Gandhi Jayanti: ನೂತನ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಣೆ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಉದ್ಘಾಟಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧಿ ಭವನದಲ್ಲಿ ವಿಜಯಪುರ ಜಿಲ್ಲಾಡಳಿತದಿಂದ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರ ಸೂಚನೆಯಂತೆ ನಾನಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಜಿಲ್ಲೆಯ ಗಣ್ಯರು ಹಾಗೂ ಸಾರ್ವಜನಿಕರು ಶಾಂತಿ ಸಂದೇಶದ ಬಿಳಿ ವಸ್ತ್ರ ಧರಿಸಿ ಆಗಮಿಸಿದ್ದು ವಿಶೇಷವಾಗಿತ್ತು.  ಗಾಂಧಿ ಭವನದ ಅಂಗಳದಲ್ಲಿ ಹಬ್ಬದ ಸಂಭ್ರಮದ ವಾತಾವರಣ ಕಂಡು ಬಂದಿತು.

ಗಾಂಧಿ ಭವನದ ಬಳಿ ಭಾವಚಿತ್ರ ತೆಗೆಸಿಕೊಂಡ ಅಧಿಕಾರಿಗಳು ಮತ್ತೀತರರು

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಸೇರಿದಂತೆ ನಾನಾ ಗಣ್ಯರು, ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ನೂತನ ಜಿಲ್ಲಾ ಗಾಂಧಿ ಭವನದ ಅಂಗಳಕ್ಕೆ ಆಗಮಿಸುತ್ತಿದ್ದಂತೆ ಸುಂದರ ಉದ್ಯಾನವನ, ಆಕರ್ಷಕ ಕಟ್ಟಡ, ಕಟ್ಟಡದಲ್ಲಿನ ಪ್ರಾರ್ಥನ ಮಂದಿರ, ಗ್ರಂಥಾಲಯ, ಸಭಾಂಗಣ, ಛಾಯಾಚಿತ್ರ ಪ್ರದರ್ಶನ ವ್ಯವಸ್ಥೆ ಕಂಡು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಸರ್ವಧರ್ಮ ಪ್ರಾರ್ಥನೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.  ಶಾಸಕರು, ನ್ಯಾಯಾಧೀಶರು, ಜಿಲ್ಲಾಧಿಕಾರಿ, ಎಸ್ಪಿ ಎಚ್. ಡಿ. ಆನಂದಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ, ಗಾಂಧಿ ವಿಚಾರಧಾರೆಯ ಬಾಬುಪೌಡ ಪಾಟೀಲ, ನೀಲೇಶ ಬೇನಾಳ ಸೇರಿದಂತೆ ಇತರರು ವೇದಿಕೆಯ ಮೇಲೆ ಸಾಲಾಗಿ ಕುಳಿತು ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗಿಯಾದರು.ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ವಿಶೇಷ ಕಾಳಜಿ ವಹಿಸಿದ್ದರಿಂದ ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ಗಾಂಧಿ ಭವನವು ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ.  ಇದು ಅಭಿನಂದನಾರ್ಹ ಸಂಗತಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿ, ಜಿಲ್ಲಾಡಳಿತದ ಕರೆಯ ಮೇರೆಗೆ ಜಿಲ್ಲೆಯ ಗಣ್ಯರು ಮತ್ತು ಸಾರ್ವಜನಿಕರು ಸಹ ಬಿಳಿ ಖಾದಿ ಬಟ್ಟೆ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿ ರಾಷ್ಚ್ರಪ್ರೇಮವನ್ನು ತೋರಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ಸಕಾಲಿಕವಾದ ಗಾಂಧೀಜಿಯವರ ಮತ್ತು ಶಾಸ್ತ್ರಿಯವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹಿರೇಮಠ ವಿಶೇಷ ಉಪನ್ಯಾಸ ನೀಡಿದರು.

ಈ ಸಮಾರಂಭದಲ್ಲಿ ತಹಸೀಲ್ದಾರ ಸಿದ್ದರಾಯ ಬೋಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಮಹಾನಗರ ಪಾಲಿಕೆಯ ಉಪಾಯುಕ್ತ ಮಹಾವೀರ ಬೋರಣ್ಣನವರ, ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ಧಪ್ಪ ಹೊಸಮನಿ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಬಿ. ವೈ. ಸುರಕೋಡ, ನಾನಾ ಇಲಾಖೆಗಳ ಅಧಿಕಾರಿಗಳಾದ ರೂಪಾ ಎಲ್., ಮಲ್ಲಿಕಾರ್ಜುನ ಭಜಂತ್ರಿ, ಎಂ. ಎಸ್. ಬರಗಿಮಠ, ಸಿದ್ದರಾಮ ಮಾರಿಹಾಳ, ಸಾವಿತ್ರಿ ದಳವಾಯಿ, ಬಿ. ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌