Bheema DC Visti: ಮಹಾಮಳೆ ಎಫೆಕ್ಟ್- ಭೀಮಾ ನದಿಗೆ ನೀರು ಬಿಡುಗಡೆ- ನದಿತೀರದ ಗ್ರಾಮಗಳಿಗೆ ಡಿಸಿ ಭೇಟಿ, ಸುರಕ್ಷಿತ ಸ್ಥಳಕ್ಕೆ ತೆರಳಲು ಗ್ರಾಮಸ್ಥರಿಗೆ ಸೂಚನೆ

ವಿಜಯಪುರ: ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿದ್ದು ಅಲ್ಲಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗಳಿಗೆ ಹೊರ ಬಿಡಲಾಗಿದೆ.  ಇದೇ ರೀತಿ ಮಹಾರಾಷ್ಟ್ರ ಉಜನಿ ಜಲಾಷಯದಿಂದ ಭೀಮಾ ನದಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಭವನೀಯ ಪ್ರವಾಹದ ಕುರಿತು ಪರಿಶೀಲನೆ ನಡೆಸಲು ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಚಡಚಣ ಮತ್ತು ಇಂಡಿ ತಾಲೂಕಿನ ಭೀಮಾ ತೀರದ ಗ್ರಾಮಗಳಿಗೆ ಭೇಟಿ ನೀಡಿದರು.

ಮಹಾರಾಷ್ಟ್ರದ ನೀರಿನಿಂದಾಗಿ ಮಾ ನದಿ ಉಕ್ಕಿ ಹರಿಯುತ್ತಿದ್ದು, ವಿಜಯಪುರ ಜಿಲ್ಲೆಯ ಬ್ಯಾರೇದ್ ಮುಳುಗಡೆಯಾಗಿದೆ

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವ್ಯಾಪ್ತಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿಗೆ ಒಟ್ಟು ಎಂಟು ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ.  ಇವುಗಳಲ್ಲಿ ನಾಲ್ಕು ಬ್ಯಾರೇಜು ಗಳನ್ನು ಕರ್ನಾಟಕ ನಿರ್ಮಿಸಿದ್ದರೆ ಉಳಿದ ನಾಲ್ಕು ಬ್ಯಾರೇಜ್ ಗಳನ್ನು ಮಾಹಾರಾಷ್ಟ್ರ ನಿರ್ಮಿಸಿದೆ.

ಗೋವಿಂದಪುರ- ಭಂಡಾರಕವಟೆ, ಉಮರಾಣಿ- ಲವಂಗಿ, ಔಜ- ಶಿರನಾಳ, ಚಿಂಚಪೂರ- ಧೂಳಖೇಡ, ಚಣೇಗಾಂವ- ಬರೂರ, ಹಿಂಗಣಿ- ಅಳ್ಳಗಿ, ಖಾನಾಪುರ- ಪಡನೂರ, ಹಿಳ್ಳಿ- ಗುಬ್ಬಿವಾಡ ಮಧ್ಯೆ ಈ ಎಂಟು ಬಾಂದಾರಗಳನ್ನು ನಿರ್ಮಿಸಲಾಗಿದೆ.

ಇವುಗಳಲ್ಲಿ ಗೋವಿಂದಪುರ- ಭಂಡಾರಕವಟೆ, ಉಮರಾಣಿ- ಲವಂಗಿ, ಚಣೇಗಾಂವ- ಬರೂರ, ಹಿಂಗಣಿ ಅಳ್ಳಗಿ ಬ್ಯಾರೇಜುಗಳನ್ನು ಕರ್ನಾಟಕ ನಿರ್ಮಿಸಿದೆ.  ಉಳಿದ ನಾಲ್ಕು ಬ್ಯಾರೇಜುಗಳಾದ ಔಜ- ಶಿರನಾಳ, ಚಿಂಚಪೂರ- ಧೂಳಖೇಡ, ಖಾನಾಪುರ- ಪಡನೂರ ಮತ್ತು ಹಿಳಿ- ಗುಬ್ಬೆವಾಡ ಬ್ಯಾರೇಜ್ ಗಳನ್ನು ಮಹಾರಾಷ್ಟ್ರ ನಿರ್ಮಿಸಿದೆ‌.

ಈಗ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.  ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿ ಮತ್ತು ಚಡಚಣ ತಾಲೂಕಿನ ಭೀಮಾ ತೀರದ ಗ್ರಾಮಗಳಿಗೆ ಭೇಟಿ ನೀಡಿದರು.

ಮೊದಲಿಗೆ ಇಂಡಿ ತಾಲೂಕಿನ ಹಿಂಗಣಿ ಬ್ಯಾರೇಜಿಗೆ ಭೇಟಿ ನೀಡಿದ ಅವರು, ಅಲ್ಲಿ ಭೀಮಾ ನದಿಗೆ  ಬಿಡಲಾಗಿರುವ ನೀರೊನ ಪ್ರಮಾಣದ ಪರಿಶೀಲನೆ ನಡೆಸಿದರು.‌  ಬಳಿಕ ಗ್ರಾಮಸ್ಥರಿಂದ ಈ ಕುರಿತು ಮಾಹಿತಿಯನ್ನು ಪಡೆದರು.

ಅಲ್ಲಿಂದ ಚಡಚಣ ತಾಲೂಕಿನ ಚಣೇಗಾಂವ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಕೂಡ ಪರಿಶೀಲನೆ ನಡೆಸಿದರು.  ಅಲ್ಲದೆ ಅಲ್ಲಿನ ಅಂಗನವಾಡಿಗೆ ಭೇಟಿ ನೀಡಿ ಆಹಾರ ಸಂಗ್ರಹಣೆ ಕುರಿತು ಮಾಹಿತಿ ಪಡೆದರು.  ಅಲ್ಲದೇ, ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದ್ದು, ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದರು.

ನಂತರ ಕರ್ನಾಟಕ- ಮಹಾರಾಷ್ಟ್ರದ ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ಬರುವ ಟಾಕಳಿ ಧೂಳಖೇಡ ಮಧ್ಯೆ ನಿರ್ಮಿಸಲಾಗಿರುವ ಸೇತುವೆಗೆ ತೆರಳಿದ ಜಿಲ್ಲಾಧಿಕಾರಿಗಳು ಭೀಮಾ ನದಿಯಲ್ಲಿ ನೀರಿನ ಹರಿವನ್ನು ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಭೀಮಾ ತೀರದ ನಾನಾ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನಾ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಭೀಮಾ ನದಿ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳು ಕುರಿತು ಮತ್ತು ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಅಷ್ಟೇ ಅಲ್ಲ, ಪ್ರವಾಹ ಉಂಟಾದ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಮುಂಜಾಗೃತೆ ಕ್ರಮಗಳು ಮತ್ತು ಈಗಾಗಲೇ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಮ್ಮ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಈಗ ಭೀಮಾ ತೀರದ ಗ್ರಾಮಗಳಿಗೆ ತೆರಳಿ ಪ್ರವಾಹದ ಬಗ್ಗೆ ಪರಿಶೀಲನೆ ನಡೆಸಿರುವುದು ಗ್ರಾಮಸ್ಥರಲ್ಲಿ ನೈತಿಕ ಧೈರ್ಯ ತುಂಬಲು ಸ್ಪೂರ್ತಿ ನೀಡಿದಂತಾಗಿದೆ.  ಜಿಲ್ಲಾಧಿಕಾರಿ ಡಾಕ್ಟರ್ ವಿಜಯಮಹಾಂತೇಶ ಬಿ. ದಾನಮ್ಮನವರ ಅವರ ಈ ನಡೆಗೆ ಬಸವ ನಾಡಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌