Poshana Abhiyana: ವಿಜಯಪುರ ಕಿರಿಯ ಬಾಲಕರ ಬಾಲಮಂದಿರಲ್ಲಿ ಪೋಷಣಾ ಅಭಿಯಾನ

ವಿಜಯಪುರ: ನಗರದ ಅಫಝಲಪುರ ಟಕ್ಕೆ ಬಳಿ ಇರುವ ಸರಕಾರಿ ಕಿರಿಯ ಬಾಲಕರ ಬಾಲಮಂದಿರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶ್ರೀಧರ ಕುಲಕರ್ಣಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲಮಂದಿರದ ಮಕ್ಕಳು ದೈಹಿಕವಾಗಿ ಸದೃಢವಾಗಿರಲು ಗುಣಮಟ್ಟದ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕು. ಪೌಷ್ಟಿಕಾಂಶ ಆಹಾರದಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗುವುದು ಎಂದು ಶ್ರೀಧರ ಕುಲಕರ್ಣಿ ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಬಾಲಮಂದಿರದ ಮಕ್ಕಳಿಗೆ ಸರಕಾರದಿಂದ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದರಲ್ಲಿ ಆಹಾರದ ಗುಣಮಟ್ಟವು ಒಳಗೊಂಡಿದೆ.‌ ಹಾಲು, ಹಣ್ಣು, ತರಕಾರಿ ಮಾಂಸ, ಮೊಟ್ಟೆ, ದವಸ ದಾನ್ಯಗಳನ್ನು ವಿತರಿಸುವಲ್ಲಿ ಒತ್ತು ಕೊಟ್ಟಿದೆ. ಸಮಾಜದ ಅಸಹಾಯಕ ಮಗುವನ್ನು ಪೋಷಣೆ ಮಾಡುವುದೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಡಾ. ರುದ್ರಾಂಬಿಕಾ ಬಿರಾದಾರ, ಯಲ್ಲಪ್ಪ ಇರಕಲ್ಲ, ಅಧೀಕ್ಷಕ ಎಸ್.ಎಚ್. ಹೊಸಮನಿ, ಪರಿವೀಕ್ಷಣಾಧಿಕಾರಿ ಕಾವೇರಿ ಕಾಂಬಳೆ, ಸಮಾಜ ವಿಷಯ ಪರಿಶೀಲಕಿ ಭಾರತಿ ಹಡಪದ, ಪಾಂಡುರಂಗ ತಳಕಟ್ನಾಳ, ಪ್ರಭು ಹಿರೇಮಠ, ಎಸ್. ಎಂ. ಅವತಾಡೆ, ತಾರಾಬಾಯಿ ಬನಸೋಡೆ, ಶಿವಲೀಲಾ ಶಿರಮಗೊಂಡ ಹಾಗೂ ಇತರರು ಉಪಸ್ಥಿತರಿದ್ದರು.

ಆಪ್ತ ಸಮಾಲೋಚಕರಾದ ಶೀತಲ್ ಗೋ ಹೂಲಿ ನಿರೂಪಿಸಿದರು. ಶ್ರೀಕಾಂತ ಬಿರಾದಾರ ಸ್ವಾಗತಿಸಿದರು. ಸಾಬು ವಿಜಾಪೂರ ವಂದಿಸಿದರು.

Leave a Reply

ಹೊಸ ಪೋಸ್ಟ್‌