ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ.ಬಿದರಿ ಹಾರ್ಟ್ ಸೆಂಟರ್ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ವಿಜಯಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಾನಾ ನರ್ಸಿಂಗ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸುರೇಶ ನಾಯಕ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ವಿಶ್ವಾದ್ಯಂತ ಪ್ರತಿ ವರ್ಷ 17.3 ಮಿಲಿಯನ್ ಜನರು ಸಾವಿಗೀಡಾಗುತ್ತಿದ್ದಾರೆ. ಧ್ರೂಮ್ರಪಾನ ಮಾಡುವುದರಿಂದ ರಕ್ತದಲ್ಲಿ ಕೊಬ್ಬಿನಾಂಶ ಹೆಪ್ಪುಗಟ್ಟಿ ರಕ್ತನಾಳಗಳನ್ನು ಕುಗ್ಗಿಸುತ್ತದೆ. ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ನಿಯಮಿತ ವ್ಯಾಯಾಮದಿಂದ ಹೃದಯಾಘಾತವನ್ನು ತಡೆಗಟ್ಟಬಹುದು. ಒಂದು ವೇಳೆ ಹೃದಯಾಘಾತವಾದರೂ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದರು.
ಕಾಫಿ-ಚಹಾ ಸೇವನೆ ಮಿತವಾಗಿರಬೇಕು. ಸಕ್ಕರೆ ಕಾಯಿಲೆಯಿಂದ ಹೃದಯಾಘಾತವಾಗುವ ಸಂಭವ ಹೆಚ್ಚಾಗಿರುವುದರಿಂದ ಸಕ್ಕರೆ ಕಾಯಿಲೆಯುಳ್ಳವರು ಸರಿಯಾದ ಚಿಕಿತ್ಸೆ ಪಡೆಯಬೇಕು. ವಯಸ್ಕರು ವರ್ಷಕ್ಕೊಂದು ಬಾರಿ ತಮ್ಮ ಹೃದಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಕ್ತದಲ್ಲಿನ ಕೊಬ್ಬಿನಾಂಶ ಹಾಗೂ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು. ಹೆಚ್ಚಿನ ರಕ್ತದೊತ್ತಡ ಹಾಗೂ ಕೊಬ್ಬಿನಾಂಶವು ಹೃದಯರೋಗನ್ನುಂಟು ಮಾಡುತ್ತದೆ. ರಕ್ತದಲ್ಲಿನ ಕೊಬ್ಬಿನಾಂಶ ಹಾಗು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ತೂಕ ಹಾಗೂ ಆಹಾರಕ್ರಮದ ಬಗ್ಗೆ ಕಾಳಜಿವಹಿಸಬೇಕು ಎಂದು ಸುರೇಶ ನಾಯಕ ತಿಳಿಸಿದರು.
ಪ್ರತಿದಿನ ಕನಿಷ್ಠ 30 ನಿಮಿಷ ಬಿರುಸಿನ ನಡಿಗೆ ನಡೆಯಬೇಕು. ವಯಸ್ಸಿಗನುಗುಣವಾಗಿ ವ್ಯಾಯಾಮ ಶಾಲೆಗೆ ಸೇರಿ ವ್ಯಾಯಾಮ ಮಾಡಬೇಕು. ನೀರಿನಲ್ಲಿ ಈಜಬೇಕು. ನಿಯಮಿತ ಯೋಗಾಭ್ಯಾಸವು ಶರೀರ ಹಾಗೂ ಹೃದಯಕ್ಕೆ ಒಳ್ಳಯದು. ನಿಯಮಿತ ಧ್ಯಾನದಿಂದ ಮಾನಸಿಕ ಒತ್ತಡ ಹಾಗೂ ಉದ್ವೇಗ ತಡೆಗಟ್ಟುಬಹುದು ಎಂದು ಸುರೇಶ ಬಿರಾದಾರ ತಿಳಿಸಿದರು.
ರೇಬಿಸ್ ರೋಗದ ಲಕ್ಷಣ, ಚಿಕಿತ್ಸೆ ಹಾಗೂ ಮುನ್ನೇಚ್ಚರಿಕೆ ಕ್ರಮಗಳ ಬಗ್ಗೆ ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದ ಡಾ. ಬಸವರಾಜ ಹುಟಗಿ ಅವರು ಮಾತನಾಡಿ, ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ರೇಬಿಸ್ ವೈರಾಣು ತಗುಲಿರುವ ನಾಯಿ ಬೆಕ್ಕು ತೋಳದಂತಹ ಪ್ರಾಣಿಗಳು ಮನುಷ್ಯರನ್ನು ಕಚ್ಚುವದು ಹಾಗೂ ನೆಕ್ಕುವುದರಿಂದಲೂ ಮನುಷ್ಯನ ದೇಹದಲ್ಲಿ ವೈರಾಣು ಪ್ರವೇಶಿಸುತ್ತದೆ. ರೇಬಿಸ್ ಹೊಂದಿರುವ ಮನುಷ್ಯ ಸಹ ಇನ್ನೊಬ್ಬ ವ್ಯಕ್ತಿಗೆ ಕಚ್ಚಿದರೂ ರೋಗ ಹರಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡ್ಡಮನಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಜನಜಾಗೃತಿ ಜಾಥಾ
ಬೆಳಗ್ಗೆ ಶ್ರೀ ಸಿದ್ದೇಶ್ವರ ದೇವಾಸ್ಥಾನದಿಂದ ವಿಶ್ವ ಹೃದಯ ದಿನದ ಅಂಗವಾಗಿ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಎಲ್ ಹೆಚ್ ಬಿದರಿ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಾಥಾದಲ್ಲಿ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ರಾಜೇಶ್ವರಿ ಎನ್ ಗೊಲಗೇರಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ.ಜೈಬುನಿಸಾ ಬಿಳಗಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಕೆ. ಡಿ. ಗುಂಡಬಾವಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಪರಶುರಾಮ ಹಿಟ್ಟನಳ್ಳಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಜಿ.ಮುರನಾಳ, ಅಶ್ವಿನಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ, ಜಿಲ್ಲಾ ಎನ್.ಸಿ.ಡಿ ಘಟಕದ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೊಲೂರ ಅವರು ಸ್ವಾಗತಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆರ್ ಎಮ್ ಹಂಚಿನಾಳ ವಂದಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ನಿರೂಪಿಸಿದರು.