Kateel Siddharamaiah: ಮೇಡಂ ಗೆ ಹಣ ನೀಡಿ ಸಿದ್ಧರಾಮಯ್ಯ ಸಿಎಂ ಆಗಿದ್ದಾರೆ- ಕೆ ಎಫ್ ಡಿ, ಎಸ್ ಡಿ ಪಿ ಐ, ಪಿ ಎಫ್ ಐ ವಿರುದ್ಧ ಕಠಿಣ ಕ್ರಮ- ನಳೀನ ಕುಮಾರ ಕಟೀಲ

ವಿಜಯಪುರ: ಸಿದ್ಧರಾಮಯ್ಯ ಹಣ ನೀಡಿ ಸಿಎಂ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಿಸಿದ್ದಾರೆ.

ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಜಯಪುರದಲ್ಲಿ ಮಾತನಾಡಿದರು.

ಭ್ರಷ್ಟಾಚಾರದ ಆರೋಪದಡಿ ತಾವು ಜೈಲಿಗೆ ಹೋಗಬಾರದು ಎಂದು ಸಿದ್ಧರಾಮಯ್ಯ ಲೋಕಾಯುಕ್ತವನ್ನು ಮುಚ್ಚಿ ಹಾಕಿದ್ದರು.  ಈಗ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ.  ಲೋಕಾಯುಕ್ತ ಮತ್ತೆ ಬರುತ್ತೆ.  ಹಗರಣಗಳ ಬಗ್ಗೆ ಮತ್ತು ಪರ್ಸೆಂಟೇಜ್ ಬಗ್ಗೆ ಅವರು ಮಾತನಾಡುತ್ತಾರೆ.  ಅವರಿಗೆ ಆ ಬಗ್ಗೆ ಮಾತನಾಡಲು ನೈತಿಕಕತೆಯಿಲ್ಲ.  ಯೋಗ್ಯತೆಯಿಲ್ಲ ಎಂದು ಅವರು ಹೇಳಿದರು.

ಈ ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ಧರಾಮಯ್ಯ.  2013ರಲ್ಲಿ ಖರ್ಗೆ, ಮತ್ತು ಡಾ. ಜಿ. ಪರರಮೇಶ್ವರ ಹಿರಿಯ ನಾಯಕರಾಗಿದ್ದರು.  ಅಂದು ದಲಿತ ಸಿಎಂ ವಿಷಯ ಭಾರಿ ಚರ್ಚೆಯಲ್ಲಿತ್ತು.  ಡಿ. ಕೆ. ಶಿವಕುಮಾರ ಮತ್ತು ದೇಶಪಾಂಡೆ ಅವರೂ ಇದ್ದರು.  ಇಂಥ ಪ್ರಮುಖರ ಮಧ್ಯೆ ಸಿದ್ಧರಾಮಯ್ಯ ಹಣ ನೀಡಿ ಮುಖ್ಯಮಂತ್ರಿಯಾಗಿದ್ದಾರೆ.  ಮೇಡಂ ಗೆ ಹಣ ನೀಡಿ ಐದು ವರ್ಷ ಅಧಿಕಾರದಲ್ಲಿ ಉಳಿದಿದ್ದಾರೆ.  ಪೆ-ಸಿಎಂ ಎಂಬುದರಲ್ಲಿ ಎರಡು ಅರ್ಥವಿದೆ.  ಪೆ-ಕಾಂಗ್ರೆಸ್ ಮೇಡಂ ಮತ್ತೋಂದು ಪೇ-ಸಿಎಂ ಸಿದ್ಧರಾಮಯ್ಯ.  ಪೇಮೆಂಟ್ ಮಾಡಿ ಸಿದ್ಧರಾಮಯ್ಯ ತಮ್ಮ ಸೀಟನ್ನು ಗಟ್ಟಿಮಾಡಿಕೊಂಡರು.  ಪೇಮೆಂಟ್ ಮಾಡಿ ಮೇಡಂ ಅವರನ್ನು ಸಂತೋಷಪಡಿಸಿದರು.  ಹಾಗಾಗಿ ಪೇಮೆಂಟ್ ನ್ನು ತಗೊಂಡಿರುವ ಮೇಡಂ ಪೆ- ಕಾಂಗ್ರೆಸ್ ಮೇಡಂ.  ಪೇ ಯನ್ನು ಮಾಡಿರುವ ಪೆ-ಸಿಎಂ.  ಇದನ್ನು ಬುದ್ದಿವಂತಿಕೆಯಿಂದ ಡಿ. ಕೆ. ಶಿವಕುಮಾರ ಮಾಡಿದರು.  ಸಿದ್ಧರಾಮಯ್ಯ ಅವರನ್ನು ಹೊಡೆಯಲು ಈ ಪೆ-ಸಿಎಂ ಎದುರು ತಂದರು.  ಸಿದ್ಧರಾಮಯ್ಯ ಅವರಿಗೆ ಅರ್ಥವೇ ಆಗಲಿಲ್ಲ.  ಪೋಸ್ಟರ್ ಹಿಡಿದುಕೊಂಡು ಹೋಗಿದ್ದಾರೆ.  ನಮ್ಮ ಬಾಯಿಯಿಂದ ಹೇಳಿಸಲು ಡಿ. ಕೆ. ಶಿವಕುಮಾರ ಇದನ್ನು ಮಾಡಿದ್ದಾರೆ.  ಹಾಗಾಗಿ ಇದು ಸತ್ಯವಾಗಿದೆ.  ಮೇಡಂ ಚಿಲ್ಲರೆ ಪಡೆದಿರುವುದಿಲ್ಲ.  ಒಂದಿಲ್ಲ ಒಂದು ದಿನ ಸಿದ್ಧರಾಮಯ್ಯ ಅವರು ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಡಿ. ಕೆ. ಶಿವಕುಮಾರ ಅವರೇ ಹೇಳಲಿದ್ದಾರೆ.  ನಮ್ಮ ಬಾಯಿಯಿಂದ ಯಾಕೆ ಕೇಳುತ್ತೀರಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ನಳೀನಕುಮಾರ ಮರು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಿ ಎಸ್ ಐ ನೇಮಕಾತಿ ಹಗರಣ ನಡೆದಿತ್ತು.  ಯಾರನ್ನಾದರೂ ಬಂಧಿಸಿದ್ದೀರಾ? ಇಲ್ಲ.  ನಾವು ಈಗ ಡಿಐಜಿ ಯನ್ನು ಒಳಗೆ ಹಾಕಿದ್ದೇವೆ.  ಶಿಕ್ಷಕರ ಹಗರಣ ನಡೆದರೂ ಅವರು ಏನೂ ಮಾಡಿರಲಿಲ್ಲ.  ಇವತ್ತು ನಾನು ನಿರ್ಧಾರ ಕೈಗೊಂಡಿದ್ದೇವೆ.

ಡ್ರಗ್ ಮತ್ತು ಮರಳು ಮಾಫಿಯಾ ಅಡಿಯಲ್ಲಿ ಕಾಂಗ್ರೆಸ್ ಬದುಕಿತ್ತು.  ಮೇಡಂ ಗೆ ಅವರು ಮೊದಲಿಗೆ ಎಲ್ಲಿಂದ ಹಣ ತಂದು ಕೊಟ್ಟಿದ್ದರು ಎಂಬುದನ್ನು ಡಿ. ಕೆ. ಶಿವಕುಮಾರ ಅವರನ್ನು ಕೇಳೋಣ.  ಇವರು ಡ್ರಗ್ ಮತ್ತು ಸ್ಯಾಂಡ್ ಮಾಫಿಯಾದಿಂದ ಹಣ ಸಂಗ್ರಹ ಮಾಡಿದ್ದರು.  ಅದರ ಹಿಂದೆ ಮೈಸೂರಿನಲ್ಲಿ ಯಾರಾರಿದ್ದರೂ ಎಂಬುದನ್ನು ನಾನು ಹೇಳುವುದಿಲ್ಲ.  ಮೌಲ್ಯಧಾರಿತ ರಾಜಕೀಯ ಹಿನ್ನೆಲೆಯಲ್ಲಿ ನಾನು ಯಾರ ಹೆಸರನ್ನೂ ಹೇಳುವುದಿಲ್ಲ.  ಅದನ್ನು ನೀವೇ ಇತಿಹಾಸ ನೋಡಿ ತಿಳಿದುಕೊಳ್ಳಿ.  ಆ ಡ್ರಗ್ ಮತ್ತು ಸ್ಯಾಂಡ್ ಮಾಫಿಯಾ ಹಣದಲ್ಲಿ ಮೇಡಂ ಗೆ ಹಣ ಕೊಟ್ಟರು.  ಆ ಮಾಫಿಯಾವನ್ನು ಯಡಿಯೂರಪ್ಪ ಸಿಎಂ ಆದ ಮೇಲೆ ಬೊಮ್ಮಾಯಿ ಗೃಹ ಸಚಿವರಾಗಿ ನಿಯಂತ್ರಣ ಮಾಡಿದರು.  ನೀವ್ಯಾಕೆ ಅಂದು ಆ ಕೆಲಸ ಮಾಡಲಿಲ್ಲ? ಇವತ್ತು ನಮ್ಮ ಸರಕಾರ ಎಲ್ಲವನ್ನು ತನಿಖೆ ಮಾಡುತ್ತಿದೆ.  ಯಾರೇ ಭ್ರಷ್ಟಾಚಾರ ಮಾಡಿದ್ದರೂ ಜೈಲಿಗೆ ಹಾಕುತ್ತೇವೆ.  ನೀವು ಯಾವ ತನಿಖೆಯನ್ನೂ ಪಾರದರ್ಶಕವಾಗಿ ಮಾಡಲಿಲ್ಲ.  ಅದಕ್ಕಾಗಿಯೇ ಈಗ ಪೆ-ಸಿಎಂ ಕಾಂಗ್ರೆಸ್, ಭ್ರಷ್ಟಾಚಾರದ ಇನ್ನೋಂದು ಹೆಸರು ಕಾಂಗ್ರೆಸ್.  ಈ ರಾಜ್ಯವನ್ನು ಲೂಟಿ ಮಾಡಿದ್ದೇ ಕಾಂಗ್ರೆಸ್ ಎಂದು ಅವರು ವಾಗ್ದಾಳಿ ನಡೆಸಿದರು.

ಕೆ ಎಫ್ ಡಿ, ಎಸ್ ಡಿ ಪಿ ಐ, ಪಿ ಎಫ್ ಐ ವಿರುದ್ಧ ಕಠಿಣ ಕ್ರಮ

ಕೆ ಎಫ್ ಡಿ, ಎಸ್ ಡಿ ಪಿ ಐ ಈ ರಾಜ್ಯದಲ್ಲಿ ಗೊಂದಲ, ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿವೆ.  ಇದಕ್ಕೆ ಸಿದ್ಧರಾಮಯ್ಯ ಅವರೇ ಕಾರಣ.  ಅವರು ಸಿಎಂ ಆಗಿದ್ದಾಗ ಕೈಗೊಂಡ ಮೂರು ನಿರ್ಧಾರಗಳೇ ಕಾರಣ.  ಇಂಥ 2000 ಗಲಭೆಕೋರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಬಿ ರಿಪೋರ್ಟ್ ಹಾಕಿ ಅವರ ಕೇಸುಗಳನ್ನು ಹಿಂಪಡೆದರು.  ಇವರಿಗೆ ಇಂಥ ಗಲಭೆ, ಹತ್ಯೆ, ಹಲ್ಲೆ ಮಾಡಲು ಪ್ರೇರಣೆಯಾಯಿತು.  ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕರ ಮೆಲೇಯೇ ಚೂರಿ ಇರಿತ ಘಟನೆ ನಡೆಯಿತು.  ಆಗ ತಮ್ಮ ಶಾಸಕರ ಮೇಲೆಯೇ ಹಲ್ಲೆ ನಡೆದರೂ ಗಟ್ಟಿ ತೀರ್ಮಾನ ಕೈಗೊಳ್ಳಲು ಸಿದ್ಧರಾಮಯ್ಯ ಹಿಂದೇಟು ಹಾಕಿದರು.  ಇದರ ಪರಿಣಾಮವಾಗಿ ಮತಬ್ಯಾಂಕಿನ ಆಸೆಯ ರಾಜಕಾರಣದಿಂದಾಗಿ ಅವರು ಇಡೀ ರಾಜ್ಯದಲ್ಲಿ ಇವರು ಬೆಳೆದರು.  ಈಗ ನಮ್ಮ ಸರಕಾರ ಬಂದ ಮೇಲೆ ಅವರ ಬೇರುಗಳನ್ನು ನಿಯಂತ್ರಿಸಲು ಎನ್‌ ಐ ಎ ಮೂಲಕ ಅವರನ್ನು ಬಂಧಿಸುವ ಕೆಲಸ ನಡೆಯುತ್ತಿದೆ.  ಇಂಥ ದೇಶ ವಿರೋಧಿ ಕೃತ್ಯದ ಹಿಂದೆ, ಗಲಭೆ, ಹತ್ಯೆ, ಕೋಮುಭಾವನೆ ಕೆರಳಿಸುವವರ ಕೆಲಸ ಮಾಡುವ ವಿರುದ್ಧ ಗಟ್ಟಿ ನಿರ್ಧಾರ ಕೈಗೊಳ್ಳಲಾಗಿದೆ.  ಈಗ ಎನ್‌ ಐ ಎ ಕೂಡ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಜನ ಎಸ್ ಡಿ ಪಿ ಐ, ಕೆ ಎಫ್ ಡಿ ಮತ್ತು ಪಿ ಎಫ್ ಐ ಕಾರ್ಯಕರ್ತರನ್ನು ಬಂಧಿಸಿದೆ ಎಂದು ಅವರು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಈಗ ಕೆಲಸ ಮಾಡುತ್ತಿವೆ.  ಎನ್ ಐ ಎ ತಂಡದ ಪ್ರಮುಖ ಅಧಿಕಾರಿಗಳು ಮಾತ್ರ ಕೇಂದ್ರದಿಂದ ಇರುತ್ತಾರೆ.  ಕೆಳಹಂತದ ಅಧಿಕಾರಿಗಳು ರಾಜ್ಯದವರೇ ಇರುತ್ತಾರೆ.  ಪೊಲೀಸರು ಮತ್ತು ರಾಜ್ಯ ಸರಕಾರದ ಸಹಾಯದಿಂದ ಕೇಂದ್ರ ಗಟ್ಟಿಯಾದ ನಿರ್ಧಾರ ಕೈಗೊಳ್ಳಲಿದೆ.  ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬುದು ರಾಷ್ಟ್ರಭಕ್ತರ ಬೇಡಿಕೆಗಳಿವೆ.  ಅವರ ಬೇಡಿಕೆಯಂತೆ ನಿಷೇಧ ಮಾಡಲು ಒಂದಷ್ಟು ದಾಖಲೆ ಮತ್ತು ಅವರು ಮಾಡಿರುವ ಕೃತ್ಯಗಳ ಮಾಹಿತಿ ಸಂಗ್ರಹಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಇದನ್ನು ನಿಯಂತ್ರಿಸಲು ಕೇಂದ್ರ ಸರಕಾರ ಮಾಡುತ್ತದೆ.  ಎಲ್ಲ ತನಿಖೆಯಾದ ನಂತರ ಪೂರಕವಾದ ದಾಖಲೆಗಳು ಸಿಕ್ಕರೆ ಖಂಡಿತವಾಗಿಯೂ ಈ ಸಂಘಟನೆಗಳನ್ನು ನಿಷೇಧ ಮಾಡಲಾಗುತ್ತದೆ ಎಂದು ನಳೀನಕುಮಾರ ಕಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌