ವಿಜಯಪುರ: ವಿಜಯಪುರ ಆಕಾಶವಾಣಿ ಕೇಂದ್ರ ಜ್ಞಾನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದ್ದಾರೆ.
ನಗರದ ರೇಡಿಯೋ ಕೇಂದ್ರದಲ್ಲಿ ನಡೆದ ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದತು.
1997ರ ಸೆ. 18 ರಂದು ವಿಜಯಪುರ ಆಕಾಶವಾಣಿ ಕೇಂದ್ರ ಸ್ಥಾಪನೆಯಾಯಿತು. ಅಂದಿನಿಂದ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಯಿತು. ಈ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯ ಜನತೆಯ ಬಹುವರ್ಷಗಳ ನಿರೀಕ್ಷೆ, ಹಂಬಲ, ಹೋರಾಟ, ಕನಸುಗಳು ಆ ವೇಳೆಯಲ್ಲಿ ಸಾಕಾರಗೊಂಡಿತು ಎಂದು ಅವರು ತಿಳಿಸಿದರು.
ವಿಜಯಪುರ ಆಕಾಶವಾಣಿ ಕೆಂದ್ರವು 1997ರಿಂದಲೂ ತನ್ನ ಮೂಲ ಧೇಯೋದ್ದೇಶಗಳಾದ ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗಳಿಗೆ ಅನುಗುಣವಾಗಿ ನಾನಾ ಕಾರ್ಯಕ್ರಮಗಳನ್ನು ಬಿತ್ತರಿಸಿ, ಜ್ಞಾನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಡಿಸಿ ತಿಳಿಸಿದರು.
ನಮ್ಮ ಸಂಸ್ಕೃತಿ, ಇತಿಹಾಸಗಳ ಎಲ್ಲಾ ಬೇರುಗಳು ಆಕಾಶವಾಣಿಯ ಧ್ವನಿ ಮುದ್ರಿಕೆಗಳಲ್ಲಿ ಭದ್ರವಾಗಿವೆ. ಇದೆ ಆಕಾಶವಾಣಿಯ ವಿಶೇಷತೆಯಾಗಿದೆ. ಈ ನೆಲದ ಜನಪದ ಸಿರಿಯಾದ ಗೀಗಿ, ಲಾವಣಿ, ಗೋಂಧಳಿ, ಲಂಬಾಣಿ, ಚೌಡಕಿ, ಪಾರಿಜಾತ, ಭಜನೆ, ಹಂತಿ ಪದಗಳು ಈಗಲೂ ಡಿಜಿಟಲ್ ಮಾಧ್ಯಮದಲ್ಲಿ ಸುರಕ್ಷಿತವಾಗಿರುವುದು ಆಕಾಶವಾಣಿ ಕೇಂದ್ರದ ಬಹುದೊಡ್ಡ ಕೊಡುಗೆಯಾಗಿದೆ ಎಙದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದರು.
ಈಗ ಪ್ರತಿ ದಿನ ಅಂದಾಜು 15 ಲಕ್ಷ ಜನರಿಗೆ ಪ್ರಸಾರ ಸೇವೆ ಒದಗಿಸುತ್ತಿರುವ ಆಕಾಶವ಼ಿ ಕೇಂದ್ರವು ನಾಡಿನ ಸೇವೆಯಲ್ಲಿ ತೊಡಗಿದೆ ಎಂಬುದು ಜಿಲ್ಲೆಯ ಜನತೆಗೆ ಅಭಿಮಾನದ ಸಂಗತಿಯಾಗಿದೆ. ಕಳೆದ 25 ವರ್ಷಗಳಿಂದಲೂ ಕೇಂದ್ರದಿಂದ ಅನೇಕ ಸೃಜನಶೀಲ ಹಾಗೂ ಕ್ರಿಯಾಶೀಲ ಕಾರ್ಯಕ್ರಮಗಳು ಸುಗಮವಾಗಿ ನಡೆದಿರುವುದರ ಹಿಂದೆ ಈ ಕೇಂದ್ರದ ತಾಂತ್ರಿಕ ಹಾಗೂ ಆಡಳಿತ ಅಧಿಕಾರಿಗಳು, ಸಿಬ್ಬಂದಿ ವರ್ಗದ ಶ್ರಮವಿದೆ. ಕೇಂದ್ರದಲ್ಲಿರುವ ಎಲ್ಲರೂ ಆಕಾಶವಾಣಿಯನ್ನು ಜನಸ್ನೇಹಿ ಹಾಗೂ ಜನಪರವಾಗಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಅವರ ಪ್ರಯತ್ನದಿಂದ ಅನೇಕ ಗೌರವ ಸನ್ಮಾನಗಳು ಕೇಂದ್ರಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಮುಂಬರುವ ದಿನಗಳಲ್ಲಿ ಈ ಕೇಂದ್ರ ಇನ್ನು ಹೆಚ್ಚಿನ ಉತ್ಸಾಹ, ಹುರುಪುಗಳೊಂದಿಗೆ ಈ ನಾಡಿನ ಜನಸೇವೆಯಲ್ಲಿ ತೊಡಗಿಕೊಂಡು ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿ ಹೊರಹೊಮ್ಮುವ ವಿಶ್ವಾಸವನ್ನು ವಿಜಯಪುರ ಆಕಾಶವಾಣಿ ಕೇಂದ್ರವು ಹೊಂದಿದೆ. ಕೇಳುಗ ಪ್ರಭುಗಳಾದ ನಾವುಗಳು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುತ್ತ ಸಂಪೂರ್ಣ ಸಹಕಾರ, ಬೆಂಬಲ ನೀಡೋಣ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದರು.
ಈ ವೇಳೆ, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂಪೀರ ವಾಲೀಕಾರ ಅವರು ಮಾತನಾಡಿ, ವಿಜಯಪುರ ಆಕಾಶವಾಣಿಯು ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವರಿಗೆ ಅವಶ್ಯಕವಾದ ಕಾರ್ಯಕ್ರಮಗಳನ್ನು ಕಳೆದ 25 ವರ್ಷಗಳಿಂದಲೂ ನೀಡುತ್ತ ಬಂದಿದೆ. ಆಕಾಶವಾಣಿ ಹಬ್ಬ, ರೈತರಿಗೆ ಸಾವಯವ ಕೃಷಿ ತರಬೇತಿ, ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣ, ಬಿಎಲ್‌ಡಿಇ ಆರೋಗ್ಯದಂಗಳ ಕಾರ್ಯಕ್ರಮ, ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸ್ವಾತಂತ್ರ‍್ಯ ಹೋರಾಟಗಾರರ ಬಗೆಗಿನ ಇತಿಹಾಸದ ಸರಣಿ ಜೊತೆಗೆ ಇನ್ನು ಅನೇಕ ಸರಣಿ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತ ಬಂದಿರುವುದು ಈ ಕೇಂದ್ರದ ವಿಶೇಷವಾಗಿದೆ ಎಂದು ತಿಳಿಸಿದರು
ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕಲಾವಿದರನ್ನು, ಸಾಧಕ ಕೃಷಿಕರನ್ನು ಹುಡುಕಿ, ಗುರುತಿಸಿ ಅವರನ್ನು ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಆಕಾಶವಾಣಿ ಈಗಲೂ ನಿರಂತರ ಮಾಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವಿಜಯಪುರ ಆಕಾಶವಾಣಿ
ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಬಿ. ವಿ. ಶ್ರೀಧರ ಪ್ರಾಸ್ತಾವಿಕ ಮಾತನಾಡಿ, ವಿಜಯಪುರ ಆಕಾಶವಾಣಿಯು ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಜನರ ಆಪ್ತ ಮಿತ್ರನಾಯಿತು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ರೇಡಿಯೋ ಸೆಟ್ ಕೇಳುಗರ ಸಂಖ್ಯೆ ಶೇ.54ರಷ್ಟ್ಟು ಇತ್ತು. ಆದರೆ ಅವುಗಳ ಉತ್ಪಾದನೆ ಕಡಿಮೆಯಾಗಿದೆ. ಅಲ್ಲದೇ, ಮೊಬೈಲ್ ಮೂಲಕ ಕೇಳುವ ಸೌಲಭ್ಯ ದೊರೆತಿರುವುದರಿಂದ ರೇಡಿಯೋ ಸೆಟ್ ಕೇಳುಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೊಬೈಲ್ ಮೂಲಕ ಕೇಳುವರ ಸಂಖ್ಯೆ ಶೇ.85 ರಷ್ಟಾಗಿದೆ. ಈಗ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಆಕಾಶವಾಣಿಯು ತಂತ್ರಜ್ಞಾನದ ಎಲ್ಲ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ನ್ಯೂಸ್ ಆನ್ ಏರ್ ಆ್ಯಪ್ ಮೂಲಕ ಶ್ರೋತೃಗಳು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ವಿಶ್ವದ ಯಾವುದೇ ಭಾಗದಲ್ಲಿಯೂ ಕೇಳಬಹುದಾಗಿದೆ ಎಂದು ತಿಳಿಸಿದರು.
ಚಿಂತನ, ಭಕ್ತಿಗೀತೆ, ಚಿತ್ರಗೀತೆ, ವಾಟ್ಸಪ್ ಮೆಚ್ಚಿನ ಹಾಡು, ಜನಪದ ಹಾಡು, ಸುದ್ದಿ, ರೂಪಕ, ನಾಟಕ, ಸಂದರ್ಶನ, ಭಾಷಣ, ನೇರ ಪ್ರಸಾರ, ಫೋನ್–ಇನ್, ಕಿಸಾನ್ ವಾಣಿ, ಆರೋಗ್ಯ, ಯುವಕಾರಂಜಿ, ಯುವವಾಣಿ, ಬಾನುಲಿ ವರದಿ, ಚರ್ಚೆ, ಕವಿತಾ ವಾಚನ, ಸ್ವಾತಂತ್ರ‍್ಯ ಹೋರಾಟ ಹೆಜ್ಜೆಗಳು, ಮುಂತಾದ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಈಗಲೂ ಕೇಂದ್ರದಿಂದ ಪ್ರತಿದಿನ ಪ್ರಸಾರವಾಗುತ್ತಿವೆ ಎಂದು ತಿಳಿಸಿದರು.
ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ವಿಜಯಪುರ ಆಕಾಶವಾಣಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕಾಶವಾಣಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್. ಎಸ್. ಶೇಖ ಮತ್ತು ಆಕಾಶವಾಣಿಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.
ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ. ಸೋಮಶೇಖರ ರುಳಿ ವಂದಿಸಿದರು. ಶಿವಕುಮಾರ ಮತ್ತು ಮಹಾನಂದ ಅವರು ನಿರೂಪಿಸಿದರು.
ಚಿಂತನ ಗೋಷ್ಠಿ
ಕಾರ್ಯಕ್ರಮದಲ್ಲಿ ಚಿಂತನ ಗೋಷ್ಠಿಗಳು ನಡೆದವು. ನಾಟಕಕಾರ, ಜನಪದ ಸಾಹಿತಿ ಬಿ. ಆರ್. ಪೊಲೀಸ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ. ಸೋಮಶೇಖರ ವಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದಾ ತೋಳಬಂದಿ, ಕೃಷಿ ಇಲಾಖೆಯ ಆತ್ಮಾ ಯೋಜನೆಯ ಉಪಯೋಜನಾ ನಿರ್ದೇಶಕ ಡಾ. ಎಂ. ಬಿ. ಪಟ್ಟಣಶೆಟ್ಟಿ, ಪರಿಸರವಾದಿ ಅಂಬಾದಾಸ ಜೋಶಿ ಅವರು ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನಂತರ ನಡೆದ ಕೇಳುಗರಿಂದ ಕೇಳುಗರಿಗೆ ಕಾರ್ಯಕ್ರಮದಲ್ಲಿ ನ್ಯಾಮತ್ ಭಾಷಾ ಹುಣಶ್ಶಾಳ, ಕಲ್ಯಾಣಿ ಪತ್ತಾರ, ಸಾಕ್ಷಿ ಬಿರಾದಾರ, ಅನಂತ ಟೀಕಾರೆ ಗುರುರಾಜ ಪತ್ತಾರ ಭಾಗವಹಿಸಿದ್ದರು.