ವಿಜಯಪುರ: ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ಅವರ ಜಯಂತೋತ್ಸವ(ಈದ್ ಮಿಲಾದುನ್ನಬಿ)ಯನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಅಹಲೆ ಸುನ್ನತ್ ಜಮಾತ್ ಅಧ್ಯಕ್ಷ ಹಾಗೂ ಧರ್ಮಗುರು ಹಜರತ್ ಸೈಯ್ಯದ್ ತನ್ವೀರ ಪೀರಾ ಹಾಶ್ಮಿ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಹಮ್ಮದ ಪೈಗಂಬರ್ ಅವರು ಶಾಂತಿ, ಸಮಾನತೆ, ಮಾನವೀಯತೆ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅವರ ಚಿಂತನೆಗಳು ಸಾರ್ವಕಾಲಿಕವಾಗಿದ್ದು, ಅವರ ಆಶಯಗಳಂತೆ ಜಯಂತ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಅ. 5 ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಿಕನ್ನಡಕಗಳ ವಿತರಣೆ ಮಾಡಲಾಗಿದೆ. ಅ. 9 ರಂದು ಬೃಹತ್ ಶಾಂತಿಯಾತ್ರೆ ನಡೆಸಲಾಗುತ್ತಿದೆ. ಈ ಶಾಂತಿಯಾತ್ರೆ ವಿಜಯಪುರ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿದೆ. ಸಮಾಜದ ನಾನಾ ಮುಖಂಡರು, ಮಠಾಧೀಶರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತನ್ವೀರ್ ಪೀರಾ ಹಾಶ್ಮಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಮೊಹ್ಮದ್ ರಫೀಕ್ ಟಪಾಲ್ ಎಂಜಿನಿಯರ್, ಶಕೀಲ್ ಸುತಾರ, ಎಸ್. ಎಸ್. ಖಾದ್ರಿ ಇನಾಮದಾರ, ಫಯಾಜ್ ಕಲಾದಗಿ ಮುಂತಾದವರು ಉಪಸ್ಥಿತರಿದ್ದರು.