Parties Offer: ಬಿಜೆಪಿ ಕಾಂಗ್ರೆಸ್ಸಿನಿಂದ ಪಕ್ಷ ಸೇರಲು ಆಫರ್ ಬರ್ತಿವೆ- ನಾಗಠಾಣ ಮತಕ್ಷೇತ್ರದ ಅಭಿವೃದ್ಧಿಗೆ ಸಚಿವ ಕಾರಜೋಳ ಅಡ್ಡಿಯಾಗಿದ್ದಾರೆ- ಡಾ. ದೇವಾನಂದ ಚವ್ಹಾಣ ಆರೋಪ

ವಿಜಯಪುರ: ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪಕ್ಷ ಸೇರುವಂತೆ ಆಫರ್ ಬಂದಿವೆ.  ಆದರೆ, ಅವುಗಳ ಬಗ್ಗೆ ನಾನು ಇನ್ನೂವರೆಗೆ ತಲೆ ಕೆಡಿಸಿಕೊಂಡಿಲ್ಲ.  ಈಗ ಜೆಡಿಎಸ್ ನಲ್ಲಿದ್ದೇನೆ.  ಇಲ್ಲಿಯೇ ಮುಂದುವರೆಯುವ ನಿರ್ಧಾರವಿದೆ.  ಮುಂದಿನ ನಿರ್ಧಾರ ಯಾರ ಕೈಯಲ್ಲಿಯೂ ಇಲ್ಲ ಎಂದು ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪಿಸಿದಂತೆ ಬೇರೆ ಪಕ್ಷಗಳಿಂದ ಆಫರ್ ಬರ್ತಿವೆ.  ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ಪಕ್ಷಕ್ಕೆ ಬರುವಂತೆ ಒತ್ತಡ ಇದೆ.  ಕಾಂಗ್ರೆಸ್ ಅಷ್ಟೇ ಅಲ್ಲ, ಬಿಜೆಪಿಯಿಂದಲೂ ಪಕ್ಷಕ್ಕೆ ಬರುವಂತೆ ಒತ್ತಡ ಇದೆ.  ಬಿಜೆಪಿಯಲ್ಲಿ ದೊಡ್ಡವರಿದ್ದರಿಂದಲೂ ನನಗೆ ಆಹ್ವಾನ ಇದೆ ಎಂದು ಅವರು ತಿಳಿಸಿದರು.

ನಾನು ಯಾವ ಪಕ್ಷದಲ್ಲಿ ಇರಬೇಕು ಎಂಬುದನ್ನು ಕ್ಷೇತ್ರದ ಜನರ ನಿರ್ಧಾರ ತೆಗೆದುಕೊಳ್ಳುತ್ತಾರೆ.  ನಾನು ತೆಗೆದುಕೊಳ್ಳುವುದಿಲ್ಲ.  ನಾನು ವೈಯಕ್ತಿಕವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ.  ಜನರ ನಿರ್ಧಾರವೇ ನನ್ನ ನಿರ್ಧಾರ.  ಪಕ್ಷ ಬದಲಾವಣೆ ಮಾಡಬೇಕೆಂದೇನಿಲ್ಲ.  ಆದರೆ, ನಿರ್ಧಾರಗಳು ಮುಂದೆ ಗೊತ್ತಾಗುತ್ತವೆ.  ಜೆಡಿಎಸ್ ನಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಅವರು ಹೇಳಿದರು.

ಜೆಡಿಎಸ್ ನಲ್ಲಿ ಕಾರ್ಯಕರ್ತರೆ ಲೀಡರ್ಸ್.  ಜೆಡಿಎಸ್ ಕಾರ್ಯಕರ್ತರ ನಿಲುವು ಗಟ್ಟಿ ಇದೆ.  ಜೆಡಿಎಸ್ ನಲ್ಲಿ ಇರುವಷ್ಟು ಘನತೆ ಮತ್ತು ಗೌರವ ಯಾವ ಪಕ್ಷದಲ್ಲಿಯೂ ಇಲ್ಲ.  ದೇವೇಗೌಡ, ಕುಮಾರಣ್ಣ, ಇಬ್ರಾಹಿಂ ಎಲ್ಲರೂ ಒಳ್ಳೆಯ ಕುಟುಂಬದಿಂದ ಬಂದಿದ್ದಾರೆ.  ಅವರ ಬಗ್ಗೆ ಬಹಳಷ್ಟು ಗೌರವವಿದೆ.  ಅದರ ಬಗ್ಗೆ ಯಾವುದೇ ತಕರಾರಿಲ್ಲ.  ಆ ಮನೆತನದ ಮೇಲೆ ಬಹಳಷ್ಟು ನನ್ನ ಮೇಲೆ ಅವರ ಪ್ರೀತಿ ಇದೆ.  ಅವರ ಮೇಲೆ ನನಗೆ ಪ್ರೀತಿ.  ರಾಜಕೀಯ ಮತ್ತು ಗೌರವದ ಬಗ್ಗೆ ನನಗೆ ಯಾವುದೇ ಕೊರತೆಯಿಲ್ಲ ಎಂದು ಡಾ. ದೇವಾನಂದ ಚವ್ಹಾಣ ಹೇಳಿದರು.

ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ ಜಿಲ್ಲೆಯಲ್ಲಿ ನೀವು ಏಕಾಂಗಿಯಾಗಿದ್ದೀರಿ ಎಂಬ ಪ್ರಶ್ನೆಗೆ 2023ಕ್ಕೆ ಕುಮಾರಣ್ಣನೇ ಸಿಎಂ ಆಗುತ್ತಾರೆ.  ಸಮ್ಮಿಶ್ರ ಬರುವುದು ಖಚಿತ.  ಅದರಲ್ಲಿ ಯಾರೂ ಹಣೆಬರಹ ಬದಲಾವಣೆ ಬದಲಾಗುವುದಿಲ್ಲ.  ಯಾರು ಏನೇ ಹೇಳಿದರೂ ಕುಮಾರಣ್ಣನೇ ಸಿಎಂ.  ನಾನು ಬೇರೆ ಪಕ್ಷ ಸೇರುವ ಕುರಿತು ಮುಹೂರ್ತ ಕೂಡಿ ಬಂದಿಲ್ಲ ಎಂದು ಶಾಸಕರು ತಿಳಿಸಿದರು.

ಸಚಿವ ಗೋವಿಂದ ಕಾರಜೋಳ ವಿರುದ್ಧ ಆಕ್ರೋಶ

ಇದೇ ವೇಳೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಶಾಸಕರು, ನಾನು ಯಾವುದೋ ಮೂಲದಿಂದ ಅನುದಾನ ತಂದಿದ್ದೇನೆ.  ಎಲ್ಲ ಕ್ಷೇತ್ರಗಳಿಗೆ ತಲಾ ರೂ. 25 ಕೋ. ಅನುದಾನ ನೀಡಿದ್ದಾರೆ.  ನನಗೆ ಅದರಲ್ಲಿ ರೂ. 5 ಕೋ. ಕಡಿಮೆ ಮಾಡಿ ರೂ. 20 ಕೋ. ನೀಡಿದ್ದಾರೆ.  ಆದರೆ, ನಾನು ಬೇರೆ ಮೂಲಗಳಿಂದ ಅದರ ನಾಲ್ಕು ಪಟ್ಟು ಹೆಚ್ಚಿಗೆ ಹಣ ತಂದು ಕೆಲಸ ಮಾಡಿದ್ದೇನೆ.  ಅದು ಬೇರೆ ವಿಷಯ.  ಇವರ ನೈತಿಕತೆ ಎಷ್ಟಿದೆ ಎಂಬುದು ನನಗೆ ಗೊತ್ತಿದೆ.  ಅವರ ಇಲಾಖೆಯಿಂದ ಮತ್ತು ಬೇರೆ ಬೇರೆ ಇಲಾಖೆಯಿಂದ ಹಣ ತಂದು ಕೆಲಸ ಮಾಡಿದ್ದೇನೆ.  ಇದಕ್ಕೆ ಅವರು ಕಾರಣ ಎನ್ನುವುದಿಲ್ಲ.  ಅವರ ಸರಕಾರವೇ ಕಾರಣ.  ನನ್ನ ಕೆಲಸಗಳು ಮಾತನಾಡುತ್ತಿವೆಯೇ ಹೊರತು ನಾನು ಮಾತನಾಡುತ್ತಿಲ್ಲ. ಮತಕ್ಷೇತ್ರದ ಜನ ಮಾತನಾಡುತ್ತಿದ್ದಾರೆ.  70 ವರ್ಷಗಳಲ್ಲಿ ಆಗದ ಕೆಲಸಗಳನ್ನು ನಾನು ಮಾಡಿದ್ದೇನೆ.  ವಿಜಯಪುರನ ನಗರದಲ್ಲಿ ಅಭಿವೃದ್ಧಿಯಾಗದ ವಾರ್ಡುಗಳಲ್ಲಿ ನಾನು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

ನಾಗಠಾಣದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ.  ಅಲ್ಲಿನ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಅದು ಮೇಲ್ದರ್ಜೆಗೇರಿದೆ.  ಹೀಗಾಗಿ ಎಲ್ಲ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಸರಕಾರ ಮತ್ತು ಸ್ಥಳೀಯ ಶಾಸಕರ ಜವಾಬ್ದಾರಿ.  ಅದನ್ನು ಬಿಟ್ಟು ರಸ್ತೆಯ ಮೇಲೆ ಬಸ್ ನಿಲ್ದಾಣ ನಿರ್ಮಿಸುತ್ತೇವೆ ಎಂದರೆ ಅದು ವೈಜ್ಞಾನಿಕವೋ ಅವೈಜ್ಞಾನಿಕವೋ ನೀವೇ ಯೋಚನೆ ಮಾಡಿ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಓರ್ವ ಸಚಿವ, ಅವರು ಯೋಗ್ಯರಿದ್ದಾರೋ ಅಯೋಗ್ಯರಿದ್ದಾರೋ ಎಂಬುದನ್ನು ನಾನು ಹೇಳುವುದಿಲ್ಲ.  ಯಾವುದೋ ಇಲಾಖೆಯಿಂದ ಮಂಜೂರಾದ ಕಾಮಗಾರಿಗಳಿಗೆ ಅವರು ಬಂದು ಟಿಕಾವ್ ಹಿಡಿದುಕೊಂಡು ಕೂಡುತ್ತಾರೆ.  ಘನ ಸರಕಾರದ ಘನ ಮತ್ತು ಗೌರವ ವ್ಯಕ್ತಿಯಾಗಿ ಇಂಥ ಕೀಳುಮಟ್ಟದ ರಾಜಕಾರಣಕ್ಕೆ ಬರಬಾರದು.  ಅವರಿಗ ಮಾಡಲು ಸಾಕಷ್ಟು ಕೆಲಸಗಳಿವೆ.  ರೇವಣಸಿದ್ಧೇಶ್ವರ ಏತ ನೀರಾವರಿಗೆ ಸಮ್ಮಿಶ್ರ ಸರಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ರೂ. 250 ಕೋ. ಬಿಡುಗಡೆ ಮಾಡಿದ್ದರು.  ಮೂರು ವರ್ಷಗಳ ವರೆಗೆ ತಡೆ ಹಿಡಿದವರು ಯಾರು? ಮೊನ್ನೆ ಅದನ್ನು ಘೋಷಣೆ ಮಾಡಿದ್ದಾರೆ.  ತಡೆ ಹಿಡಿದ ಕಾಮಗಾರಿಗಳನ್ನು ಘೋಷಣೆ ಮಾಡಿ ಇವರು ತಾವೇ ಮಾಡಿದ್ದಾರೆ ಎಂದರೇ ಇವರೇನು ಗ್ರೇಟ್? ಇಂಥ ಕೆಲಸಗಳನ್ನೇ ಇವರು ಮಾಡುತ್ತ ಬಂದಿದ್ದಾರೆ ಹೊರತಾಗಿ ಯಾವುದೇ ಅಭಿವೃದ್ಧಿ ಕೆಲಸವನ್ನು ಕ್ಷೇತ್ರದಲ್ಲಿ ಮಾಡಲಿಲ್ಲ.  ನಾಗಠಾಣ ಬಸ್ ನಿಲ್ದಾಣ ಕಾಮಗಾರಿ ಸಚಿವ ಬಿ. ಶ್ರೀರಾಮುಲು ವ್ಯಾಪ್ತಿಗೆ ಬರುತ್ತದೆ.  ಅವರು ಬಂದು ಕೆಲಸ ಮಾಡಲಿ.  ಆದರೆ, ಏನೂ ಸಂಬಂಧ ಇರುವ ಬಂದು ಭೂಮಿ ಪೂಜೆ ಮಾಡುತ್ತಾರೆ.  ಚಣೇಗಾಂವ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ.  ಅದನ್ನು ಪಿ ಡಬ್ಲ್ಯೂ ಡಿ ಸಚಿವರು ಬಂದು ಮಾಡಲಿ.  ಅದನ್ನು ಬಿಟ್ಟು ಜಲಸಂಪನ್ಮೂಲ ಸಚಿವರು ಭೂಮಿ ಪೂಜೆ ಮಾಡುತ್ತಾರೆ.  ಇಂಥ ಕೀಳುಮಟ್ಟದ ರಾಜಕಾರಣ ಸರಿಯಲ್ಲ ಎಂದು ಶಾಸಕರು ಹೇಳಿದರು.

ನನಗೆ ಅಡೆತಡೆ ಬಿಡಿ.  ನಾಗಠಾಣ ಮತಕ್ಷೇತ್ರದ ಜನತೆಗೆ ಅಡೆತಡೆ ಮಾಡುತ್ತಿದ್ದಾರೆ.  ನಾಗಠಾಣ ಮತಕ್ಷೇತ್ರದ ಜನರಿಗೆ ಅಡ್ಡಿ ಮಾಡುತ್ತಿದ್ದಾರೆ.  ಅವರಿಗೆ ತಮ್ಮ ಚಿರಂಜೀವಿ ಮೇಲೆ ಪ್ರೀತಿ, ಗೌರವ ಇದ್ದರೆ, ನಾಗಠಾಣ ಮತಕ್ಷೇತ್ರದಲ್ಲಿ ನಿಂತು ಕ್ಷೇತ್ರಕ್ಕೆ ಅನುದಾನ ಘೋಷಣೆ ಮಾಡಲಿ ಎಂದು ಸಚಿವ ಗೋವಿಂದ ಕಾರಜೋಳ ವಿರುದ್ಧ ಡಾ. ದೇವಾನಂದ ಚವ್ಹಾಣ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಗುಲಾಬಚಂದ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌