Officers Cleaning: ಗಾಂಧಿ ಜಯಂತಿ ಅಂಗವಾಗಿ ಕೈಯ್ಯಲ್ಲಿ ಕಸಬರಿಗೆ ಹಿಡಿದು ಸ್ವಚ್ಛತಾ ಕಾರ್ಯ ಕೈಗೊಂಡ ಡಿಸಿ, ಜಿಪಂ ಸಿಇಓ, ಅಧಿಕಾರಿಗಳು

ವಿಜಯಪುರ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿ. ಪಂ. ಸಿಇಓ ರಾಹುಲ್ ಶಿಂಧೆ, ಎಡಿಸಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗತ್ತಿ, ಕೇಂದ್ರ ಕಾರಾಗೃಹದ ಅಧಿಕ್ಷಕ ಡಾ. ೈ. ಜಿ. ಮ್ಯಾಗೇರಿ, ಜಂಟಿ ಕೃಷಿ ನಿರ್ದೇಶಕಿ ರೂಪಾ ಎಲ್. ತಹಸೀಲ್ದಾರ ಸಿದ್ಧರಾಯ ಬೋಸಗಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತು ಅಧಿಕಾರಿಗಳು ವಿಜಯಪುರ ನಗರದ ಶಿವಗಿರಿಯ ಮಹಾತ್ಮ ಗಾಂಧೀಜಿ ಕಾಲನಿಯಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಗಮನ ಸೆಳೆದರು. 

ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತುಕೊಳ್ಳು ಅಧಿಕಾರಿಗಳು ಕೈಯ್ಯಲ್ಲಿ ಕಸಬರಿಗೆ, ಗುದ್ದಲಿ, ಸನಿಕೆ, ಪಿಕಾಸಿ, ಬುಟ್ಟಿ ಹಿಡಿದು ಶ್ರಮದಾನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು ಗಮನ ಸೆಳೆಯಿತು.  ಜಿಲ್ಲಾಧಿಕಾರಿಗಳ ಕರೆಯ ಮೇರೆಗೆ ಮಹಾತ್ಮ ಗಾಂಧೀಜಿ ಕಾಲೋನಿಗೆ ಆಗಮಿಸಿದ್ದ ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ, ನಗರಾವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಪಾಲಿಕೆಯ ಉಪಾಯುಕ್ತರಾದ ಮಹಾವೀರ ಬೋರಣ್ಣನವರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ, ಯೋಜನಾ ನಿರ್ದೇಶಕಿ ಸಿ. ಬಿ. ದೇವರಮನಿ, ನಾನಾ ಇಲಾಖೆಗಳ ಅಧಿಕಾರಿಗಳಾದ ರಾಮನಗೌಡ ಕನ್ನೊಳ್ಳಿ, ಸಿದ್ದರಾಮ ಮಾರಿಹಾಳ, ಈರಪ್ಪ ಅಲ್ಲಾಪುರೆ, ಮಲ್ಲಿಕಾರ್ಜುನ ಭಜಂತ್ರಿ, ಎಸ್. ಎನ್. ಬಗಲಿ, ಎಂ. ಎಸ್. ಬರಗಿಮಠ, ಎಸ್. ಎನ್. ಲಕ್ಕಣ್ಣವರ, ಬಾಬು ಚಾಂದಕವಟೆ, ಗುರುಪಾದಯ್ಯ ಹಿರೇಮಠ, ಮಹಿಳಾ ಅಧಿಕಾರಿಗಳಾದ ಸಾವಿತ್ರಿ ದಳವಾಯಿ, ರೇಣುಕಾ ಸಾತರ್ಲೆ, ಅನುಮಪ ಹರಪಳೆಕರ ಸೇರಿದಂತೆ ಇನ್ನೂ ಅನೇಕ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಸಿಇಓ ಅವರ ಸಮ್ಮುಖದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ವಿಜಯಪುರದಲ್ಲಿ ಡಿಸಿ, ಜಿ. ಪಂ. ಸಿಇಓ, ನಾನಾ ಇಲಾಖೆಗಳ ಅಧಿಕಾರಿಗಳು ಶ್ರಮದಾನ ಮಾಡಿದರು

ಪ್ರತಿ ನಿತ್ಯ ನಾನಾ ಕಡತಗಳ ವಿಲೇವಾರಿಯಲ್ಲಿ ಮುಳುಗಿರುತ್ತಿದ್ದ ಅಧಿಕಾರಿಗಳು ಶ್ರಮದಾನದ ಅಂಗವಾಗಿ ಸರಳ ವಸ್ತçಧಾರಿಗಳಾಗಿ ಕಾಲೋನಿಗೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಚೆಂದಗೊಳಿಸಿದರು: ಕಾಲೋನಿಯ ಎಲ್ಲೆಂದರಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಅಧಿಕಾರಿಗಳು ಕುಡಗೋಲು, ಕೊಡಲಿಯಿಂದ ಕತ್ತರಿಸಿ ಬಯಲುಗೊಳಿಸಿದರು.  ಬೇರೆ ಬೇರೆ ತರಹದ ಕಸ ತೆಗೆದು ವಿಲೇವಾರಿ ಮಾಡಿದರು. ಮಹಾನಗರ ಪಾಲಿಕೆಯ ಕಸ ಹೊತ್ತೊಯ್ಯುವ ವಾಹನಗಳು ಅಲ್ಲಿನ ಕಸವನ್ನು ಬೇರೆಡೆ ಸಾಗಿಸಿದವು. ಜೆಸಿಬಿ ಮತ್ತು ಟ್ರಾಕ್ಟರ್ ಇನ್ನೀತರ ವಾಹನಗಳನ್ನು ಸ್ವಚ್ಚತಾ ಕಾರ್ಯಕ್ಕೆ ಬಳಸಲಾಯಿತು. ಸ್ವಚ್ಚತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಿ ಕಾಲೋನಿಯ ಬೀದಿಗಳು, ಉದ್ಯಾನ ಆವರಣವನ್ನು ಚೆಂದಗೊಳಿಸಿದರು.

 

ಸಾರ್ವಜನಿಕರು ಸಹ ಭಾಗಿ

ಜಿಲ್ಲಾಧಿಕಾರಿ ಮತ್ತು ಸಿಇಓ ಹಾಗೂ ಇತರ ಅಧಿಕಾರಿಗಳು ಕಸಬರಿಗೆ ಬುಟ್ಟೆ ಹಿಡಿದು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಮತ್ತು ಯುವಕರು, ಮಹಿಳೆಯರು ಸ್ವಚ್ಚತಾ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗಿಯಾದರು.

ಸಾರ್ವಜನಿಕರಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನವಿ

ಶ್ರಮದಾನದ ಬಳಿಕ ಶಿವ ದೇವಾಲಯದ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಾಲೊನಿಯ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಿತ್ಯ ಜೀವನದಲ್ಲಿ ದೈವ ಭಕ್ತಿಯಷ್ಟೇ ಸ್ವಚ್ಛತೆ ಕೂಡ ಮುಖ್ಯವಾಗಿದೆ ಎಂಬುದು ಗಾಂಧೀಜಿಯವರ ವಿಚಾರಧಾರೆಯಾಗಿತ್ತು. ಗಾಂಧೀಜಿಯವರು ವೈಯಕ್ತಿಕ ಸ್ವಚ್ಛತೆ, ಪರಿಸರದ ಶುಚಿತ್ವ ಮತ್ತು ಮನಸಿನ ಸ್ವಚ್ಛತೆಯ ಬಗ್ಗೆ ತಿಳಿಸಿದ್ದಾರೆ. ಇಂತಹ ಮಹಾತ್ಮನ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಅವರು ಮಾತನಾಡಿ, ಸ್ವಚ್ಚತಾ ಕಾರ್ಯ ಬರೀ ಪಾಲಿಕೆಯ ಕೆಲಸವಲ್ಲ; ಸಾರ್ವಜನಿಕರು ಪ್ರತಿ ದಿನ ತಮ್ಮ ತಮ್ಮ ಮನೆಯ ಸುತ್ತಲು ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘ-ಸಂಸ್ಥೆಗಳ ಪ್ರಮುಖರು ಭಾಗಿ

ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಸ್ವಚ್ಚತಾ ಕಾರ್ಯ ನಿರ್ಣಯ ತೆಗೆದುಕೊಂಡ ವಿಜಯಪುರ ಜಿಲ್ಲಾಡಳಿತದ ಕಾರ್ಯವನ್ನು ಮೆಚ್ಚಿ ಸ್ಥಳಕ್ಕೆ ಆಗಮಿಸಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ದೇವೇಂದ್ರ ಮೇರೆಕರ, ಭೀಮರಾಯ ಜಿಗಜಿಣಗಿ, ಗಿರೀಶ ಕುಲಕರ್ಣಿ ಹಾಗೂ ಇತರರು ಸಹ ಅಧಿಕಾರಿಗಳೊಂದಿಗೆ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದರು.

ಉಪಹಾರ ವ್ಯವಸ್ಥೆ

ಸತತ ಮೂರೂವರೆ ಗಂಟೆಗಳ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಲ್ಲಿನ ನಿವಾಸಿಗಳಿಗು ಸಹ ಉಪಹಾರ-ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ನಿವಾಸಿಗಳಿಂದ ಮನವಿ

ಮಹಾತ್ಮ ಗಾಂಧೀಜಿ ಕಾಲೊನಿಗೆ ಕುಡಿಯುವ ನೀರು, ಆಸ್ಪತ್ರೆ, ವಿದ್ಯುತ್, ಅಂಗನವಾಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಅಲ್ಲಿನ ನಿವಾಸಿಗಳು ಇದೆ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌