ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸರಕಾರಿ ಶಾಲೆಗಳಲ್ಲಿ ಇರುವ ಮೂಲಭೂತ ಸೌಕರ್ಯಗಳ ಕೊರತೆಯ ಕುರಿತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಸರಕಾರದ ಗಮನ ಸೆಳೆದಿದ್ದಾರೆ.
ವಿಧಾನ ಪರಿಷತನಲ್ಲಿ ಈ ಕುರಿತು ಧ್ವನಿ ಎತ್ತಿರುವ ಅವರು ವಿಜಯಪುರ ಮತ್ತು ಬಾಗಲಕೊಟ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಯಾವ್ಯಾವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಸರ್ಕಾರದಿಂದ ಮಾಹಿತಿ ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ, ಉಭಯ ಜಿಲ್ಲೆಗಳ 165 ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು ಮತ್ತು ಕಂಪೌಂಡ್‍ಗಳ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ವಿಜಯಪುರ ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಸರಕಾರಿ ಶಾಲಾ ಕಟ್ಟಡಗಳು ಮತ್ತು ಈ ಕಟ್ಟಡಗಳ ದುರಸ್ತಿಗೆ ಕೈಗೊಂಡಿರುವ ಕ್ರಮಗಳ ಕುರಿತು ಸುನೀಲಗೌಡ ಪಾಟೀಲ ಮತ್ತೊಂದು ಪ್ರಶ್ನೆಯ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಚಿವ ಬಿ.ಸಿ.ನಾಗೇಶ ವಿಜಯಪುರ ಜಿಲ್ಲೆಯಲ್ಲಿ 459 ಸರ್ಕಾರಿ ಶಾಲೆಗಳಲ್ಲಿ 763 ಶಾಲಾ ಕೊಠಡಿಗಳ ಮರುನಿರ್ಮಾಣ ಮಾಡಬೇಕಿದೆ. ಅಲ್ಲದೇ, 29 ಶಾಲೆಗಳ 61 ಕೊಠಡಿಗಳನ್ನು ದುರಸ್ಥಿ ಮಾಡಬೇಕಿದೆ. 2022-23 ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ ರೂ.30 ಲಕ್ಷದಂತೆ ಒಟ್ಟು ರೂ.2.40 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ವಿವೇಕ ಯೋಜನೆಯಡಿ 178 ಪ್ರಾಥಮಿಕ ಶಾಲಾ ಕೊಠಡಿಗಳು ಮತ್ತು 22 ಪ್ರೌಢ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ನರೇಗಾ ಯೋಜನೆಯಡಿ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರಸ್ಥಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು 14-15 ಹಣಕಾಸು ಆಯೋಗದಲ್ಲಿ ಸಂಬಂಧಿಸಿದ ಗ್ರಾಮಪಂಚಾಯತಗಳಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಈಗಾಗಲೇ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಜೆಟ್‍ನಲ್ಲಿ ಒದಗಿಸಲಾದ ಅನುದಾನದ ಲಭ್ಯತೆ ಮತ್ತು ಅಗತ್ಯತೆಗೆ ತಕ್ಕಂತೆ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸುನೀಲಗೌಡ ಪಾಟೀಲ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುನೀಲಗೌಡ ಪಾಟೀಲ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಗಳಲ್ಲಿ ಇಷ್ಟೋಂದು ಸಂಖ್ಯೆಯ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳು ಇರಬೇಕಾದರೆ ರಾಜ್ಯದ ಒಟ್ಟು ಸರ್ಕಾರಿ ಶಾಲೆಗಳಲ್ಲಿ ಪರಿಸ್ಥಿತಿ ಹೇಗಿರಬಹುದು? ಎಂಬುದು ಚಿಂತೆಗೆ ಕಾರಣವಾಗಿದೆ. ಇದು ಶಿಕ್ಷಣ ಇಲಾಖೆಯ ಮೂಲಭೂತ ಸೌಕರ್ಯಗಳ ಕಡೆಗಣನೆಗೆ ಸಾಕ್ಷಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.