ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಭೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಿ. ಸೋಮಶೇಖರ, ವಿಜಯಪುರ ಜಿಲ್ಲೆಯಲ್ಲಿ ಕೆಲಸ ಮಾಡುವುದು ಅಧಿಕಾರಿಗಳಿಗೆ ಒಂದು ಸುಯೋಗವಿದ್ದಂತೆ. ಗಡಿಭಾಗದ ಜನರನ್ನು ಸಹ ನಾವು ಪ್ರೀತಿಸಬೇಕು. ಗಡಿ ಭಾಗದಲ್ಲಿನ ಜನರಲ್ಲಿ ಪ್ರೀತಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಡಿಭಾಗದ ಗ್ರಾಮಗಳಿಗೆ ಕಡ್ಡಾಯ ಭೇಟಿ ನೀಡಿ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾ. ಪಂ. ಗಳ ಕ್ರಿಯಾ ಯೋಜನೆಯಲ್ಲಿ ಸಾಂಸ್ಕೃತಿಕ ನಿಧಿಯಾಗಿ ರೂ. 1 ಲಕ್ಷ ಮೀಸಲಿಟ್ಟು ಸಂಸ್ಕೃತಿ ರಕ್ಷಣೆ ಕಾರ್ಯ ಮಾಡಬೇಕು. ಶಾಲೆಗಳ ಅಭಿವೃದ್ದಿಗೆ ಸಹಕರಿಸಲು ವ್ಯವಸ್ಥೆ ಮಾಡಬೇಕು. ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಗೆ ತಾ. ಪಂ. ನ ರೂ. 2 ರಿಂದ ರೂ. 5 ಲಕ್ಷ ಮೀಸಲಿರುವ ವ್ಯವಸ್ಥೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಜಿ. ಪಂ. ಸಿಇಓ ರಾಹುಲ ಶಿಂಧೆ ಅವರಿಗೆ ಸೂಚನೆ ನೀಡಿದರು.
ಗಡಿಭಾಗದ ಶಾಲೆಗಳ ಸ್ಥಿತಿಗತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲೆಯಲ್ಲಿ 2000 ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಇದೆ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉಮೇಶ ಶಿರಹಟ್ಟಿಮಠ ಅವರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಕನ್ನಡ ಭಾಷಾ ಶಿಕ್ಷಕರ ಕೊರತೆ ಸಹ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಗಡಿಭಾಗದಲ್ಲಿ ಅತ್ಯವಶ್ಯವಿರುವ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ, ನಾಡಿಗಾಗಿ ಶ್ರಮಿಸಿದ ದಾರ್ಶನಿಕರ ಸ್ಮಾರಕಗಳ ರಕ್ಷಣೆಗೆ ಒತ್ತು ಕೊಡಬೇಕು. ಗಡಿಗೆ ಹೊಂದಿಕೊಂಡ ಹಳ್ಳಿಗಳಲ್ಲಿ ಕನ್ನಡ ಹೆಸರಗಳನ್ನು ಬದಲಿಸುವ ಕೃತ್ಯಕ್ಕೆ ತಡೆ ಒಡ್ಡಬೇಕು ಎಂದು ತಿಳಿಸಿದ ಅಧ್ಯಕ್ಷರು, ಗಡಿ ಸ್ವಾಗತ ಕಮಾನು ಮಾಡಲು ಪ್ರಸ್ತಾವನೆ ಸಿದ್ದಪಡಿಸಲು ತಿಳಿಸಿದರು. ಅವಶ್ಯವಿರುವ ಗಡಿ ಸಂಪರ್ಕ ರಸ್ತೆ ನಿರ್ಮಾಣ ಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಗಡಿ ಮಹಿಳಾ ಯುವಕ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸಲು ಸಲಹೆ ನೀಡಿದರು.
ಗಡಿಭಾಗದ ಹಳ್ಳಿಗಳಲ್ಲಿ ಉತ್ತಮ ಶಿಕ್ಷಕರು ಯಾರು? ಉತ್ತಮ ಮಹಿಳಾ ಸಂಘ ಯಾವುದು? ಎಂಬುದನ್ನು ಗುರುತಿಸಿ ಅವರಿಗೆ ಪುರಸ್ಕಾರ ಕೊಡುವ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು. ಗಡಿಪ್ರದೇಶದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಶಾಲೆಗಳು ಮತ್ತು ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಅಂಗನವಾಡಿ ಕಟ್ಟಡಗಳಿಗೆ ನಿವೇಶನ ನೀಡುವ ಕಾರ್ಯ ಮಾಡಬೇಕು ಎಂದು ಡಾ. ಸಿ. ಸೋಮಶೇಖರ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸ್ಧೆಗಳಿಗೆ ಚೆಕ್ ವಿತರಣೆ: ಸಭೆಯಲ್ಲಿ ಗಡಿಭಾಗದ ಸಮಸ್ಯೆಗಳ ಬಗ್ಗೆ ಹಾಗೂ ಪ್ರಾಧಿಕಾರದಿಂದ ಬಿಡುಗಡೆಯಾದ ಅನುದಾನದ ಬಿಡುಗಡೆಯ ವಿಳಂಬದ ಬಗ್ಗೆ ಚರ್ಚೆ ನಡೆಯಿತು. ಶಾಲಾ ಕಾಮಗಾರಿಗಳ ಬಗ್ಗೆ ವರದಿ ಪಡೆದು ಹಣಬಳಕೆ ಪ್ರಪತ್ರ ಸಲ್ಲಿಸಲು ಸೂಚಿಸಲಾಯಿತು. ಇದೆ ಸಂದರ್ಭದಲ್ಲಿ ಗಡಿಭಾಗದ ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ಸಂಸ್ಧೆಗಳಿಗೆ ಚೆಕ್ ವಿತರಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಾನಾ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹಾಗೂ ಅನುದಾನ ಬಳಕೆ ಪ್ರಮಾಣ ಪತ್ರವನ್ನು ತಕ್ಷಣ ಸ್ಥಳ ಪರಿಶೀಲನೆ ಮಾಡಿ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚನೆ ನೀಡಲಾಯಿತು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಎಸ್ಪಿ ಡಾ. ರಾಮ ಲಕ್ಷ್ಣಣಸಾ ಅರಸಿದ್ಧಿ, ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗತ್ತಿ, ರಾಮಚಂದ್ರ ಗಡಾದೆ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಬಿ. ನಾಗರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ. ಕೆ. ಚವ್ಹಾಣ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.