Cycling Help: ಯುವ ಸೈಕ್ಲಿಸ್ಟ್ ಭಾವನೆಗಳಿಗೆ ಸ್ಪಂದಿಸಿದ ಎಂ. ಬಿ. ಪಾಟೀಲ- ರೂ. 3 ಲಕ್ಷ ಆರ್ಥಿಕ ನೆರವು

ವಿಜಯಪುರ: ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸೈಕ್ಲಿಂಗ್ ಕ್ರೀಡಾಪಟುವಿಗೆ ನೆರವಾಗುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ಅವರು ಸಹಾಯ ಹಸ್ತ ಚಾಚಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಗ್ರಾಮದ ಭಾವನಾ ಪಾಟೀಲ ಸೈಕ್ಲಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದು, ಸೈಕ್ಲಿಂಗ್ ಕ್ರೀಡಾ ಕೂಟಗಳಲ್ಲಿ ಸ್ವಂತ ಸೈಕಲ್ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಎಂ. ಬಿ. ಪಾಟೀಲ ಅವರು ಭಾವನಾ ಪಾಟೀಲ ಅವರಿಗೆ ರೂ. 3 ಲಕ್ಷ ಆರ್ಥಿಕ ನೆರವು ನೀಡುವ ಮೂಲಕ ಯುವ ಪ್ರತಿಭಾವಂತ ಕ್ರೀಡಾಪಟುವಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

ಯುವತಿಯ ತಂದೆ ಮಹಾದೇವ ಪಾಟೀಲ ಮತ್ತು ತಾಯಿ ಶ್ರೀದೇವಿ ಪಾಟೀಲ ಅವರಿಗೆ ಎಂ. ಬಿ. ಪಾಟೀಲ ಚೆಕ್ ವಿತರಿಸಿದರು

ಸದ್ಯಕ್ಕೆ ಭಾವನಾ ಪಾಟೀಲ ಸೈಕ್ಲಿಂಗ್ ತರಬೇತಿಗಾಗಿ ಮೈಸೂರಿನಲ್ಲಿದ್ದಾರೆ.  ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ಮಹಾದೇವ ಪಾಟೀಲ ಮತ್ತು ತಾಯಿ ಶ್ರೀದೇವಿ ಪಾಟೀಲ ಅವರಿಗೆ ಶಾಸಕರು ಚೆಕ್ ವಿತರಿಸಿದರು.  ಈ ಸಂದರ್ಭದಲ್ಲಿ ಗ್ರಾಮಸ್ಥರು ಕೂಡ ಉಪಸ್ಥಿತರಿದ್ದರು.

ಚೆಕ್ ವಿತರಿಸಿ ಮಾತನಾಡಿದ ಎಂ. ಬಿ. ಪಾಟೀಲ ಅವರು, ಯುವತಿ ಸೈಕ್ಲಿಂಗ್ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾವನಾ ತಂದೆ ಮಹಾದೇವ ಪಾಟೀಲ, ನಮ್ಮ ಮಗಳಿಗೆ ಸೈಕ್ಲಿಂಗ್ ಎಂದರೆ ತುಂಬಾ ಇಷ್ಟ ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದಾಳೆ.  ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾನಾ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾಳೆ.  ಅವಳಿಗೆ ಉತ್ತಮ ಸೈಕಲ್ ಕೊಡಿಸಲು ಸಾಧ್ಯವಾಗದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ನಮಗೆ ಎಂ. ಬಿ. ಪಾಟೀಲ ಅವರು ದೇವರ ರೂಪದಲ್ಲಿ ಬಂದು ಸಹಾಯ ಮಾಡಿದ್ದಾರೆ.  ಅವರಿಗೆ ಋಣಿಯಾಗಿರುತ್ತೇವೆ ಎಂದು ಹೇಳಿದರು.

ಸೈಕ್ಲಿಷ್ಟ್ ಭಾವನಾ ಪಾಟೀಲ

ಭಾವನಾ ತಾಯಿ ಶ್ರೀದೇವಿ ಪಾಟೀಲ ಮಾತನಾಡಿ, ನನ್ನ ಪತಿ ಮಹಾದೇವ ಪಾಟೀಲ ಪಿಕೆಪಿಎಸ್‍ನಲ್ಲಿ ಕೆಲಸ ಮಾಡುತ್ತಾರೆ.  ಮೂರು ಮಕ್ಕಳನ್ನು ಹೊಂದಿರುವ ಕುಟುಂಬ ನಮ್ಮದು.  ಹಿರಿಯ ಮಗಳು ಭಾವನಾಳಿಗೆ ಬಾಲ್ಯದಿಂದಲೇ ಸೈಕಲ್ ಎಂದರೆ ಇಷ್ಟ.  ಈಗ ಉತ್ತಮ ಸಾಧನೆ ಮಾಡುತ್ತಿದ್ದಾಳೆ.‌‌‌  ಮುಂದಿನ ತಿಂಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸ್ವಂತ ಸೈಕಲ್ ಇರಲಿಲ್ಲ.  ಹೊಸ ಸೈಕಲ್ ಕೊಡಿಸಲು ಸಾಧ್ಯವಾಗದೆ ಪರದಾಡುತ್ತಿದ್ದೇವು.  ಈ ವಿಷಯ ತಿಳಿದ ಎಂ. ಬಿ. ಪಾಟೀಲ ಅವರು ನಮಗೆ ರೂ. 3 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. ‌ ಈ ಮೂಲಕ ಸೈಕ್ಲಿಂಗ್ ಕ್ಷೇತ್ರದಲ್ಲಿ ನಮ್ಮ ಮಗಳು ಹೆಚ್ಚಿನ ಸಾಧನೆ ಮಾಡಲು ನೆರವಾಗಿದ್ದಾರೆ ಎಂದು ಆನಂದಭಾಷ್ಪ ಸುರಿಸಿದರು.

ಚೆಕ್ ವಿತರಣೆ ಸಂದರ್ಭದಲ್ಲಿ ಭಾವನಾಳ ತಂದೆ ಮಹಾದೇವ ಪಾಟೀಲ, ತಾಯಿ ಶ್ರೀದೇವಿ ಪಾಟೀಲ, ಬಿ. ಎಲ್. ಡಿ. ಇ ಮುಖ್ಯ ಆಡಳಿತಾಧಿಕಾರಿ ಡಾ. ಆರ್.‌ ವಿ.‌ ಕುಲಕರ್ಣಿ, ನಿರ್ದೇಶಕ ಸಂಗು ಸಜ್ಜನ, ಕ್ರೀಡಾ ನಿರ್ದೇಶಕ ಎಸ್.‌ ಎಸ್.‌‌ ಕೋರಿ, ಕೈಲಾಸ ಹಿರೇಮಠ, ಅಶೋಕ ಕಾಖಂಡಕಿ, ಶ್ರೀಶೈಲ ತಪಸೆ, ಸಿದ್ದರಾಯ ಪ್ರದಾನಿ, ಈಶ್ವರಪ್ಪ ಬಂಗಾರಿ, ಹೊನಮಲಪ್ಪ ಹಟ್ಟಿ, ಈಶ್ವರ ಅಳ್ಳಗಿ, ಮಲ್ಲು ತುಂಗಳ ಸೇರಿದಂತೆ ಹೆಬ್ಬಾಳಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌