Hubballi President: ಹುಬ್ಬಳ್ಳಿ- ಧಾರವಾಡ ಪಾಲಿಕೆಯಿಂದ ರಾಷ್ಟ್ರಪತಿಗೆ ಪೌರ ಸನ್ಮಾನ- ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?

ಹುಬ್ಬಳ್ಳಿ:i ಓಡಿಶಾದ ಸಾಮಾನ್ಯ ಕುಟುಂಬದ ಮಗಳನ್ನು ಸನ್ಮಾನಿಸಿ ತಾವು ಕೇವಲ ಭಾರತದ ರಾಷ್ಟ್ರಪತಿ ಮಾತ್ರವಲ್ಲ ಭಾರತದ ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಅಭಿನಂದಿಸಿದ್ದೀರಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸನ್ಮಾನುಸಿದ ಸಿಎಂ ಬಸವರಾಜ ಬೊಮ್ಮಾಯಿ

ಅವರು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಆಯೋಜಿಲಾಗಿದ್ದ ಪೌರ ಸನ್ನಾನ ಸ್ವೀಕರಿಸಿ ಮಾತನಾಡಿದರು.

ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಕುಟುಂಬ ಸಮೇತ ಆಗಮಿಸಿದ ರಾಷ್ಟ್ರಪತಿಗಳಿಗೆ ಹುಬ್ಬಳ್ಳಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಬಳಿಕ ಹುಬ್ಬಳ್ಳಿಯ ಜಿಮಖಾನ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಹಾನಗರ ಪಾಲಿಕೆ ವತಿಯಿಂದ ಪೌರ ಸನ್ಮಾನ ಮಾಡಲಾಯಿತು. ಮೇಯರ್ ಈರೇಶ ಅಂಚಟಗೇರಿ ರಾಷ್ಟ್ರಪತಿಗಳನ್ನು ಸನ್ಮಾನಿಸಿ ಗೌರವಿಸಿದರು. 900 ಗ್ರಾಂ ತೂಕದ ಸಿದ್ಧಾರೂಢ ಸ್ವಾಮೀಜಿಗಳ ಬೆಳ್ಳಿ ಮೂರ್ತಿ ಸ್ಮರಣಿಕೆಯಾಗಿ ಕೊಟ್ಟು ಯಾಲಕ್ಕಿ ಹಾರ ಹಾಕಿ ಧಾರವಾಡ ದ ಪೇಡಾವನ್ನೂ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾರತದ ಪ್ರಥಮ ಪ್ರಜೆಗೆ ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ನೀಡಿದರು.

ಪೌರ ಸನ್ಮಾನ ಸ್ವೀಕರಿಸಿ ಮಾತಮಾಡಿದ ರಾಷ್ಟ್ರಪತಿಗಳು,
ಇಲ್ಲಿನ ಜನರ ಪ್ರೀತಿಗೆ ನಾನು ಚಿರರುಣಿಯಾಗಿದ್ದೇನೆ. ಈ ಸನ್ಮಾನಕ್ಕಾಗಿ ಹುಬ್ಬಳಿ- ಧಾರವಾಡದ ಪ್ರತಿಯೊಬ್ಬ ನಾಗರಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೇ, ತಮಗೆಲ್ಲರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುವುದಾಗಿ‌ ರಾಷ್ಟ್ರಪತಿ ಹೇಳಿದರು.

ಇಲ್ಲಿಗೆ ಆಗಮಿಸಿ ನನಗೆ ಬಹಳ ಸಂತೋಷವಾಗಿದೆ. ಭಾರತದ ಐತಿಹಾಸಿಕ ನಗರಗಳ ನಿವಾಸಿಗಳಾಗಿರುವ ತಮಗೆಲ್ಲರಿಗೂ ಅಭಿನಂದನೆಗಳು. ಈ ನೆಲ ಕನ್ನಡ ಮತ್ತು ಮರಾಠಿ ಭಾಷೆಗಳ ಸಂಗಮವಾಗಿದೆ. ಎಲ್ಲ ಜಾತಿ, ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಭಾರತದ ಎರಡನೇ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಇಲ್ಲಿಗೆ ಭೇಟಿ ನೀಡಿದ್ದರು. ನಿಮ್ಮ ಬಳಿ ಆಗಮಿಸಿದ ನನಗೆ ಗೌರವದ ಭಾವನೆ ಬರುತ್ತಿದೆ ಎಂದು ದ್ರೌಪದಿ ಮುರ್ಮು ಹೇಳಿದರು.

ದ. ರಾ. ಬೇಂದ್ರೆ, ವಿ. ಕೆ. ಗೋಕಾಕ ಅವರಂಥ ಮಹಾನ್ ಸಾಹಿತಿಗಳು ಈ ಭಾಗದವರಾಗಿದ್ದಾರೆ. ಸಿಎಂ ಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿಮ್ಮ ನಡುವೆ ಹುಟ್ಟಿ ಬೆಳೆದಿದ್ದಾರೆ. ಇಂಥ ಉತ್ತಮ ನಾಯಕರನ್ನು ನೀವು ನಾಡಿಗೆ ಕೊಟ್ಟಿದ್ದೀರಿ.. ಅಣ್ಣ ಬಸವಣ್ಣನವರ ಸಾಮಾಜಿಕ ಶಿಕ್ಷಣ, ಸಿದ್ಧಾರೂಢರ ಆಧ್ಯಾತ್ಮಿಕ ಸಂದೇಶದಿಂದ ಈ ದೇಶ ಪ್ರೇರಿತವಾಗಿದೆ. ಗಂಗೂಬಾಯಿ ಹಾನಗಲ, ಬಸವರಾಜ ರಾಜಗುರು ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಆಯಾಮ ಕೊಟ್ಟಿದ್ದಾರೆ. ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು.

ಧಾರವಾಡ ಜಿಲ್ಲೆ ವಿದ್ಯಾಕಾಶಿಯಾಗಿದೆ. ಇಲ್ಲಿ ದೊಡ್ಡ ದೊಡ್ಡ ಸಾಹಿತಿಗಳು ಜನಿಸಿದ್ದಾರೆ. ವಿದ್ಯೆ ಮತ್ತು ವಿದ್ವತ್ ಎರಡೂ ಇಲ್ಲಿವೆ. ಸಿದ್ಧರೂಢರ ಆಧ್ಯಾತ್ಮಿಕತೆಯಿಂದ ಈ ನೆಲ ಪುಣ್ಯ ಭೂಮಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಗಣಿ ಮತ್ತು ಭೂವಿಜ್ಞಾನ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ , ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌