ವಿಜಯಪುರ: ಅಭಿಮಾನಿಗಳ ಪ್ರೇಮ, ಜನನಿಯ ವಾತ್ಸಲ್ಯ ಮತ್ತು ಜಗದೀಶನ ಕೃಪೆಯನ್ನು ಯಾರು ಮೀರಲು ಸಾಧ್ಯವಿಲ್ಲ ಎಂದು ಬಬಲಾದಿ ಮಠ, ಕತ್ನಳ್ಳಿ, ಚಮಕೇರಿ, ಅರಭಾವಿ ಮಠದ ಶ್ರೀ ಶಿವಯ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ವಿಜಯಪುರದಲ್ಲಿ ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಶುಭಾರಂಭ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಚನಪಿತಾಮಹ ಡಾ. ಫ.ಗು.ಹಳಕಟ್ಟಿಯವರು ವಿಜಯಪುರ ಜಿಲ್ಲೆ ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕøತಿಕವಾಗಿ ಅಭಿವೃದ್ಧಿಯಾಗಲು ಅಪಾರ ಕೊಡುಗೆ ನೀಡಿದ್ದಾರೆ. ಬಿ.ಎಲ್.ಡಿ.ಇ ಸಂಸ್ಥೆ ಆರಂಭಿಸಿ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಇದನ್ನು ಬಂಥನಾಳ ಶಿವಯೋಗಿಗಳು ಮುಂದುವರೆಸಿಕೊಂಡು ಬಂದು ಬಿ.ಎಂ.ಪಾಟೀಲ ಅವರಿಗೆ ಜವಾಬ್ದಾರಿ ವಹಿಸಿದರು. ತಂದೆ ಬಿ.ಎಂ.ಪಾಟೀಲರಂತೆ ಅವರ ಮಗ ಎಂ.ಬಿ.ಪಾಟೀಲರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಎಂ.ಬಿ.ಪಾಟೀಲ ಅವರಿಗೆ ರೈತರು ಮತ್ತು ಶಿಕ್ಷಣದ ಬಗ್ಗೆ ಅಪಾರ ಪ್ರೀತಿ ಇದೆ. ಹೊರಹಿತಕ್ಕಾಗಿ ದುಡಿಯುವ ಕಳಕಳಿ ಹೊಂದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಅಪಾರ ಕನಸುಗಳನ್ನು ಹೊಂದಿರುವ ಅವರು ಅವುಗಳನ್ನು ನನಸು ಮಾಡಲು ಸದಾ ತುಡಿತ ಹೊಂದಿದ್ದಾರೆ ಎಂದು ಅವರು ಹೇಳಿದರು.
ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಉತ್ತರೋತ್ತರವಾಗಿ ಬೆಳೆಯಲಿ. ಈ ಸೌಹಾರ್ದದಿಂದ ಲಾಭ ಪಡೆಯುವವರು ಅಭಿವೃದ್ಧಿಯಾಗಿ ಋಣಮುಕ್ತರಾಗಬೇಕು. ಸಾಲ ಪಡೆಯಬೇಕು ಪಡೆದು ಅಭಿವೃದ್ಧಿಯಾಗಬೇಕು ಆದರೆ ಪಡೆದ ಸಾಲವನ್ನು ತಮ್ಮ ಅವಧಿಯಲ್ಲಿಯೇ ತೀರಿಸಿ ಇತರರಿಗೆ ಹೊರಯಾಗದಂತೆ ಬದುಕಬೇಕು ಎಂದು ಹೇಳಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ ಈಗ ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ಹೈನುಗಾರಿಕೆ ತರಕಾರಿ ಉದ್ಯಮ ವಿಸ್ತರಣೆಯಾಗುತ್ತಿದೆ. ಈ ವಲಯದ ಜನರನ್ನು ಸೇರಿಸಿಕೊಂಡು ಸೌಹಾರ್ದ ಬೆಳೆಯಬೇಕು. ಇತರ ಸೌಹಾರ್ದಗಳಿಗಿಂತ ವಿಭಿನ್ನವಾಗಿ, ವಿಶಿಷ್ಟವಾಗಿ ಮತ್ತು ಆದರ್ಶವಾಗಿ ಕಾರ್ಯ ನಿರ್ವಹಿಸಬೇಕು. ಮಹಿಳೆಯರು ಮತ್ತು ಯುವಕರಿಗೆ ಆಧ್ಯತೆ ನೀಡಿ ನಿರುದ್ಯೋಗ ನಿವಾರಣೆಯಲ್ಲಿ ನೆರವಾಗಬೇಕು. ಆರ್.ಬಿ.ಐ. ಮಾರ್ಗಸೂಚಿಗಳನ್ನು ಪಾಲಿಸಿ ಮುನ್ನಡೆಯಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಎಲ್.ಡಿ.ಇ ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಮುಂಬರುವ ದಿನಗಳಲ್ಲಿ ಸೌಹಾರ್ದದ ಐದು ಶಾಖೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ಅಲ್ಲದೇ ಈ ಹಿಂದೆ ಬಿ.ಎಲ್.ಡಿ.ಇ. ಸಂಸ್ಥೆಯ ಸೌಹಾರ್ದ ಸಹಕಾರಿ ಸಂಘ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ ಎಂದು ಹೇಳಿದರು.
ಬಿ.ಎಲ್.ಡಿ.ಇ. ಸಂಸ್ಥೆ ವತಿಯಿಂದ ಮುಂಬರುವ ದಿನಗಳಲ್ಲಿ ಸರ್ವ ಜನರ ಅಭ್ಯೂದ್ಯಯಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸಲಾಗಿದೆ. ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ನೆರವಿಗಾಗಿ ಜೆ.ಎಸ್.ಎಸ್.ಮಾದರಿಯಲ್ಲಿ ಐಎಎಎಸ್, ಐಪಿಎಸ್ ಕೋಚಿಂಗ್ ವ್ಯವಸ್ಥೆ ಮಾಡಲಾಗುವುದು. ಬಿ.ಎಲ್.ಡಿ.ಯನ್ನು ಭಾರತೀಯ ಲಿಂಗಾಯತ ಡೆವಲಪಮೆಂಟ್ ಹೆಸರಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶಿವಯ್ಯ ಮಹಾಸ್ವಾಮೀಜಿಗಳು ಎಂ.ಬಿ.ಪಾಟೀಲ ಅವರಿಗೆ ಆತ್ಮೀಯ ಸನ್ಮಾನ ನೀಡಿ ಗೌರವಿಸಿದರು. ಎಂ.ಬಿ.ಪಾಟೀಲ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನೂರಾರು ಮುಖಂಡರು ಮತ್ತು ಬೆಂಬಲಿಗರು ಸನ್ಮಾನಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಇದಕ್ಕೂ ಮುಂಚೆ ಶ್ರೀ ಶಿವಯ್ಯ ಸ್ವಾಮೀಜಿ ಮತ್ತು ಎಂ.ಬಿ.ಪಾಟೀಲ ಅವರು ಎಸ್.ಎಸ್.ಹೈಸ್ಕೂಲ ಆವರಣದಲ್ಲಿ ಸಸಿ ನೆಟ್ಟರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಮತ್ತು ಬಿ.ಎಲ್.ಡಿ. ಸೌಹಾರ್ದ ಅಧ್ಯಕ್ಷ ಸುನೀಲಗೌಡ ಪಾಟೀಲ, ಡೀಮ್ಡ್ ವಿವಿ ಉಪಕುಲಪತಿ ಡಾ. ಆರ್.ಎಸ್.ಮುಧೋಳ, ರಜಿಸ್ಟ್ರಾರ್ ಡಾ. ಆರ್.ವಿ.ಕುಲಕರ್ಣಿ, ಆಡಳಿತಾಧಿಕಾರಿಗಳಾದ ಕೆ.ಜಿ.ಪೂಜಾರ, ಆರ್.ಬಿ.ಕೊಟ್ನಾಳ, ಬಿ.ಆರ್.ಪಾಟೀಲ, ನಿರ್ದೇಶಕರಾದ ಸಂಗು ಸಜ್ಜನ, ಅಶೋಕ ವಾರದ, ವಿ.ಎಸ್.ಪಾಟೀಲ, ಮುಖಂಡರಾದ ಪ್ರೊ. ರಾಜು ಆಲಗೂರ, ಡಿ.ಎಲ್.ಚವ್ಹಾಣ, ಬಿ.ಎಸ್.ಪಾಟೀಲ ಯಾಳಗಿ, ಸೌಹಾರ್ದ ನಿರ್ದೇಶಕರು, ನಾನಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಐ.ಎಸ್.ಕಾಳಪ್ಪನವರ ಸ್ವಾಗತಿಸಿ ಪರಿಚಯಿಸಿದರು. ಸಿದ್ರಾಮ ಕೇಶಾಪುರ ಪ್ರಾರ್ಥಿಸಿದರು. ಕೆ.ವಿ.ಒಡೆಯರ ವಂದಿಸಿದರು. ಎಸ್.ಪಿ.ಶೇಗುಣಸಿ ನಿರೂಪಿಸಿದರು.
ಸೌಹಾರ್ದ ಸಹಕಾರಿ ಸಂಘದ ಕಚೇರಿ ಉದ್ಘಾಟನೆ
ಇದಕ್ಕೂ ಮೊದಲು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಎಸ್.ಎಸ್.ಹೈಸ್ಕೂಲ ಕಾಂಪ್ಲೆಕ್ಸ ಮೊದಲ ಮಹಡಿಯಲ್ಲಿ ಇರುವ ಬಿ.ಎಲ್.ಡಿ.ಇ. ಸೌಹಾರ್ದ ಸಹಕಾರಿ ಸಂಘದ ಕಚೇರಿಯನ್ನು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ, ನಿರ್ದೇಶಕರಾದ ಬಸನಗೌಡ ಪಾಟೀಲ, ಸಂಗು ಸಜ್ಜನ, ಡೀಮ್ಡ್ ವಿವಿಯ ಉಪಕುಲಪತಿ ಡಾ. ಆರ್.ಎಸ್.ಮುಧೋಳ, ರಜಿಸ್ಟ್ರಾರ್ ಡಾ. ಆರ್.ವಿ.ಕುಲಕರ್ಣಿ, ದೇವೇಂದ್ರಕುಮಾರ ಅಗರವಾಲ, ನಾನಾ ಕಾಲೇಜುಗಳ ಪ್ರಾಚಾರ್ಯರು ಮತ್ತು ಇತರರು ಉಪಸ್ಥಿತರಿದ್ದರು.