ವಿಜಯಪುರ: ಸೆ. 17 ರಿಂದ ಅ. 2ರ ವರೆಗೆ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸುರೇಶ ಬಿರಾದಾರ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ದೀನ ದಯಾಳ ಉಪಾಧ್ಯಾಯ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಅಂಗವಾಗಿ ಈ ಸೇವಾ ಪಾಕ್ಷಿಕವನ್ನು ಆಯೋಜಿಸಲಾಗಿದೆ. ಬಿಜೆಪಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸೆ. 17ರಂದು ಪ್ರಧಾನಿ ಮೋದಿ ಜನ್ಮ ದಿನದ ಅಂಗವಾಗಿರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಅಂಗವಿಕಲರಿಗೆ ಕೃತಕ ಅಂಗಾಂಗ ಜೋಡಣೆ ಶಿಬಿರ ಏರ್ಪಡಿಸಲಾಗಿದೆ. ಪ್ರಧಾನಿಗಳ ಜೀವನ ಕುರಿತು ಜಿಲ್ಲಾ ಮತ್ತು ಮಂಡಳ ಮಟ್ಟದಲ್ಲಿ ವಿಡಿಯೊ ಪ್ರದರ್ಶನ ಮಾಡಲಾಗುವುದು. ಜನ ಕಲ್ಯಾಣ ಯೋಜನೆಗಳ ಕುರಿತಾದ ಪುಸ್ತಕ ಪ್ರದರ್ಶನ, ಕ್ಷಯ ರೋಗಿಗಳನ್ನು ದತ್ತು ಪಡದು ಒಂದು ವರ್ಷ ಚಿಕಿತ್ಸೆ ಕೊಡಿಸಲಾಗುವುದು ಎಂದು ವಕ್ತಾರರು ಹೇಳಿದರು.
ಕೋವಿಡ್ ಲಸಿಕೆ, ಬೂಸ್ಟರ್ ಡೋಸ್ ಇನ್ನೂ ಪಡೆಯದವರಿಗೆ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಬೂತ್ ಮಟ್ಟದಲ್ಲಿ ಸಸಿ ನಡುವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪಕ್ಷದ ಎಲ್ಲ ಮಂಡಲಗಳಲ್ಲಿ ಎರಡು ದಿನ ಸ್ವಚ್ಛತಾ ಅಭಿಯಾನ, ಮಳೆ ನೀರು ಸಂಗ್ರಹದ ಬಗ್ಗೆ ಜಾಗೃತಿ, ಅನೇಕತೆಯಲ್ಲಿ ಏಕತೆ ಹಬ್ಬವನ್ನು ಆಯೋಜಿಸಲಾಗುವುದು ಎಂದು ಸುರೇಶ ಬಿರಾದಾರ ಹೇಳಿದರು.
ಸೆ. 25ರಂದು ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜಯಂತಿ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಚರ್ಚೆಕೂಟ, ಸಂವಾದ ಆಯೋಜಿಸಲಾಗುತ್ತಿದೆ.
ಅ. 2ರಂದು ಗಾಂಧಿ ಜಯಂತಿ ಹಿನ್ಬೆಲೆಯಲ್ಲಿ ಸ್ವದೇಶಿ, ಖಾದಿ, ಆತ್ಮನಿರ್ಭರತೆ, ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಆಯೋಜಿಸಲಾಗುವುದು ಎಂದು ಸುರೇಶ ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಮುಖಂಡರಾದ ಬಸವರಾಜ ಬೈಚಬಾಳ, ಕೃಷ್ಣ ಗುನ್ನಾಳಕರ, ವಿಜಯ ಜೋಶಿ ಉಪಸ್ಥಿತರಿದ್ದರು.