ವಿಜಯಪುರ: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬಸವ ನಾಡಿನ ವಿದ್ಯಾರ್ಥಿ ರಾಕೇಶಕುಮಾರ ಹೊನ್ನಳ್ಳಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಐಐಟಿ ಸೇರುವುದು ದೊಡ್ಡ ಕನಸಾಗಿರುತ್ತದೆ. ಭಾರತದ ಪ್ರತಿಷ್ಠಿತ ಐಐಟಿಯಲ್ಲಿ ಓದಲು ನಡೆಸಲಾಗುವ ಪ್ರವೇಶ ಪರೀಕ್ಷೆಯೂ ಅಷ್ಟೇ ಕಠಿಣವಾಗಿರುತ್ತದೆ. ಈ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಪಾಸು ಮಾಡಿದ್ದಷ್ಟೇ ಅಲ್ಲ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ವಿದ್ಯಾರ್ಥಿ ಬಸವ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಶಿಕ್ಷಕ ದಂಪತಿ ಚಂದ್ರಶೇಖರ ಹೊನ್ನಳ್ಳಿ ಹಾಗೂ ಅರುಣಾ ಇವರ ಪುತ್ರ ರಾಕೇಶಕುಮಾರ ಹೊನ್ನಳ್ಳಿ ವಿಜಯಪುರ ನಗರದ ಪ್ರತಿಷ್ಠಿತ ರವೀಂದ್ರನಾಥ ಠಾಗೋರ್ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿಯಲ್ಲಿ ಶೇ. 94ರಷ್ಟು ಅಂಕಗಳಿಸಿದ್ದಾನೆ. ಅಲ್ಲದೇ, ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಶೇ. 99.6 ಅಂಕ ಗಳಿಸುವ ಮೂಲಕ ಓಬಿಸಿ ಆಲ್ ಇಂಡಿಯಾ ಪಟ್ಟಿಯಲ್ಲಿ 890ನೇ ಸ್ಥಾನ ಪಡೆದಿದ್ದಾನೆ. ಈ ಮೂಲಕ ಮುಂದಿನ ವಿದ್ಯಾಭ್ಯಾಸಕ್ಕೆ ದೆಹಲಿಯ ಐಐಟಿ ಮಂಡಿಯಲ್ಲಿ ಪ್ರವೇಶಕ್ಕೆ ಅವಕಾಶ ಪಡೆದಿದ್ದಾನೆ.
ಈ ವಿದ್ಯಾರ್ಥಿಯ ಸಾಧನೆಯ ರವೀಂದ್ರನಾಥ ಠ್ಯಾಗೋರ ಕಾಲೇಜಿನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿಯ ಸಾಧನೆಗೆ ಮೆಚ್ಚಿರುವ ಛತ್ರಪತಿ ಶಿವಾಜಿ ಮಹಾರಾಜ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಶಿವಾಜಿ ಗಾಯಕವಾಡ ವಿದ್ಯಾರ್ಥಿಯನ್ನು ಕಾಲೇಜಿಗೆ ಕರೆಯಿಸಿ ಸನ್ಮಾನಿಸಿ ಗೌರವಿಸಿದರು. ಅಲ್ಲದೇ, ಸಿಹಿ ತಿನ್ನಿಸಿ ಅಭಿನಂಧಿಸಿದರು.
ಬಳಿಕ ಮಾತನಾಡಿದ ವಿದ್ಯಾರ್ಥಿ ರಾಕೇಶಕುಮಾರ ತಾನು ಪ್ರತಿದಿನ ಎಂಟರಿಂದ 10 ಗಂಟೆ ಅಭ್ಯಾಸ ಮಾಡುತ್ತಿದ್ದೆ. ತಂದೆ- ತಾಯಿ ಹಾಗೂ ರವೀಂದ್ರನಾಥ ಠಾಗೋರ್ ಕಾಲೇಜಿನ ಉಪನ್ಯಾಸಕರ ನಿರಂತರ ಪ್ರೋತ್ಸಾಹದಿಂದಾಗಿ ತಾನು ಈ ಸಾಧನೆ ಮಾಡಲು ಕಾರಣವಾಗಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದಿ ಮತ್ತಷ್ಟು ಸಾಧನೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗನ ಸಾಧನೆ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಯ ತಂದೆ ಚಂದ್ರಶೇಖರ ಹೊನ್ನಳ್ಳಿ, ನನ್ನ ಮಗನ ಸಾಧನೆ ನಮ್ಮ ಕುಟುಂಬಕ್ಕೆ ಸಂತಸ ತಂದಿದೆ ಎಂದು ಹೇಳಿದರು.
ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದ ಬಳಿಕ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ, ರಾಕೇಶ ಕುಮಾರ ಸಾಧನೆ ಬಹಳ ಸಂತಸ ತಂದಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿ ಸಾಧನೆ ಮಾಡಿರುವುದು ಕಾಲೇಜಿನ ಉಪನ್ಯಾಸಕರ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಕೇಶಕುಮಾರ ಸಾಧನೆ ನಮ್ಮೆಲ್ಲರಿಗೂ ಮುಂದಿನ ಸಾಧನೆಗೆ ಪ್ರೇರಣೆಯಾಗಿದೆ. ರಾಕೇಶಕುಮಾರ ಇನ್ನಷ್ಟು ಉನ್ನತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ಈ ವಿದ್ಯಾರ್ಥಿಯ ಸಾಧನೆ ಬಸವ ನಾಡಿನ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ರಾಕೇಶಕುಮಾರ ಹೊನ್ನಳ್ಳಿ ಮತ್ತಷ್ಟು ಸಾಧನೆ ಮಾಡಲಿ ಎಂದು ಬಸವ ನಾಡು ವೆಬ್ ಕೂಡ ಶುಭ ಹಾರೈಸುತ್ತದೆ.