ವಿಜಯಪುರ: ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಟಿ. ಎಸ್. ಆಲಗೂರ, ಅಂತಾರಾಷ್ಟ್ರೀಯ ಸಾಕ್ಷರತೆಯ ಇತಿಹಾಸ ತಿಳಿಸಿದ ಅವರು, ಮಹಿಳೆಯರು ಶಿಕ್ಷಣ ಪಡೆದು ಪ್ರಜ್ಞಾವಂತರಾಗಿ ಸಮಾಜ ಸುಧಾರಣೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರಾಗೃಹದ ಅಧೀಕ್ಷಕ ಡಾ. ಐ. ಜೆ. ಮ್ಯಾಗೇರಿ ಮಾತನಾಡಿ, ಶಿಕ್ಷಣ ಮನುಷ್ಯನ ಸ್ವತ್ತು. ಅಕ್ಷರ ಸಾಧಕರ ಸ್ವತ್ತು. ಚೈತನ್ಯ ಒಂದು ನಂಬಿಕೆ. ಚೈತನ್ಯದ ಅನುಭವದಿಂದ ಪರಬ್ರಹ್ಮನ ಸಾಕ್ಷಾತ್ಕರ ಪಡೆದು ಶಾಂತಿಯಿಂದ ಸುಂದರ ಜೀವನವನ್ನು ರೂಪಿಸಿಕೊಂಡು ಎಲ್ಲರೂ ಸಾಕ್ಷರತರಾಗಿ ಜೀವನ ಪಾವನಗೊಳಿಸಿಕೊಳ್ಳೊಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣದ ಕಾರ್ಯಕ್ರಮ ಸಹಾಯಕರಾದ ಟಿ. ಎ. ಬಗಲಿ, ಕೇಂದ್ರ ಕಾರಾಗೃಹದ ಸಹಾಯಕ ಆಡಳಿತಾಧಿಕಾರಿ ಡಿ. ವಿ. ರಾಜೇಶ, ಕಚೇರಿ ಅಧೀಕ್ಷಕ ಡಿ. ಟಿ. ರಾಠೋಡ, ಜೈಲರ್ ತಿಲೋತ್ತಮೆ, ಜಿ. ಕೆ. ಕುಲಕರ್ಣಿ, ಐ. ಎ. ಹಿರೇಮಠ, ಎನ್. ಆರ್. ಚೇತನಾ, ಕಾರಾಗೃಹದ ಸಹಾಯಕ ಜೈಲರಗಳು, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಲವಕುಮಾರ ಮನಗೂಳಿ ನಿರೂಪಿಸಿದರು. ದಿಕ್ಷೀತ್ ಸ್ವಾಗತಿಸಿದರು.