ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಹದಗೆಟ್ಟ ರಸ್ತೆ, ಹೊರ ಚರಂಡಿ, ಒಳಚರಂಡಿ, ವಿದ್ಯುತ್ ದೀಪಗಳ ಅವ್ಯವಸ್ಥೆ ಖಂಡಿಸಿ ಅಬ್ದುಲ್ ಹಮೀದ್ ಮುಶ್ರೀಫ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಹಮೀದ್ ಮುಶ್ರೀಫ್ ವಿಜಯಪುರ ನಗರಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನ ನರಳಾಡುವಂತಾಗಿದೆ. ನಗರದ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಜನ ನಡೆದಾಡುವುದು ದುಸ್ತರವಾಗಿದೆ. ಹೊರ ಮತ್ತು ಒಳಚರಂಡಿ ವ್ಯೆವಸ್ಥೆ ಸರಿಯಾಗಿಲ್ಲ. ಇದರಿಂದಾಗಿ ರಸ್ತೆಗಳು ಅವ್ಯವಸ್ಥೆಯ ಅಗರವಾಗಿವೆ. ಅದರಲ್ಲಿ ಕೆಬಲ್ ಕಂಪನಿಗಳು, ಕುಡಿಯುವ ನೀರಿನ ಯೋಜನೆಗಾಗಿ ಟೆಂಡರ್ ಪಡೆದಿರುವ ಕಂಪನಿಗಳು ಬೇಕಾಬಿಟ್ಟಿ ರಸ್ತೆಗಳನ್ನು ಅಗೆದಿವೆ. ಅವುಗಳು ಸರಿಯಾಗಿ ಮುಚ್ಚದೇ ಹಾಗೂ ರಿಪೇರಿ ಮಾಡದೇ ಅಷ್ಟಕ್ಕಷ್ಟೇ ಬಿಟ್ಟಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಮಹಾನಗರಪಾಲಿಕೆ ಅಧಿಕಾರಿಗಳು ಭೃಷ್ಟಾಚಾರದಲ್ಲಿ ತೊಡಗಿದ್ದು, ನಗರ ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ನಗರ ಶಾಸಕರು ತಮಗೆ ಬೇಕಾದ ಕಡೆ ಮಾತ್ರ ಅಭಿವೃದ್ಧಿ ಮಾಡಿ, ಬೇರೆ ಕಡೆ ಅನ್ಯಾಯ ಮಾಡುತ್ತಿದ್ದಾರೆ. ನಗರದ ಜನ ಶಾಪ ಹಾಕುತ್ತಿದ್ದಾರೆ. ಇಡೀ ನಗರ ಮತಕ್ಷೇತ್ರಕ್ಕೆ ತಾವು ಶಾಸಕ ಎಂಬಿದನ್ನು ಮರೆತು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ಬಲವಾಗಿ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ವಿಜಯಪುರ ನಗರದ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಸುಮಾರು ನಾಲ್ಕೂವರೆ ವರ್ಷಗಳಿಂದ ಜನ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಥಳೀಯ ಸಂಸ್ಥೆ ಆಡಳಿತ ಹಾಗೂ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಜನರಿಗೆ ಮೋಸ ಮಾಡುತ್ತಿದ್ದಾರೆ. ಸತತ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಬಡವರ ಗೋಳು ಕೇಳುವವರಿಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.
ರಸ್ತೆಗಳ ದುರಸ್ತಿ ಇಲ್ಲದೆ ತುಂಬಾ ಅನಾಹುತಗಳು ಸಂಭವಿಸುತ್ತಿವೆ. ರಸ್ತೆಗಳ ಮೇಲೆ ಒಳಚರಂಡಿ ನೀರು ಹರಿದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿದ್ಯುದ್ವೀಪಗಳು ಕೆಟ್ಟು ಹೋಗಿ ನಗರದ ಬಡಾವಣೆಗಳಲ್ಲಿ ಕಳ್ಳತನಗಳಾಗುತ್ತಿದ್ದು ಜನ ಕಂಗಾಲಾಗಿದ್ದಾರೆ ಎಂದು ಅಬ್ದುಲ್ ಹಮೀದ್ ಮುಶ್ರಿಫ್ ಹೇಳಿದರು.
ಜೆ.ಎಂ ರೋಡ, ಹಕೀಂ ಚೌಕನಿಂದ ಬಾಗಲಕೋಟ ಕ್ರಾಸ್ ನಿಂದ ಕೆಇಬಿ ಸಮುದಾಯ ಭವನ ಪಕ್ಕದ ರಸ್ತೆಯಿಂದ ರಾಜಾಜಿನಗರದ ಮುಖ್ಯ ರಸ್ತೆವರೆಗೆ, ಹರಿಯಾಲ್ ಗಲ್ಲಿ,ಕೆ. ಎಚ್. ಬಿ ಕಾಲನಿ, ಬಾಗಾಯತ ಗಲ್ಲಿ, ಟೇಕಡೇಗಲ್ಲಿ, ಮನಗೂಳಿ ಬೇಸನಿಂದ ಬಡಿಕಮಾನ ವರೆಗೆ, ಆಸಾರ ಮಹಲ್ ಓಣಿ, ಅತಾವುಲ್ಲಾ ಚೌಕನಿಂದ ಬಸ್ ಸ್ಟ್ಯಾಂಡ್ ವರೆಗೆ, ಸಕಾಫ ರೋಜಾ, ಅಥಣಿ ಗಲ್ಲಿ, ಲಂಗರ ಬಜಾರ, ಹವೇಲಿ ಗಲ್ಲಿ, ನಿಸಾರ್ ಮೊಹಲ್ಲಾ,ಅಲಿಕರೋಜಾ,ಕಾಗೇರಿ ಓಣಿ, ನವಬಾಗ, ಖಾಜಾ ನಗರ, ಮಿನಾಕ್ಷೀಚೌಕ, ಇಬ್ರಾಹಿಂ ರೋಜಾ, ಶಾಹಪೂರ ದರವಾಜಾ, ಶ್ಯಾಪೇಟಿ, ರಹೀಂ ನಗರ ಸೇರಿದಂತೆ ಅನೇಕ ಕಡೆ ರಸ್ತೆ, ಹೊರ ಮತ್ತು ಒಳಚರಂಡಿ, ವಿದ್ಯುದ್ವೀಪಗಳು ದುರಾವಸ್ತೆಯಲ್ಲಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಆದೇಶ ನೀಡಿ, ತಾರತಮ್ಯದ ಬಗ್ಗೆ ತನಿಖೆ ನಡೆಸಿ ಜನರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸಿಕೊಡಬೇಕು ಎಂದು ಅಬ್ದುಲ್ ಹಮೀದ ಮುಶ್ರಿಫ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಅಹಮದ್ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಾಹಪುರ, ರವೀಂದ್ರ ಜಾದವ, ವಿದ್ಯಾ ರಾಣಿ ತುಂಗಳ, ಇರ್ಫಾನ್ ಶೈಕ್, ಕುಲದೀಪ್ ಸಿಂಗ್, ಪ್ರಭಾವತಿ ನಾಟಿಕಾರ, ಹಸನ ಪಟೇಲ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಾಂದಸಾಬ ಗಡಗಲಾಬ, ವಸಂತ ಹೊನಮಡೆ, ಶರಣಪ್ಪ ಯಕುಂಡಿ, ಕೈಸರ್ ಇನಾಮದಾರ, ಮಂಜುನಾಥ ನಿಡೋಣಿ, ಜಮೀರ್ ಭಾ೦ಗಿ, ಇದ್ರುಸ್ ಭಕ್ಷಿ, ಶಕೀಲ್ ಸುತಾರ, ಫಯಾಜ್ ಕಲಾದಗಿ, ಮಹಾದೇವ ಜಾಧವ, ಅರುಣ ಭಜಂತ್ರಿ, ಇಕ್ಬಾಲ್ ಮೋಹಸೀನ್ ಇನಾಂದಾರ, ಆಬಿದ್ ಸಂಗಮ, ಹಾಜಿ ಪಿಂಜಾರ , ದೀಪಾ ಕುಂಬಾರ, ಅಸ್ಮಾ ಕಲೆಭಾಗ್, ಭಾರತಿ ಹೂಸಮನಿ, ಪ್ರೇಮಾ ಗಸ್ತಿ, ಗಂಗೂಬಾಯಿ ಧುಮಲೆ, ಸುಜಾತ ಸಿಂದೆ, ಸುಂದರಪಾಲ ರಾಠೋಡ, ಮಲ್ಲಿಕಾರ್ಜುನ ಪಾರಸಣ್ಣವರ, ಚನ್ನಬಸಪ್ಪ ನಂಧರಗಿ, ಬಿ ಎಸ್ ಗಸ್ತಿ, ಪ್ರಭಾತ್ , ಸುನಂದಾ ಕ್ಕಲಾಧ್ಗಿ, ಅಷ್ಪಾಕ್ ಮನಗೂಳಿ , ಕಲ್ಲಪ್ಪ ಪಾರಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.