ವಿಜಯಪುರ: ನಗರದಲ್ಲಿರುವ ರಾಜ್ಯದ ಮೊದಲ ಸೈನಿಕ ಶಾಲೆಯಲ್ಲಿ ನಿರ್ಮಿಸಲಾಗಿರುವ ಆ್ಯಸ್ಟ್ರೋಟರ್ಫ್ ಹಾಕಿ ಮೈದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಕಿ ಆಡುವ ಮೂಲಕ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ಸೈನಿಕ ಶಾಲೆ ಭಾರತದಲ್ಲಿಯೇ ಉತ್ಕೃಷ್ಟ ಶಾಲೆಯಾಗಿದೆ. ದೇಶದಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ. ಇಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು. ಇಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಭವಿಷ್ಯದಲ್ಲಿ ಉನ್ನತ ಅಧಿಕಾರಿಗಳಾಗಿ, ಎನ್ ಡಿ ಎ ದಲ್ಲಿ ಅವಕಾಶ ಪಡೆಯುವುದರ ಮೂಲಕ ಉನ್ನತ ಅಧಿಕಾರಿಗಳಾಗಿ ದೇಶ ಸೇವೆಯಲ್ಲಿ ತೊಡಗಬೇಕು. ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ಪ್ರಾಂಶುಪಲ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್ ಮಾತನಾಡಿ, ಉತ್ತರ ಕರ್ನಾಟಕದ ಮೊದಲ ಆ್ಯಸ್ಚ್ರೋಟರ್ಫ್ ಮೈದಾನ ಇದಾಗಿದ್ದು, ಹಾಕಿ ಆಟಗಾರರ ಕನಸುಗಳನ್ನು ನನಸು ಮಾಡಲು ಸಹಕಾರಿಯಾಗಿದೆ. ವಿಜಯಪುರ ಸೈನಿಕ ಶಾಲೆಯ ಹಾಕಿ ತಂಡವು ಅಖಿಲ ಭಾರತ ಅಂತರ ಸೈನಿಕ ಶಾಲೆಗಳ ಹಾಕಿ ಪಂದ್ಯಾವಳಿಯಲ್ಲಿ ಹಲವಾರು ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಅಲ್ಲದೇ, ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ನೆಹರು ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಈ ಮೈದಾನ ಲೋಕಾರ್ಪಣೆಯಿಂದ ಶಾಲೆಯ ವಿದ್ಯಾರ್ಥಿಗಳು ಇತರ ರಾಷ್ಟ್ರೀಯ ಮಟ್ಟದ ಆಟಗಾರರಿಗೆ ಸಮಾನರಾಗಿ ಬೆಳೆಯಲು ಸಹಾಯವಾಗಲಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಈ ಹಾಕಿ ಕ್ರೀಡಾಂಗಣ ನಿರ್ಮಿಸಿದೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಈ ಶಾಲೆಯಲ್ಲಿ ಮೈದಾನ ಮಂಜೂರಾಗಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ.ಬಿ. ದಾನಮ್ಮನವರ, ಶಾಲೆಯ ಉಪಪ್ರಾಚಾರ್ಯ ಕಮಾಂಡರ್ ಸುರುಚಿ ಗೌರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಗೋವಿಂದ ಕಾರಜೋಳ, ಆನಂದಸಿಂಗ್, ಸಿ. ಸಿ. ಪಾಟೀಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿಂದಗಿ ಶಾಸಕ ರಮೇಶ ಭೂಸನೂರ, ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಶಾಲೆಯ ಶಿಕ್ಷಕರು, ಶಿಕ್ಷಕರ ಹೊರತಾದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಛಿತರಿದ್ದರು.