ವಿಜಯಪುರ: ಸಿಎಂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕು. ಖಾಲಿ ಇರುವ ಸಚಿವ ಸ್ಥಾನಗಳನ್ನು ತಾವೇ ಇಟ್ಟುಕೊಂಡು ಕೂಡಬಾರದು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಳ್ಳು ಆರೋಪದ ಕಾರಣದಿಂದ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಆರೋಪ ಮುಕ್ತವಾದ ಕೂಡಲೇ ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿದೆ ಎಂದು ಹೇಳಿದರು.
ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡಬೇಕು
ಇದೇ ವೇಳೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪರ ಬ್ಯಾಟಿಂಗ್ ಮಾಡಿದ ಅವರು, ಮಾಜಿ ಸಭಾಪತಿ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆ ಆಗುವಾಗ ಅವರನ್ನು ವಿಧಾನ ಪರಿಷತ ಸಭಾಪತಿ ಮಾಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಮಾತು ಕೊಟ್ಟ ಹಾಗೆ ಪಕ್ಷ ನಡೆದುಕೊಳ್ಳಬೇಕು. ಅದು ಕರ್ತವ್ಯವಾಗಿದೆ ಎಂದು ಶಾಸಕರು ಹೇಳಿದರು.
ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಲು ವಿಳಂಭ ಮಾಡುವುದು ಒಳ್ಳೆಯದಲ್ಲ. ಹೀಗಾದರೆ ಜನ ಮತ್ತು ಬಿಜೆಪಿ ಸೇರುವ ನಾಯಕರಿಗೆ ಪಕ್ಷದ ಮೇಲೆ ವಿಶ್ವಾಸ ಇರಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ಚುನಾವಣೆಗೆ ಆರು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೊರಟ್ಟಿ ಅವರನ್ನು ಸಭಾಪತಿ ಮಾಡಬೇಕು. ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಯತ್ನಾಳ ಆಗ್ರಹಿಸಿದರು.
ಕಾಂಗ್ರೆಸ್ಸಿನಿಂದ ಭಾರತ ಜೋಡೋ ಯಾತ್ರೆ ವಿಚಾರ
ಇದೇ ವೇಳೆ, ಕಾಂಗ್ರೆಸ್ಸಿನಿಂದ ಭಾರತ ಜೋಡೋ ಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಯಾತ್ರೆಯಿಂದ ನಮಗೆ ಯಾವುದೇ ನಡುಕ ಇಲ್ಲ. ಕಾಂಗ್ರೆಸ್ಸಿನವರ ಭಾರತ ಜೋಡೋ ಯಾತ್ರೆ ಮಾಡುತ್ತಿರುವುದರಿಂದ ಬಿಜೆಪಿಗೆ ಒಳ್ಳೆಯದಾಗಿದೆ. ಯಾತ್ರೆಯಿಂದ ಕಾಂಗ್ರೆಸ್ಸಿನವರ ಬಣ್ಣ ಬಯಲಾಗತ್ತಿದೆ. ಭ್ರಷ್ಟರನ್ನು ರೋಡ್ ಮೇಲೆ ತರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಈಗ ಕಾಂಗ್ರೆಸ್ಸಿನವರೆಲ್ಲರೂ ರೋಡ್ ಮೇಲೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಹುಲ ಗಾಂಧಿ ಮತ್ತು ಸೋನಿಯಾ ಗಾಂಧಿ ಎಂದಾದರೂ ರೋಡ್ ಮೇಲೆ ತಿರುಗಾಡಿದ್ದರಾ ಎಂದು ಪ್ರಶ್ನೆ ಮಾಡಿದ ಅವರು, ಅವರೀಗ ಕುಣಿಯುತ್ತಿದ್ದಾರೆ, ಓಡುತ್ತಿದ್ದಾರೆ ಕಾಂಗ್ರೆಸ್ಸಿನವರಿಗೆ ಹುಚ್ಚು ಹಿಡಿದಂತಾಗಿದೆ. ಮೋದಿ ಅವರ ಕಾಲದಲ್ಲಿ ಆದ ಕೆಲಸಗಳನ್ನು ನೋಡಿ ಹುಚ್ಚು ಹಿಡಿದು ರೋಡ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾರೆ. ಇದು ಬಿಜೆಪಿಯ ದೊಡ್ಡ ಸಾಧನೆ ಎಂದು ಯತ್ನಾಳ ಹೇಳಿದರು.
ಬಿಜೆಪಿಯಿಂದ ಯಾತ್ರೆ ಮಾಡಲ್ಲ. ಬದಲಾಗಿ ಸಾಧನಗಳನ್ನು ತಿಳಿಸುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಅವರು ಹೇಳಿದರು.
ವಿಧಾನ ಸಭೆ ಚುನಾವಣೆ ತಯಾರಿ ವಿಚಾರ
ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ ವಿಚಾರ ಪ್ರತಿಕ್ರಿಯೆ ನೀಡಿದ ಯತ್ನಾಳ, ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವ ವಿಚಾರದ ಕುರಿತು ತಮ್ಮದೇ
ಶೈಲಿಯಲ್ಲಿ ಟಾಂಗ್ ನೀಡಿದ ಅವರು, ಬಿ ಎಸ್ ವೈ ರಾಜ್ಯ ಪ್ರವಾಸ ಮಾಡಲು ಕರೆದರೆ ಹೋಗುತ್ತೇವೆ. ನಮ್ಮನ್ನು ಕರೆಯದೇ ಬಿ ಎಸ್ ವೈ ಮೇಲೆ 180 ಸೀಟ್ ಬರೋದಾರೆ ಅವರೇ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಬೀದರ್ ನವರಾತ್ರಿ ಪೂಜೆ ವಿಚಾರ
ಇದೇ ವೇಳೆ, ಬೀದರ್ ನಗರದ ಮಹ್ಮದ್ ಗವಾನ್ ಮದರಸಾದಲ್ಲಿ ನವರಾತ್ರಿ ಪೂಜೆ ವಿಚಾರ ಕುರಿತು ಮಾತನಾಡಿದ ಶಾಸಕರು, ನವರಾತ್ರಿ ಹಬ್ಬದ ಕಾರಣ ದುರ್ಗಾಮಾತೆ ಪೂಜೆ ಮಾಡಿದವರ ಬಂಧನವನ್ನು ವಿರೋಧಿಸಿದರು.
ಮದರಸಾ ಇರುವ ಸ್ಥಳದಲ್ಲಿ ಅಂಬಾ ಭವಾನಿ ದೇವಸ್ಥಾನ ಇರುವುದು ಸತ್ಯ. ಹಿಂದೆ ದೇಶದಲ್ಲಿ ಕಾಶಿ, ಮಥುರಾ, ಅಯೋದ್ಯಾದಂತೆ ಕೆಡವಿ ಮಸೀದಿ ಮಾಡಲಾಗಿದೆ. ಬಹುಮನಿ ಸುಲ್ತಾನರ ಕಾಲದಲ್ಲಿ ಇದು ಆಗಿದೆ. ಪ್ರತಿ ವರ್ಷದ ಸಂಪ್ರದಾಯದಂತೆ ಪೂಜೆ ಮಾಡಲಾಗಿದೆ. ಆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕಿತ್ತು. ಸಂಪ್ರದಾಯಕ್ಕೆ ತೊಂದರೆ ಮಾಡಿದ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಬೇಕು. ದೇವಿಯ ಸ್ಥಾನ ಇರುವ ಕಾರಣ ಅಲ್ಲಿ ನಿರಂತರ ಪೂಜೆ ಆಗಬೇಕು ಎಂದು ಒತ್ತಾಯಿಸಿದರು.
ರೇಲ್ವೆ ಹೆಸರು ಬದಲಾವಣೆಗೆ ಸ್ವಾಗತ
ಮೈಸೂರು- ಬೆಂಗಳೂರು ರೈಲಿಗೆ ಟಿಪ್ಪು ಎಕ್ಸಪ್ರೆಸ್ ಬದಲು ಒಡೆಯರ್ ಎಕ್ಸಪ್ರೆಸ್ ಎಂದು ಹೆಸರು ಬದಲಾಯಿಸಿರುವುದನ್ನು ಸ್ವಾಗತಿಸಿದ ಯತ್ನಾಳ, ಹೆಸರು ಬದಲಾವಣೆ ಮಾಡಿದ್ದು ಕೇಂದ್ರದ ಉತ್ತಮ ಕಾರ್ಯ. ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಿದವ ಟಿಪ್ಪು ಸುಲ್ತಾನ್. ನಿರ್ದಯಿ ಮತಾಂಧನಾಗಿದ್ದ ಟಿಪ್ಪು ರಾಜನಲ್ಲ. ಮೈಸೂರು ಮಹಾರಾಜರ ಬಳಿ ಟಿಪ್ಪು ತಂದೆ ಹೈದರಾಲಿ ನೌಕರನಾಗಿದ್ದ. ಅವರು ಮೈಸೂರು ರಾಜರ ಮನೆತನಕ್ಕೆ ಮೋಸ ಮಾಡಿದ್ದರು. ಮೊದಲು ಟಿಪ್ಪು ಹಸರು ಇಟ್ಟಿದ್ದೇ ತಪ್ಪು. ಹಿಂದೆ ಸಿದ್ದರಾಮಯ್ಯ, ಕಾಂಗ್ರೆಸ್, ಯುಪಿಎ ಕಾಲದಲ್ಲಿ ಆಗಿದ್ದ ಪ್ರಮಾದಗಳನ್ನು ತಿದ್ದು ಪಡಿ ಮಾಡೋ ಕೆಲಸ ನಡೆದಿದೆ. ರಾಜ್ಯಕ್ಕೆ ಮೈಸೂರು ಮಹಾರಾಜರಾದ ಒಡೆಯರ ಅವರ ಕೊಡುಗೆ ಅಪಾರವಾಗಿದೆ. ಟಿಪ್ಪು ಬದಲಾಗಿ ಒಡೆಯರ್ ಹೆಸರು ಇಟ್ಟಿದ್ದಕ್ಕೆ ಸಂಸದ ಪ್ರತಾಪಸಿಂಹ, ಕೇಂದ್ರ ರೇಲ್ವೆ ಸಚಿವ ಹಾಗೂ ಪ್ರಧಾನಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.