನೀಡಿದ್ದರು. ಆದರೆ, ಈಗ ಈ ವಿಷಯದಲ್ಲಿ ಸರಕಾರ ಈಗ ಮೀನಾಮೇಷ ಎಣಿಸುತ್ತಿದೆ ಎಂಬುದು ಸಿಎಂ ಉತ್ತರದಿಂದ ಸ್ಪಷ್ಟವಾಗಿದೆ. ಕೂಡಲೇ ಸರಕಾರ ಗ್ರಾ. ಪಂ. ಸದಸ್ಯರ ಮಾಸಿಕ ಗೌರವಧನ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಹೋರಾವನ್ನು ತೀವ್ರಗೊಳಿಸುವುದಾಗಿ ಸುನೀಲಗೌಡ ಪಾಟೀಲ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ವಂದನೆಗಳೊಂದಿಗೆ.