ವಿಜಯಪುರ: ನಗರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರ ಬಳಿ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿಸಿರುವ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುಣ್ಯಭೂಮಿ ವಿಜಯಪುರಕ್ಕೆ ಪ್ರತಿ ಭಾರಿ ಭೇಟಿ ನೀಡಿದಾಗಲೂ ಈ ನೆಲದ ಸ್ಪರ್ಶದಿಂದಾಗಿ ನಾಡಿನಲ್ಲಿ ಹಲವಾರು ಕೆಲಸ ಮಾಡುವ ಸ್ಫೂರ್ತಿದಾಯಕ ಜ್ಞಾನ ಪಡೆದಿದ್ದೇನೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯ ಸಿದ್ದೇಶ್ವರ ಶ್ರೀಗಳ ಆಶೀರ್ವಾದದ ಬಲದೊಂದಿಗೆ ಈ ನಾಡಿಗೆ ಒಳಿತಾಗುವ ಕೆಲಸ ಮಾಡುತ್ತಿದ್ದೇನೆ. ವಿದ್ಯಾನಿದಿ ಯೋಜನೆಯನ್ನು ರೈತರ ಮಕ್ಕಳಿಗಷ್ಟೇ ಅಲ್ಲ; ನೇಕಾರ, ಮೀನುಗಾರಿಕೆ, ಕೃಷಿ ಕೂಲಿ ಕಾರ್ಮಿಕ, ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗು ಸಹ ಸಿಗುವ ಹಾಗೆ ಘೋಷಣೆ ಮಾಡಿದ್ದೇನೆ. ರಾಜ್ಯ ಸರ್ಕಾರವು ದುಡಿಯುವ ವರ್ಗದ ಜನರಿಗೂ ಅನುಕೂಲತೆಗಳನ್ನು ಕಲ್ಪಿಸುತ್ತಿದೆ. ಈ ಮೊದಲು ದುಡ್ಡೆ ದೊಡ್ಡಪ್ಪ ಅನ್ನುತ್ತಿದ್ದರು, ಈಗ ದುಡಿಮೆಯೇ ದೊಡ್ಡಪ್ಪ ಅನ್ನುವಂತಹ ಬದಲಾವಣೆಯಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಸೇರಿದಂತೆ ಇತರ ಎಲ್ಲ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಪ್ರೀತಿ ವಿಶ್ವಾಸದಲ್ಲಿ ಬಂದಿಯಾಗಿದ್ದೇನೆ. ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಬದ್ದನಾಗಿದ್ದೇನೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ನವ ಕರ್ನಾಟಕ ನಿರ್ಮಾಣದಲ್ಲಿ ವಿಜಯಪುರ ಜಿಲ್ಲೆಯ ಪಾಲು ದೊಡ್ಡದಾಗಿದೆ ಎಂದು ಅವರು ಹೇಳಿದರು.
ಬಹಳಷ್ಟು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೊಳಗಾದ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಸಕ್ಕರೆ ಕಾರ್ಖಾನೆಗಳಿದ್ದು ಈ ಭಾಗದಲ್ಲಿ ನೀರಾವರಿ ಪ್ರದೇಶವು ಇನ್ನಷ್ಟು ವಿಸ್ತರಿಸÀಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅಭಿವೃದ್ಧಿ ಕಾಮಗಾರಿಗೆ 10 ಸಾವಿರ ಕೋಟಿ ರೂ.ಗಳನ್ನು ತೊಡÀಗಿಸಿ ಕಾಮಗಾರಿ ಆರಂಭಿಸುವ ಪ್ರಕ್ರಿಯೆ ನಡೆಸಲಾಗುವುದು. ಮುಳುಗಡೆ ಆಗುವ ಗ್ರಾಮಗಳಿಗೆ ಪರಿಹಾರ ಕೊಡುವ ಕಾರ್ಯವನ್ನು ಕೂಡ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.
ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈಗಾಗಲೇ ದ್ರಾಕ್ಷಾ ಬೆಳೆಗಾರರಿಗೆ 35 ಕೋಟಿ ರೂ.ಗಳನ್ನು ನೀಡಿದ್ದು ಇನ್ನೂ 100 ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ಈಗಾಗಲೇ ಘೋಷಿಸಲಾಗಿದೆ. ವಿಜಯಪುರ ಮತ್ತು ಕಲಬುರಗಿ ಎರಡು ಜಿಲ್ಲೆಗಳಲ್ಲಿ ಟೆಕ್ಸಟೈಲ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ಈ ಕಾರ್ಯವನ್ನು ಮುಂದಿನ ಮೂರು ತಿಂಗಳೊಳಗೆ ಆರಂಭಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ವಿಜಯಪುರ ಜಿಲ್ಲೆಗೆ ಆಹ್ವಾನಿಸಿ, ವಿಜಯಪುರ ಜಿಲ್ಲೆಯ ಬಹುನಿರೀಕ್ಷೆಯ ವಿಮಾನ ನಿಲ್ದಾಣದ ಲೋಕಾರ್ಪಣೆಯನ್ನು ಮುಂಬರಲಿರುವ ಜನವರಿಯಲ್ಲಿ ಮಾಡುವುದಾಗಿ ತಿಳಿಸಿದ ಅವರು, ವಿಜಯಪುರ, ಬಾಗಲಕೋಟೆ ಮತ್ತು ವಿಜಯನಗರ ಮೂರು ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿ ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜ್‌ಗಳ ಸ್ಥಾಪನೆ ಮಾಡುವುದಾಗಿ ತಿಳಿಸಿದರು. ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರು ಎಲ್ಲ ವಯಸ್ಸಿನ ಜನರಿಗೆ ಕಾರ್ಯಕ್ರಮ ಕೊಟ್ಟಿದ್ದಾರೆ. ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ನಾವುಗಳು 21ನೇ ಶತಮಾನದ ಭಾರತವನ್ನು ಕಟ್ಟಬೇಕಿದೆ. ಭಾರತವನ್ನೇ ಇಟ್ಟುಕೊಂಡು ಯಾವುದೇ ದೇಶದ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎನ್ನುವುದು ನಮ್ಮ ದೇಶದ ಬೆಳವಣಿಗೆಯಾಗಿದೆ. ಇದುವರೆಗೆ 210 ಕೋಟಿ ಲಸಿಕೆ ನೀಡಿದ ಹೆಮ್ಮೆ ನಮ್ಮದಾಗಿದೆ ಎಂದು ತಿಳಿಸಿದರು.
ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ನಗರ ಮತಕ್ಷೇತ್ರದ ಶಾಸಕರಾದ ಬಸನಗೌಡ ಆರ್ ಪಾಟೀಲ ಯತ್ನಾಳ ಅವರು ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪೌರ ಸನ್ಮಾನ: ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ಪೌರ ಸನ್ಮಾನ ನಡೆಯಿತು. ಇದೆ ವೇಳೆ ಮುಖ್ಯಮಂತ್ರಿಗಳು ನಾನಾ ಇಲಾಖೆಗಳಿಂದ ಸೌಲಭ್ಯ ವಿತರಣೆ ಮಾಡಿದರು. 101 ಜನರಿಗೆ ವಸತಿಗೆ ಸಂಬಂಧಿಸಿದ ಹಕ್ಕು ಪತ್ರಗಳ ವಿತರಣೆ ಕಾರ್ಯಕ್ರಮ ಕೂಡ ನಡೆಯಿತು.
ಸಮಾರಂಭದಲ್ಲಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಸಿ. ಸಿ. ಪಾಟೀಲ, ಆನಂದ್ ಸಿಂಗ್,ಗೋವಿಂದ ಕಾರಜೋಳ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ಸೋಮನಗೌಡ ಬಿ.ಪಾಟೀಲ ಸಾಸನೂರ, ರಮೇಶ ಭೂಸನೂರ, ಡಾ. ವೀರಣ್ಣ ಚರಂತಿಮಠ, ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಎನ್. ಎಂ. ರವಿನಾರಾಯಣ ರೆಡ್ಡಿ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಕವಟಗಿ, ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಎಸ್ಪಿ ಡಾ. ರಾಮ ಲಕ್ಷ್ಣಣಸಾ ಅರಸಿದ್ದಿ, ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ರಾಮಚಂದ್ರ ಗಡಾದೆ, ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ ಮುಂತಾದವರು ಉಪಸ್ಥಿತರಿದ್ದರು.
ಎಚ್. ಎಂ. ಮಮದಾಪುರ, ರಾಜಶೇಖರ ದೈವಾಡೆ, ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು.