Sainik School: ವಿಜಯಪುರ ಸೈನಿಕ ಶಾಲೆಯ 59ನೇ ಸಂಸ್ಥಾಪನೆ ದಿನಾಚರಣೆ- ಭಾರತೀಯ ಸೇನಾ ಉಪದಂಡನಾಯಕ ಲೆ. ಜ. ಬಿ. ಎಸ್. ರಾಜು ಭಾಗಿ

ವಿಜಯಪುರ: ರಾಜ್ಯದ ಪ್ರತಿಷ್ಠಿತ ಮತ್ತು ಮೊದಲ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಪುರ ಸೈನಿಕ ಶಾಲೆಯ 59ನೇ ಸಂಸ್ಥಾಪನೆ ದಿನ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಉಪ ದಂಡನಾಯಕ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ಲೆಫ್ಟಿನೆಂಟ್ ಜನರಲ್ ಬಿ. ಎಸ್. ರಾಜು ಮುಖ್ಯ ಅತಿಥಿಯಾಗಿ ಪಾಲ್ಗೋಂಡು ಗಮನ ಸೆಳೆದರು.

 

ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಶಾಲೆಯ ಆವರಣದಲ್ಲಿರುವ ಹುತಾತ್ಮ ಸೈನಿಕರ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದ ಅವರನ್ನು ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪರೇಡ್ ಮೂಲಕ ಗೌರವ ವಂದನೆ ನೀಡಿ ಬರಮಾಡಿಕೊಂಡರು.  ನಂತರದಲ್ಲಿ ಶಾಲೆಯ ಕಂಠಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಒಳ್ಳೆಯ ಕನಸು ಕಾಣಬೇಕು.  ಧನಾತ್ಮಕ ಮನೋಧರ್ಮ ಬೆಳೆಸಿಕೊಳ್ಳಬೇಕು.  ಅವಕಾಶ ಸಿಕ್ಕರೆ ಪ್ರವಾಸ ಮಾಡಬೇಕು.  ಪ್ರವಾಸ ಕೂಡ ಒಂದು ಒಳ್ಳೆಯ ಶಿಕ್ಷಣ ಎಂದು ಹೇಳಿದರು.

ಭಾರತೀಯ ಸೇನೆಯ ಉಪದಂಡನಾಯಕ ಬಿ. ಎಸ್. ರಾಜು ಅವರನ್ನು ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸ್ವಾಗತಿಸಿದರು

ಶಾಲೆಯ ಪ್ರಿನ್ಸಿಪಾಲ್ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಸ್ಟ್ ಶಾಲೆಯ ವಾರ್ಷಿಕ ವರದಿ ವಾಚನ ಮಾಡಿದರು.

ಈ ಶಾಲೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಲ್ಲ ಸಿಬ್ಬಂದಿಯನ್ನು ಬಿ. ಎಸ್. ರಾಜು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.  ಅಲ್ಲದೇ, ನಾನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಿದರು.  ಈ ಕಾರ್ಯಕ್ರಮದ ನಂತರ ನಡೆದ ನಾನಾ ಮನರಂಜನೆ ಕಾರ್ಯಕ್ರಮಗಳು ಗಮನ ಸೆಳೆದವು.

ಈ ಸಮಾರಂಭಕ್ಕೂ ಬಿ. ಎಸ್. ರಾಜು ಅವರು ಶಾಲೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಶಂಕುಸ್ಥಾಪನೆ ಮಾಡಿದರು.

ಮುಂದಿನ ವರ್ಷ ವಿಜಯಪುರ ಸೈನಿಕ ಶಾಲೆಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಆಚರಿಸಲಾಗುವ ವಜ್ರಮಹೋತ್ಸವದ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಮಧ್ಯಾಹ್ನ ಶಾಲೆಯಲ್ಲಿ ನಡೆದ ಜಿಮ್ನಾಸ್ಟಿಕ್, ಕವಾಯತು ಮತ್ತು ಇತರ ದೈಹಿಕ ಚಟುವಟಿಕೆಗಳ ಪ್ರದರ್ಶನದಲ್ಲಿಯೂ ಅವರು ಪಾಲ್ಗೋಂಡು ಸ್ಪೂರ್ತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿಜಯಪುರದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದ್ಯಾಮಣ್ಣನವರು, ಶಾಲೆಯ ಉಪ ಪ್ರಾಚಾರ್ಯೆ ಕಮಾಂಡರ್ ಸುರುಚಿ ಗೌರ್, ಶಾಲೆಯ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆಕಾಶ್ ವತ್ಸ್ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌