ವಿಜಯಪುರ: ಇದು ಸೇವೆಗೆ ಸಂದ ಗೌರವ. ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಹೇಗೆ ಸ್ಪಂದಿಸುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ. ತಮ್ಮೂರಿನ ಮಕ್ಕಳ ಕಲ್ಯಾಣಕ್ಕಾಗಿ ಸೇವೆ ದೈಹಿಕ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ನೀಡಿದ ಅದ್ಧೂರಿ ಗೌರವದ ಸ್ಚೋರಿ. 40 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ತಮ್ಮೂರಿನ ಮಕ್ಕಳನ್ನು ತಾಲೂಕು, ಜಿಲ್ಲೆ, ವಲಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಾನಾ ಕ್ರೀಡಾಕೂಟಗಳಲ್ಲಿ ಪಾಲ್ಗೋಳ್ಳುವಂತೆ ಮಾಡಿದ ಶಿಕ್ಷಕನಿಗೆ ನೀಡಿದ ಪ್ರೀತಿಯ ಕೊಡುಗೆ.
ಇತ್ತೀಚಿನ ದಿನಗಳಲ್ಲಿ ಸೇವೆಯಿಂದ ಮರಳಿದ ಸೈನಿಕರಿಗೆ ಅದ್ಧೂರಿ ಸ್ವಾಗತ ಕೋರುವ ಸಂಪ್ರದಾಯ ಹೆಚ್ಚುತ್ತಿದ್ದೆ. ಅವರು ದೇಶ ರಕ್ಷಣೆಗಾಗಿ ಸಲ್ಲಿಸಿದ ಸೇವೆಗೆ ಈಗ ಪ್ರತಿಯೊಬ್ಬ ಭಾರತೀಯರು ಗೌರವ ತೋರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದ ದೈಹಿಕ ಶಿಕ್ಷಕರೊಬ್ಬರನ್ನು ಗ್ರಾಮಸ್ಖರು ಜಿಟಿಜಿಟಿ ಮಳೆಯ ನಡುವೆಯೇ ತೆರೆದ ಕಾರಿನಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಸಂಭ್ರಮಿಸಿದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ನಡೆಯಿತು.
ಈ ಗ್ರಾಮದ ಬಿ. ಎ. ಕೆ. ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ದೈಹಿಕ ಶಿಕ್ಷಕ ಎನ್. ಜಿ. ಕೋಟ್ಯಾಳ ಸುದೀರ್ಘ 40 ವರ್ಷಗಳ ಕಾಲ ಮಕ್ಕಳನ್ನು ದೈಹಿಕವಾಗಿ ಸದೃಢಗೊಳಿಸಿದ್ದರು. ಅಷ್ಟೇ ಅಲ್ಲ, ಇಲ್ಲಿನ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ವಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಾನಾ ಕ್ರೀಡಾಕೂಟಗಳಲ್ಲಿ ಪಾಲ್ಗೋಂಡು ಉತ್ತಮ ಸಾಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಕ್ಕಳೆಡೆಗಿನ ಅವರ ಕಾಳಜಿ ಮತ್ತು ಪ್ರೀತಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು.
ಮತ್ತಮ ಮಕ್ಕಳ ಬಗ್ಗೆ ಹಿತೈಷಿಯಾಗಿದ್ದ ದೈಹಿಕ ಶಿಕ್ಷಕರನ್ನು ಅವರ ಪತ್ನಿ ಸಮೇತ ಸೇವಾ ನಿವೃತ್ತಿಯ ದಿನ ಗೌರವಿಸುವ ಮೂಲಕ ಬಿಜ್ಜರಗಿ ಗ್ರಾಮಸ್ಥರು ಮತ್ತು ಆ ಶಾಲೆಯ ಹಳೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದ್ದಾರೆ. ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಲೆಕ್ಕಸದ ಗ್ರಾಮಸ್ಥರು ಎನ್. ಜಿ. ಗೋಟ್ಯಾಳ ಅವರನ್ನು ತೆರೆದ ಕಾರಿನಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದಾರೆ.
ಹರಿದು ಬಂದ ಉಡುಗೊರೆ
ಮೆರವಣಿಗೆ ಬಳಿಕ ಈ ಶಿಕ್ಷಕರ ತಲೆಗೆ ಹಳದಿ ರುಮಾಲು ಸುತ್ತಿ ಅವರ ಪತ್ನಿಯನ್ನೂ ವೇದಿಕೆಯ ಮೇಲೆ ಕುಳ್ಳಿರಿಸಿ ಸತ್ಕರಿಸಿ ಗೌರವಿಸಿದ್ದಾರೆ. 50 ಚಿನ್ನಾಭರಣ, ಎರಡು ಕೆಜಿ ಬೆಳ್ಳಿಯ ನಾನಾ ಮೂರ್ತಿಗಳು, ರೂ. 96 ಸಾವಿರ ನಗದು, ಡಬಲ್ ಡೋರ್ ಪ್ರೀಡ್ಜ, 32 ಇಂಚ್ ಎಲ್ಇಡಿ ಟಿವಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ 25 ಭಾವಚಿತ್ರಗಳು, ಬುದ್ದ ವಿಹಾರ ಮೂರ್ತಿಗಳು, ಬೆಲೆಬಾಳುವ ಕಂಬಳಿ ಹಾಗೂ ಕನಕದಾಸ ಭಾವಚಿತ್ರ, ಬುದ್ದ, ಬಸವಣ್ಣ, ಅಂಬೇಡ್ಕರ ಮಹಾನಾಯಕರ ಹಾಗೂ ಪರಿಸರ ಭಾವಚಿತ್ರಗಳು, ಕಂಚಿನ ಸರಸ್ವತಿ ಮೂರ್ತಿ ಕಾಣಿಕೆಯಾಗಿ ನೀಡಿದರು.
ಭಾವುಕರಾದ ಗ್ರಾಮಸ್ಥರು
ಇದೇ ವೇಳೆ ತಮ್ಮೂರಿನ ನೆಚ್ಚಿನ ಶಿಕ್ಷಕನನ್ನು ಬೀಳ್ಕೋಡುವಾಗ ಬಿಜ್ಜರಗಿ ಗ್ರಾಮಸ್ಥರು ಭಾವುಕರಾದರು. ಗ್ರಾಮದ ನೂರಾರು ಜನರು, ಹಳೆಯ ವಿದ್ಯಾರ್ಥಿಗಳು, ನಾನಾ ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು, ಎಲ್ಲ ಸಮುದಾಯದವರು ಒಟ್ಟುಗೂಡಿ ಈ ಹೃದಯಸ್ಪರ್ಷಿ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದು ವಿಶೇಷವಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎನ್. ಜಿ. ಕೋಟ್ಯಾಳ, ವ್ಯಕ್ತಿ ಸದೃಡವಾಗಿದ್ದರೆ ಎನೆಲ್ಲಾ ಸಾಧಿಸಬಹುದು. ನಮ್ಮೂರಿನ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಜಿಲ್ಲಾ , ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಅವರು ಪಾಲ್ಗೋಳ್ಳುವಂತೆ ಮಾಡಿದ ಸಂತೃಪ್ತಿ ನನ್ನಲ್ಲಿದೆ. ಅದಕ್ಕಿಂತಲೂ ಹೆಚ್ಚಾಗಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿ ನನನ್ನು ಬೀಳ್ಕೋಟ್ಟಿರುವುದನ್ನು ನನ್ನ ಜೀವನಮಾನದ ಮನರೆಯಲು ಸಾಧ್ಯವಿಲ್ಲ. ನಡೆದಾಡುವ ದೇವರು ಎಂದೇ ಹೆಸರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹೂಟ್ಟೂರು ಬಿಜ್ಜರಗಿಯ ಪುಣ್ಯ ಭೂಮಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದು ನನ್ನ ಭಾಗ್ಯ ಎಂದು ಭಾವುಕರಾದರು.
ವಿರಕ್ತ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಶಿಕ್ಷಕರೆಂದರೆ ಎನ್. ಜಿ. ಕೋಟ್ಯಾಳ ಅವರಂಥಿತರಬೇಕು. ಅವರು ಮಾಡಿದ ನಿಸ್ವಾರ್ಥ ಸೇವೆ ಗ್ರಾಮಸ್ಥರಲ್ಲಿ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಎಸ್. ಬಿ. ಬಿರಾದಾರ, ಕೊಟ್ಯಾಳ ಗುರುಗಳು ತಂದೆ- ತಾಯಿಯಂಥ ಹೃದಯ ಹೊಂದಿದವರು. ಎಲ್ಲ ವಿದ್ಯಾರ್ಥಿಗಳನ್ನು ಸಮನಾಗಿ ಕಂಡು ಮೌಲ್ಯಯುತ ಶಿಕ್ಷಣ ನೀಡಿದವರು ಎಂದು ಶ್ಲಾಘಿಸಿದರು.
ಕಾಣಿಕೆಯ ಹಣವನ್ನು ಶಾಲೆಯ ಸಾಧಕರಿಗೆ ನೀಡಿದ ಶಿಕ್ಷಕ
ನಿವೃತ್ತ ಹೊಂದಿದ ಎನ್. ಜಿ. ಕೊಟ್ಯಾಳ ಅವರು ಗ್ರಾಮಸ್ಥರು ತಮಗೆ ಕಾಣಿಕೆಯಾಗಿ ನೀಡಿದ ರೂ. 96 ಸಾವಿರ ಹಣ ಹಾಗೂ ವೈಯಕ್ತಿಕವಾಗಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿಗೆ ತಲಾ ರೂ. 25 ರೂಪಾಯಿಯನ್ನು ತಮ್ಮ ತಂದೆ ಗುರಪ್ಪ ಹಾಗೂ ತಾಯಿ ಲಕ್ಷ್ಮೀಬಾಯಿ ಅವರ ಸ್ಮರಣಾರ್ಥ ನೀಡಿದರು. ಪ್ರತಿ ವರ್ಷ ಈ ಠೇವಣಿ ಹಣದಲ್ಲಿ ಬರುವ ಬಡ್ಡಿ ಹಣದಲ್ಲಿ ಆಯಾ ಶೈಕ್ಷಣಿಕ ವರ್ಷಗಳಲ್ಲಿ ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿ ಎಂದು ಅವರು ಹೇಳಿದರು.
ಎನ್. ಜಿ. ಕೊಟ್ಯಾಳ ಗುರುಗಳ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿ ಮಲ್ಲಿನಾಥ ಕುಸನಾಳ ರೂ. 1 ಲಕ್ಷ ಹಣ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಬಿಜ್ಜರಗಿ, ರಾಮಲಿಂಗ ಲೋಣಿ, ಆರ್.ಎಂ.ಮಸಳಿ, ಎಂ.ಬಿ.ಕುಸನಾಳ, ದೈಹಿಕ ಶಿಕ್ಷಣಾಧಿಕಾರಿ ಎಸ್. ಎಂ. ದೆಯಗೊಂಡ, ರಾಜಕುಮಾರ ಮಸಳಿ, ಬಂದೇನವಾಜ ಬೇವನೂರ, ಆರ್. ಬಿ. ಬಿರಾದಾರ, ರಮೇಶ ಮಸಳಿ, ಎಸ್.ಆರ್.ಹಿರೇಮಠ, ಎಂ.ಎ.ಬಿರಾದಾರ, ರಾಜು ಡೆಂಗನವರ, ಅಮರೇಶ ಬಿರಾದಾರ, ಆರ್.ಡಿ.ಖ್ಯಾಡಿ, ಎಸ್. ಆರ್. ಹಿರೇಗಾಣ, ಶೇಖರ ಹುಡೆದ, ಮಲ್ಲಿಕಾರ್ಜುನ ಗುಣಕಿ, ಪ್ರಕಾಶ ಚಿನಗುಂಡಿ, ಶಿವಾನಂದ ದಾಶ್ಯಾಳ, ಸುರೇಶ ಮಸಳಿ, ಬಿ. ಸಿ. ನಾವಿ, ಸಂತೋಷ ಬಿರಾದಾರ, ಅರುಣಗೌಡ ಬಿರಾದಾರ, ಮಲ್ಲು ಹುನ್ನೂರ, ಎಸ್. ಎನ್. ತಳವಾರ. ಬೆಬಕ್ಕ ಸಂಖ, ರೇಣುಕಾ ಪೂಜೇರಿ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಎ. ಆರ್. ಮಸಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ತುಳಜನವರ ನಿರೂಪಿಸಿದರು. ರಾಜು ಸವದಿ ವಂದಿಸಿದರು.