Earthquake Reading: ಕಾಟಾಚಾರಕ್ಕೆ ಆರಂಭಿಸಲಾಯ್ತಾ ಉಕ್ಕಲಿಯ ಭೂಕಂಪನ ಮಾಪನ ತಾತ್ಕಾಲಿಕ ಕೇಂದ್ರ? ಡಿಸಿ, ಎಸ್ಪಿ, ಸಿಇಓ, ಸುನೀಲಗೌಡರಿಗಿರುವ ಕಾಳಜಿ ಸರಕಾರಕ್ಕೆ ಯಾಕಿಲ್ಲ?

ಮಹೇಶ ವಿ. ಶಟಗಾರ

ವಿಜಯಪುರ: ಕಳೆದ ಆಗಷ್ಟನಿಂದ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಆಗಾಗ ಉಂಟಾಗುತ್ತಿರುವ ಭೂಕಂಪನ ಜಿಲ್ಲೆಯ ಜನರಲ್ಲಿ ಸಾಕಷ್ಟು ಆತಂಕವನ್ನು ಮೂಡಿಸಿದೆ.

ಜಿಲ್ಲೆಯ ಜನರಲ್ಲಿರುವ ಭಯ ದೂರ ಮಾಡಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿಗಳ ತಂಡವನ್ನು ವಿಜಯಪುರಕ್ಕೆ ಕರೆಯಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜನರಲ್ಲಿ ನಾನಾ ಗ್ರಾಮಗಳಲ್ಲಿ ಸಭೆಗಳನ್ನೂ ಮಾಡಿದ್ದರು.  ಸಾರ್ವಜನಿಕರಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳ ಮೂಲಕವೇ ಭರವಸೆ ಕೊಡಿಸಿದ್ದರು.

ಅಷ್ಟೇ ಅಲ್ಲ, ಭೂಕಂಪನದ ಮೇಲೆ ಹೆಚ್ಚಿನ ನಿಗಾ(ಕ್ಲೋಸ್ ಮಾನಿಟರಿಂಗ್) ವಹಿಸಲು ವಿಜಯಪುರಕ್ಕೆ ಆಗಮಿಸಿರುವ ವೈಜ್ಞಾನಿಕ ಅಧಿಕಾರಿಗಳಾದ ಎಸ್. ಜಗದೀಶ ಹಾಗೂ ಕಿರಿಯ ವೈಜ್ಞಾನಿಕ ಅಧಿಕಾರಿ ಡಾ. ರಮೇಶ ದಿಕ್ಪಾಲ್ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲೆಯ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಕ್ಕಲಿಯಲ್ಲಿ ಭೂಕಂಪನ ಮಾಪನ ತಾತ್ಕಾಲಿಕ ಕೇಂದ್ರದಲ್ಲಿರುವ ಯಂತ್ರ

ಮೊದಲಿಗೆ ಉಕ್ಕಲಿ ಗ್ರಾಮಕ್ಕೆ ತೆರಳಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಆರಂಭಿಸಿದ್ದರು.  ಆಗಷ್ಟ 26 ರಂದು ಆರಂಭವಾದ ಈ ಕೇಂದ್ರ ಕೇವಲ ಜನರ ಕಣ್ಣೊರೆಸುವ ತಂತ್ರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಲಾಗಿರುವ ಈ ಕೇಂದ್ರ ಉಕ್ಕಲಿಯ ಸರಕಾರಿ ಶಾಲೆಯ ಕೋಣೆಯೊಂದರಲ್ಲಿ ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತ ಕುಳಿತಿದೆ.

ಈವರೆಗೂ ಭೇಟಿ ನೀಡದ ಅಧಿಕಾರಿಗಳು

ಉಕ್ಕಲಿ ಗ್ರಾಮಸ್ಥರ ಪ್ರಕಾರ ತಮ್ಮ ಊರಿನಲ್ಲಿ ಭೂಕಂಪನ ಅಧ್ಯಯನ ತಾತ್ಕಾಲಿಕ ಕೇಂದ್ರ ಆರಂಭವಾಗಿ ಇಂದಿಗೆ 23 ದಿನಗಳಾಗುತ್ತ ಬಂದರೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿಗಳ ಯಾವೊಬ್ಬ ಸಿಬ್ಬಂದಿ ಇಲ್ಲಿಗೆ ಈವರೆಗೆ ಭೇಟಿ ನೀಡಿಲ್ಲ.  ಮೇಲಾಗಿ ಈ ಕೇಂದ್ರದಲ್ಲಿ ದಾಖಲಾಗುವ ಭೂಗರ್ಭದ ಚಲನವಲನಗಳನ್ನು ಪರಿಶೀಲಿಸಲು ವಿಜಯಪುರ ಜಿಲ್ಲೆಯ ಅಧಿಕಾರಿಗಳಿಗೂ ಸಾಧ್ಯವಾಗುತ್ತಿಲ್ಲ.  ಏಕೆಂದರೆ, ಇದನ್ನು ವೀಕ್ಷಿಸಲು ಬೆಂಗಳೂರಿನಿಂದಲೇ ಸಿಬ್ಬಂದಿ ಬರಬೇಕಿದೆ.

ಯಂತ್ರ ಅಳವಡಿಸಿದ ಮೇಲೂ ಬೆಂಗಳೂರು ಅವಲಂಬನೆ ತಪ್ಪಿಲ್ಲ

ಮೇಲಾಗಿ ಉಕ್ಕಲಿಯಲ್ಲಿ ಭೂಕಂಪನ ಮಾಪನ ತಾತ್ಕಾಲಿಕ ಕೇಂದ್ರ ಆರಂಭಿದ ನಂತರವೂ ಹಲವಾರು ಬಾರಿ ಮತ್ತೆ ಭೂಕಂಪನ ಉಂಟಾಗಿದೆ.  ಆದರೆ, ಈ ಭೂಕಂಪನದ ಕೇಂದ್ರಬಿಂದು ಮತ್ತು ರಿಕ್ಚರ್ ಮಾಪಕದಲ್ಲಿ ಅದರ ತೀವ್ರತೆ ತಿಳಿದುಕೊಳ್ಳಲು ಬೆಂಗಳೂರಿನ ಅಧಿಕಾರಿಗಳನ್ನೇ ಸಂಪರ್ಕಿಸಿದ ಘಟನೆಗಳೂ ನಡೆದಿವೆ.

ಆ. 26 ರಂದು ನಾನಾ ಗ್ರಾಮಗಳಿಗೆ ತೆರಳಿ ಜನರಲ್ಲಿ ಭೂಕಂಪನದ ಬಗ್ಗೆ ಇರುವ ಆತಂಕ ನಿವಾರಿಸಲು ಸಭೆ ಮಾಡಿದ್ದ ಅಧಿಕಾರಿಗಳು

ಡಿಜಿಟಲ್ ಯುಗದಲ್ಲಿಯೂ ಮ್ಯಾನ್ಯೂವಲ್ ಆಗಿಯೇ ಮಾಹಿತಿ ಪಡೆಯಬೇಕು

ಇದು ಡಿಜಿಟಲ್ ಯುಗ.  ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಮಾಹಿತಿಯನ್ನು ಥಟ್ಟನೆ ತಿಳಿದುಕೊಳ್ಳಬಹುದು.  ಆದರೆ, ಉಕ್ಕಲಿಯಲ್ಲಿರುವ ಕೇಂದ್ರದಿಂದ ಮಾಹಿತಿಯನ್ನು ಪಡೆಯಲು ಅಧಿಕಾರಿ ಅಥವಾ ಸಿಬ್ಬಂದಿ ಬೆಂಗಳೂರಿನಿಂದಲೇ ಬರಬೇಕು.  ಈ ಕೇಂದ್ರಕ್ಕೂ ಬೆಂಗಳೂರಿನಲ್ಲಿರು ಕಚೇರಿಗೂ ಅಂತರ್ಜಾಲದಲ್ಲಿ ಯಾವುದೇ ರೀತಿಯಲ್ಲಿ ಸಂಪರ್ಕವೇ ಇಲ್ಲ ಎಂದು ಮಾಹಿತಿ ಲಭ್ಯವಾಗಿದೆ.  ಹೀಗಾಗಿ ಗುಮ್ಮಟ ನಗರಿ ಖ್ಯಾತಿಯ ಜಿಲ್ಲೆಯಲ್ಲಿ ಭೂಗರ್ಭದಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಸ್ಪಷ್ಟ ಮಾಹಿತ ಲಭ್ಯವಾಗದೇ ವಿಜಯಪುರ ಜಿಲ್ಲಾಡಳಿತ ಕೂಡ ಪರದಾಡುವಂತಾಗಿದೆ.

ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ ಮತ್ತು ಜಿ. ಪಂ. ಸಿಇಓ ರಾಹುಲ ಶಿಂಧೆ ಮಾತ್ರ ಜನರಲ್ಲಿರುವ ಭೂಕಂಪನದ ಆತಂಕ ನಿವಾರಿಸಲು ಶ್ರಮಪಡುತ್ತಿದ್ದಾರೆ.  ಆದರೆ, ವಿಜಯಪುರ ಜಿಲ್ಲಾಡಳಿತಕ್ಕೆ ಇರುವ ಈ ಜನಪರ ಕಾಳಜಿ ದೂರದ ರಾಜಧಾನಿಯಲ್ಲಿ ಕುಳಿತಿರುವ ಅಧಿಕಾರಿಗಳ ಇಲ್ಲದಿರುವುದು ವಿಪರ್ಯಾಸವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಭೂಕಂಪನದ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿರುವ ಎಂ ಎಲ್ ಸಿ ಸುನೀಲಗೌಡ ಪಾಟೀಲ

ಸದನದಲ್ಲಿ ಭೂಕಂಪನ ಬಗ್ಗೆ ಧ್ವನಿ ಎತ್ತಿರುವ ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ ಜಿಲ್ಲೆಯ ಜನರಿಗೆ ಭೂಕಂಪನದ ಬಗ್ಗೆ ಇರುವ ಆತಂಕದ ಬಗ್ಗೆ ಈಗಾಗಲೇ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದಿದ್ದಾರೆ.  ಇದಕ್ಕೆ ಉತ್ತರಿಸಿರುವ ಕಂದಾಯ ಸಚಿವ ಆರ್. ಅಶೋಕ, ಜನರಲ್ಲಿರುವ ಭಯ ಹೋಗಲಾಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂಬ ಉತ್ತರವನ್ನು ನೀಡಿದ್ದಾರೆ. ಆದರೆ, ಬೆಂಗಳೂರಿನ ಅಧಿಕಾರಿಗಳು ಮಾತ್ರ ಮೌನವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

Leave a Reply

ಹೊಸ ಪೋಸ್ಟ್‌