ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಶಿಕ್ಷಣ ಮತ್ತು ಗ್ರಂಥಾಲಯಗಳ ಕುರಿತು ಹೊಂದಿದ್ದ ನಿಲುವುಗಳು ಇಂದಿನ ಸಮಾಜ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ದಾರಿದೀಪವಾಗಿವೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ದೊಡ್ಡಮನಿ ಹೇಳಿದರು.
ನಗರದ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಡಾ. ಅಂಬೇಡ್ಕರ್ ಓದು ಎಂಬ ಅಭಿಯಾನದಡಿ ಡಾ.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಪರಿಚಯ ಕುರಿತು ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಅಂಬೇಡ್ಕರ ಅವರ ವಿಚಾರಧಾರೆಗಳನ್ನು ತಮ್ಮ ನಿತ್ಯ ಶೈಕ್ಷಣಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಡಾ. ಅಂಬೇಡ್ಕರ್ ಅವರ ಜೀವನ, ಸಾಧನೆಯನ್ನು ತಿಳಿಸಿ, ನಾನು ಪ್ರತಿಮೆಗಳಲ್ಲಿ ಅಲ್ಲ. ಪುಸ್ತಕಗಳಲ್ಲಿ ಸಿಗುತ್ತೇನೆ. ನಾನು ಪೂಜೆ ಮಾಡುವುದರಿಂದ ಅಲ್ಲ, ಓದುವುದರ ಮೂಲಕ ಸಿಗುತ್ತೇನೆ ಎಂಬ ಅಂಬೇಡ್ಕರರ ಸಂದೇಶವನ್ನು ವಿದ್ಯಾರ್ಥಿಗಳಿಗೆ ಡಾ ಶ್ರೀನಿವಾಸ ದೊಡಮನಿ ಮನವರಿಕೆ ಮಾಡಿದರು.
ಈ ಕಾರ್ಯಕ್ರಮವನ್ನು ಬಿ.ಎಲ್.ಡಿ.ಇ ಸಂಸ್ಥೆಯ ಪದವಿ ವಿಭಾಗದ ಆಡಳಿತಾಧಿಕಾರಿ ಡಾ. ಕೆ.ಜಿ.ಪೂಜಾರಿ ಉದ್ಘಾಟಿಸಿ, ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ಅಂಬೇಡ್ಕರ ಅವರಂತೆ ಗ್ರಂಥಾಲಯದಲ್ಲಿ ಕಳೆಯಬೇಕು. ಅಲ್ಲದೆ, ಸಂವಿಧಾನದ ಆಶಯ ಮತ್ತು ಪ್ರಮುಖ ಅಂಶಗಳನ್ನು ಅಧ್ಯಯನ ಮಾಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಯು. ಎಸ್. ಪೂಜೇರಿ ಮಾತನಾಡಿ, ವಿದ್ಯಾರ್ಥಿಗಳು ಅಂಬೇಡ್ಕರ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಅವರ ಹೋರಾಟದ ಜೀವನ ವಿಧಾನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಪ್ರಬಂಧ ಸ್ಪರ್ಧೆಯಲ್ಲಿ ಶೋಭಾ ಮ್ಯಾಗೇರಿ(ಪ್ರಥಮ), ಅಂಬರೀಶ ನಾಯಕೋಡೆ(ದ್ವಿತೀಯ), ನಿತಿನ ಪಾಟೀಲ(ತೃತೀಯ), ಅಬ್ದುಲ್ ಯಾದಗಿರಿ, ಮಾನಸಿ ದ್ರವೆ(ಸಮಾಧಾನಕರ) ಬಹುಮಾನಗಳನ್ನು ಪಡೆದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಕಾಲೇಜಿನ ಉಪಪ್ರಾಚಾರ್ಯ ಬಿ.ಎಸ್.ಬಗಲಿ, ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್.ಪಾಟೀಲ, ಸಂಯೋಜಕ ಡಾ. ಕೆ.ಮಹೇಶಕುಮಾರ, ಡಾ. ಉಷಾದೇವಿ ಹಿರೇಮಠ, ಪ್ರೊ. ಎಸ್.ವಾಯ್.ಅಂಗಡಿ, ಪ್ರೊ. ಜೆ.ಎಂ.ಬಿರಾದಾರ, ಚೇತನಾ ಸಂಕೊಂಡ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಾಯ್.ತಮ್ಮಣ್ಣ, ಪ್ರೊ. ಬಿ.ಎಸ್.ಬೆಳಗಲಿ, ರಶ್ಮಿ ಪಾಟೀಲ, ಡಾ. ಎಸ್.ಎನ್.ಉಂಕಿ, ಕಾಲೇಜಿನ ಬೋಧಕ ಮತ್ತು ಬೋಧರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.