ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉತ್ತರ ಕರ್ನಾಟಕದ ಧ್ವನಿಯಾಗಿದ್ದಾರೆ. ಕ್ರಿಯಾಶೀಲ ರಾಜಕಾರಣಿಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ, ವಿಜಯಪುರ ಜಿಲ್ಲೆಯ ಹುಲಿಯಂತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕ ಗುಣಗಾನ ಮಾಡಿದ್ದಾರೆ.
ವಿಜಯಪುರ ನಗರದ ಎನ್‌ಎಚ್-50 ಬಳಿ ಎಸ್- ಹೈಪರ್ ಮಾರ್ಟ ಹತ್ತಿರದ ಶ್ರೀ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಸಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತದಿಂದ ನಡೆದ ನಾನಾ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಸಿ ಆಸ್ಪತ್ರೆಯ ಲೋಕಾರ್ಪಣೆ ವೇಳೆಯಲ್ಲಿ ಮಳೆಯು ಧೋ ಎಂದು ಸುರಿದಿರುವುದು ಬಸನಗೌಡ ಪಾಟೀಲ ಯತ್ನಾಳ ಅವರ ಮೇಲೆ ದೇವರು ಆಶೀರ್ವಾದ ಮಾಡಿದಂತಾಗಿದೆ ಎಂದು ಹೇಳಿದ ಸಿಎಂ, ಕರ್ನಾಟಕಕ್ಕೆ ಭೂಷಣ ಪ್ರಾಯವಾದ, ಐತಿಹಾಸಿಕ, ಬಸವ ಜನ್ಮಭೂಮಿ, ಪುಣ್ಯಭೂಮಿಯಾದ ವಿಜಯಪುರ ಜಿಲ್ಲೆಗೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರಿನ ಆಸ್ಪತ್ರೆಯು ಕಳಸ ಪ್ರಾಯವಾದಂತಾಗಿದೆ ಎಂದು ತಿಳಿಸಿದ ಮುಖ್ಯಮಂತಿಗಳು, ಇತರರು ಅನುಕರಣೆ ಮಾಡುವ ಹಾಗೆ ವಿನೂತನ ಶೈಲಿಯಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಇದು 1008 ಬೆಡ್‌ನ ಆಸ್ಪತ್ರೆಯಾಗಿ ವಿಸ್ತರಣೆಯಾಗಬೇಕು ಎನ್ನುವ ಅವರ ಕಾರ್ಯ ಮೆಚ್ಚುವಂತದ್ದಾಗಿದೆ. ಪ್ರತಿಯೊಬ್ಬರಿಗೂ ಅನುಕೂಲವಾಗುವ ಆಸ್ಪತ್ರೆಯನ್ನು ನಿರ್ಮಿಸಿ ಯತ್ನಾಳ ಅವರು ಬಡವರು ಮೆಚ್ಚುವ ಕೆಲಸ ಮಾಡಿದ್ದು ಅವರಿಗೆ ಪುಣ್ಯಪ್ರಾಪ್ತಿಯಾಗಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, 21ನೇ ಶತಮಾನದ ಭಾರತವು ಕೇವಲ ರಸ್ತೆ, ಸೇತುವೆ, ಹಣಕಾಸಿನ ವ್ಯವಹಾರಕ್ಕಷ್ಟೇ ಮಾತ್ರವಲ್ಲ, ಜನರ ಆರೋಗ್ಯ ಮುಖ್ಯ ಎಂಬುದನ್ನು ಮನಗಾಣಿಸಿದೆ. ಈ ನಿಟ್ಟಿನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉತ್ತಮ ಹೆಜ್ಜೆ ಮುಂದಿಟ್ಟಿದ್ದಾರೆ. ಶ್ರೀ ಸಿದ್ದೇಶ್ವರ ಶ್ರೀಗಳ ಆಸ್ಪತೆಯ ಹೆಸರನ್ನು ಕೇಳಿದ ಕೂಡಲೇ ಜನರಿಗೆ ಅವರ ಆರೋಗ್ಯ ಸರಿಯಾಗುವ ವಿಶ್ವಾಸ ಬರುತ್ತದೆ. ಅಂಥ ಕಾರ್ಯವನ್ನು ಶಾಸಕರು ಮಾಡಿದ್ದಾರೆ. ಸೇವೆಯ ಮೂಲಕ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ವಿಜಯಪುರ ಜಿಲ್ಲೆಗೆ ಇನ್ನು 500 ಕೋಟಿ ರೂ.ಘೋಷಿಸಲು ಶಾಸಕ ಯತ್ನಾಳ ಮನವಿ
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ, ವಿಜಯಪುರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ತಿಳಿಸುವೆ ಎಂದು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಎಂದೂ ಕಾಣದ ಅಭಿವೃದ್ಧಿಯು ಈಗ ಕಾಣುತ್ತಿದೆ. ಮುಖ್ಯಮಂತ್ರಿಗಳಿಂದ ಸುಮಾರು ರೂ. 450 ಕೋ. ವೆಚ್ಚದ ನಾನಾ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿದೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಇಲ್ಲದಿದ್ದರೂ ಸಹ ಇನ್ನು ಆರು ತಿಂಗಳಲ್ಲಿ ಸ್ಮಾರ್ಟ್ ಸಿಟಿಯಾಗಿ ಬದಲಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೂರದೃಷ್ಟಿಯಿಂದಾಗಿ ದೇಶ ಮತ್ತು ರಾಜ್ಯದಲ್ಲಿ ನಾನಾ ಬದಲಾವಣೆಗಳಾಗಿವೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ 31 ಎಕರೆ ಪ್ರದೇಶದಲ್ಲಿ ಬಡವರಿಗೆ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ ಶಾಸಕರು, ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ದಿ ನಿಟ್ಟಿನಲ್ಲಿ ರೂ. 500 ಕೋ. ಹಣ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.
ಶ್ರೀ ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಸ್ಥೆಗಳ ಮೂಲಕ ತಾವು ವಿಜಯಪುರ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತಿರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾವುಕರಾಗಿ ಹೇಳಿದರು.