ವಿಜಯಪುರ: ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಜಿ. ಪಂ. ಸಿಇಓ ರಾಹುಲ ಶಿಂಧೆ ಸ್ವತಃ ಕಸಬರಿಗೆ ಹಿಡಿದು ಚಾಲನೆ ನೀಡಿದರು. ಇದರಿಂದ ಪ್ರೇರೇಪಣೆಗೊಂಡ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸ್ವಚ್ಛತಾಗಾರರು ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತಿ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ವಚ್ಛತಾ ಹಿ ಸೇವಾ ಆಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಈ ವರ್ಷದಲ್ಲಿ ಅ. 2ರ ವರೆಗೆ ಸ್ವಚ್ಛತಾ ಹಿ ಸೇವಾ ಆಂದೋಲನ ನಡೆಯಲಿದೆ. ಇದರ ಅಂಗವಾಗಿ ಮಸೂತಿ ಗ್ರಾಮದಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಸ್ಥಳಗಳಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವುದು ಮತ್ತು ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಇಡೀ ಗ್ರಾಮವನ್ನು ಸಂಪೂರ್ಣ ಕಸ ಮುಕ್ತವಾಗುವ ರೀತಿಯಲ್ಲಿ ಹಾಗೂ ಮಾದರಿ ಗ್ರಾಮ ಪಂಚಾಯಿತಿಯಾಗುವಂತೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಗ್ರಾ. ಪಂ. ಜವಾಬ್ದಾರಿಯಾಗಿದೆ. ಸ್ವಚ್ಛತಾ ಕಾರ್ಯವನ್ನು ಕೇವಲ 15 ದಿನಗಳಿಗೆ ಮಾತ್ರ ಸೀಮಿತವಾಗದಂತೆ ವರ್ಷವಿಡೀ ಸ್ವಚ್ಛತೆ ಕಾರ್ಯವನ್ನು ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ನಾವು ನಮ್ಮ ಮನೆಯಂತೆ ಗ್ರಾಮವನ್ನು ಸಹ ಶುಚಿಯಾಗಿಡಬೇಕು. ಆಗ ಮಾತ್ರ ನಮ್ಮ ಮಕ್ಕಳು ಶಿಕ್ಷಣ ಪಡೆಯುವುದರೊಂದಿಗೆ ಆರೋಗ್ಯವಂತರಾಗಿ ಇರುತ್ತಾರೆ. ಗ್ರಾಮವನ್ನು ಸ್ವಚ್ಛಗೊಳಿಸುವುದು ಗ್ರಾ. ಪಂ. ಮಾತ್ರವಲ್ಲ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ. ಗ್ರಾಮಗಳಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಾದರಿಯಾಗಿ 40 ಗ್ರಾಮ ಪಂಚಾಯಿತಿಗಳ ಸ್ವಚ್ಛ ವಾಹಿನಿಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಇದರರ್ಲಿ ಮಸೂತಿ ಗ್ರಾ. ಪಂ. ಕೂಡ ಒಂದಾಗಿದೆ. ಅವುಗಳ ಚಲನ-ವಲನಗಳ ಮೇಲೆ ಖುದ್ದಾಗಿ ಜಿ. ಪಂ. ಹಾಗೂ ತಾ. ಪಂ. ಮಟ್ಟದಲ್ಲಿ ನಿಗಾ ಇಡಲಾಗಿದೆ ಎಂದು ರಾಹುಲ ಶಿಂಧೆ ತಿಳಿಸಿದರು.
ವಿಜಯಪುರ ಜಿ. ಪಂ. ಯೋಜನಾ ನಿರ್ದೇಶಕ ಹಾಗೂ ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಉಸ್ತುವಾರಿ ಅಧಿಕಾರಿ ಸಿ. ಬಿ. ದೇವರಮನಿ ಅವರು ಮಾತನಾಡಿ, ಈಗಾಗಲೇ ಪಂಚಾಯತಿಗಳಲ್ಲಿ ಹಸಿ ಕಸ, ಒಣ ಕಸ ಸಂಗ್ರಹಣೆಗೆ ಪ್ರತಿ ಮನೆ-ಮನೆ ಹಂತದಲ್ಲಿ ಪ್ರತಿ ಕುಟುಂಬಕ್ಕೆ ತಲಾ ಎರಡು ಕಸದ ಬುಟ್ಟಿಗಳನ್ನು ನೀಡಲಾಗಿದೆ. ಸಮುದಾಯ ಹಂತದಲ್ಲಿಯೂ ಕೂಡ ಕಸ ಸಂಗ್ರಹಣೆಗೆ ಸಮುದಾಯ ಹಂತದ ಕಸದ ಬುಟ್ಟಿಗಳನ್ನು ಜಿ. ಪಂ. ಯಿಂದ ನೀಡಲಾಗಿದೆ. ಇವುಗಳನ್ನು ಸಮರ್ಪಕವಾಗಿ ಬಳಸಬೇಕು ಮತ್ತು ಗ್ರಾಮದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಹೇಳಿಿದರು.
ಇದೇ ವೇಳೆ ಸ್ವಚ್ಛ ಮೇವ ಜಯತೆಯ ಪ್ರತಿಜ್ಞೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಕೊಲ್ಹಾರ ತಾ. ಪಂ. ಕಾರ್ಯ ನಿರ್ವಾಹಣಾಧಿಕಾರಿ ಫರೀದಾಬಾನು ಎಚ್. ಪಠಾಣ, ಮಸೂತಿ ಗ್ರಾ. ಪಂ. ಅಧ್ಯಕ್ಷ ಸಂತೋಷ ಗಣಾಚಾರಿ, ಮಸೂತಿ ಪಿಡಿಓ ಐ. ಜಿ. ಹೊಸಮಠ, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.