ವಿಜಯಪುರ: ದಸರಾ ಎಂದಾಕ್ಷಣ ನಾಡಿನ ಬಹುತೇಕ ಜನರಿಗೆ ನೆನಪಿಗೆ ಬರುವುದು ವಿಶ್ವವಿಖ್ಯಾತ ಮೈಸೂರು ದಸರಾ ಮಾತ್ರ. ಆದರೆ, ಮೈಸೂರಿನಲ್ಲಿ ನಡೆಯುವಷ್ಟು ಅದ್ಧೂರಿಯಲ್ಲದಿದ್ದರೂ ಅದರಂತೆಯೆ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಬಸವ ನಾಡಿನ ದಸರಾ ಗಮನ ಸೆಳೆಯುತ್ತಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಬಾದಲ್ಲಿ ದಸರಾ ಅಂಗವಾಗಿ ನಡೆಯುವ ತರಹೇವಾರಿ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುತ್ತಿವೆ. ನಾಡಹಬ್ಬ ದಸರಾ ಅಂಗವಾಗಿ ತಾಂಬಾದಲ್ಲಿ ನಡೆಯುವ ಉತ್ಸವಕ್ಕೆ ಗ್ರಾಮೀಣ ದಸರಾ, ಜಾನಪದ ದಸರಾ, ಉತ್ತರ ಕರ್ನಾಟಕದ ದಸರಾ ಎಂದೇ ಹೆಸರಾಗಿರುವ ಈ ಕಾರ್ಯಕ್ರಮ ಅದ್ಧೂರಿಯಾಗಿ ಸಾಗಿದೆ.
ತಾಂಬಾ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ 51ನೇ ದಸರಾ ಆಚರಣೆ ವಿಶೇಷವಾಗಿ ನಡೆಯಿತು. ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯೊಂದಿಗೆ ಸಾವಿರಾರು ಜನರ ಕಣ್ಮನ ಸೆಳೆಯಿತು. ತಾಂಬಾ ಗ್ರಾಮದ ಅಂಬಾಭವಾನಿ ಎಜುಕೇಷನ್ ಟ್ರಸ್ಟ್ ಮತ್ತು ಜಗದಂಬಾ ವಿದ್ಯಾವರ್ಧಕ ಸಂಘ ಹಾಗೂ ತಾಂಬಾದ ಸಾರ್ವಜನಿಕರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಉತ್ಸವದಲ್ಲಿ ನಾಡಿನ ಕಲಾ ತಂಡಗಳು ಭಾಗವಹಿಸಿ ಗಮನ ಸೆಳೆದವು.
ಉತ್ಸವದ ಅಂಗವಾಗಿ ಗ್ರಾಮದಲ್ಲಿ ನಾಡದೇವಿ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. 2001 ಮಂದಿ ಸುಮಂಗಲಿಯರು ಕುಂಭ ಹೊತ್ತು ಸಾಗಿದರು. ಮೆರವಣಿಗೆಯಲ್ಲಿ ಮಹಿಳೆಯರಿಂದ ಡೊಳ್ಳು ಕುಣಿತ, ನವಿಲು ಮತ್ತು ಕುದುರೆ ಕುಣಿತ, ಹೆಜ್ಜೆ ಮೇಳ, ಜಾನಪದ ನೃತ್ಯ ಹಾಗೂ ಸೃಷ್ಟಿ ಆರ್ಟ್ಸ್ ಯಕ್ಷಗಾನ, ಬ್ಯಾಂಡ್ ಕಂಪನಿ, ಬ್ಯಾಂಡ್ ವಾದನ, ಬೃಹತ್ ಉತ್ಸವ ಮೂರ್ತಿಗಳ ಪ್ರದರ್ಶನ, ಆನೆ, ಝೂಂಜ್ ಫಥಕ, ಡಿಜೆ ಸೌಂಡ್ ಸಿಸ್ಟಮ್ ಸಾರ್ವಜನಿಕರ ಗಮನ ಸೆಳೆದವು. ನಾನಾ ವೇಷಧಾರಿ ಪೌರಾಣಿಕ ಮಹನೀಯರು ಗತವೈಭವಕ್ಕೆ ಸಾಕ್ಷಿಯಾಗಿದ್ದರು.
ಆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ತಾಂಬಾ ಗ್ರಾಮಸ್ಥರು ಪುಷ್ಪಗಳ ಮಳೆ ಸುರಿಸುವ ಮೂಲಕ ಸ್ವಾಗತಿಸಿದ್ದು ಗಮನ ಸೆಳೆಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾಯ ವಿಜಯಮಹಾಂತೇಶ ಬಿ. ದಾನಮ್ಮನವರ ಪತ್ನಿ ಸಮೇತ ಆಗಮಿಸಿ ತಾಂಬಾ ದಸರಾಕ್ಕೆ ಚಾಲನೆ ನೀಡಿದರು. ಶಾಸಕ ದೇವಾನಂದ ಚವ್ಹಾಣ, ಯುವ ಮುಖಂಡರಾದ ಬಸನಗೌಡ ಎಂ. ಪಾಟೀಲ, ನಾನಾ ಸ್ವಾಮೀಜಿಗಳು, ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಉತ್ಸವಕ್ಕೆ ಸಾಕ್ಷಿಯಾದರು.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಕಳೆದ 51 ವರ್ಷಗಳಿಂದ ತಾಂಬಾದಲ್ಲಿ ಅದ್ಧೂರಿಯಾಗಿ ನಾಡದೇವಿ ಉತ್ಸವ ನಡೆಯುತ್ತಿದೆ. ನಮ್ಮ ಅಜ್ಜನ ಕಾಲದಿಂದಲೂ ಈ ಆಚರಣೆ ನಡೆಸಲಾಗುತ್ತಿದ್ದು, ನಾನೀಗ ಮೂರನೇ ತಲೆಮಾರಿಗೆ ಸೇರಿದವನಾಗಿದ್ದೇನೆ ಎಂದು ಹೇಳಿದರು.
ನಮ್ಮ ಮನೆಯ ದೇವರಾದ ಜಗದಂಬಾ ಮತ್ತು ಚಾಮುಂಡೇಶ್ವರಿ ಆಚರಣೆ ಪ್ರತಿವರ್ಷವೂ ಹೆಚ್ಚೆಚ್ಚು ಅದ್ಧೂರಿಯಾಗಿ ನಡೆಯುತ್ತಿದೆ. ಉತ್ತರ ಕರ್ನಾಟಕದ ದಸರಾ ಎಂದೇ ಈಗ ಖ್ಯಾತಿ ಹೊಂದಿದೆ. ಅಷ್ಟೇ ಅಲ್ಲ, ಜಾನಪದ ಜಾತ್ರೆ ಮತ್ತು ಜಾನಪದ ಉತ್ಸವ ಎಂದೂ ತಾಂಬಾದಲ್ಲಿ ಮನೆಮಾತಾಗಿದೆ. ಜನಪದ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿರುವ ಇಂದಿನ ಕಾಲದಲ್ಲಿ ನಮ್ಮ ಸಂಸ್ಥೆ ಮತ್ತು ಗ್ರಾಮಸ್ಖರು ಸೇರಿಕೊಂಡು ವೈಭವಯುತವಾಗಿ ಆಚರಣೆ ಮಾಡುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಕಬಡ್ಡಿ ಸೇರಿದಂತೆ ನಾನಾ ಆಟಗಳಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಗ್ರಾಮೀಣ ಸೊಬಗನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ ಎಂದು ಡಾ. ದೇವಾನಂದ ಚವ್ಹಾಣ ತಿಳಿಸಿದರು.