ವಿಜಯಪುರ. ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಏಕಕಾಲದಲ್ಲಿ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ ನಡೆಯಿತು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ವಿಜಯಪುರ ತಾಲೂಕಿನ ಕನ್ನೂರ, ತಿಕೋಟಾ, ಬಬಲೇಶ್ವರ ಮತ್ತು ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಬೃಹತ್ ಶಿಬಿರಗಳು ನಡೆದವು.
ಗಮನ ಸೆಳೆದ ಕನ್ನೂರಿನ ಶಿಬಿರ
ಕನ್ನೂರ ಗ್ರಾಮದ ಗುರುಮಠದಲ್ಲಿ ನಡೆದ ಶಿಬಿರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಂ.ಬಿ.ಪಾಟೀಲ ಅವರನ್ನು ಗ್ರಾಮಸ್ಥರು ಸಿಂಗಾರಗೊಂಡ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದು, ಎಂ.ಬಿ.ಪಾಟೀಲರ ಜನ್ಮದಿನದ ಸಂತಸವನ್ನು ಇಮ್ಮಡಿಗೊಳಿಸಿತ್ತು. ಕನ್ನೂರ ಕ್ಷೇತ್ರ ಪುನರ್ ವಿಂಗಡಣೆಗಿಂತಲೂ ಮುಂಚೆ ಎಂ.ಬಿ.ಪಾಟೀಲರು ಪ್ರತಿನಿಧಿಸುತ್ತಿದ್ದ ತಿಕೋಟಾ ಮತಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಈಗ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಗೆ ಸೇರಿದೆ. 2013-2018 ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ.ಬಿ.ಪಾಟೀಲರು ಈ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಿದ್ದರು. ಬರದ ಭೂಮಿಗೆ ಹರಿದ ನೀರು ಈ ಭಾಗದ ಜನರು ಬಂಗಾರದಂಥ ಬೆಳೆ ಬೆಳೆಯಲು ಅನಕೂಲ ಕಲ್ಪಿಸಿತು. ತಮ್ಮೂರಿಗೆ ನೀರಾವರಿ ಸೌಲಭ್ಯ ಸಿಕ್ಕ ನಂತರ ಇದೇ ಮೊದಲ ಬಾರಿಗೆ ಎಂ.ಬಿ.ಪಾಟೀಲರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಈ ಮೆರವಣಿಗೆ ಆಯೋಜಿಸುವ ಮೂಲಕ ಜಲನಾಯಕನಿಗೆ ಕೃತಜ್ಞತೆ ಸಲ್ಲಿಸಿದ್ದು ಗಮನಾರ್ಹವಾಗಿದೆ.
ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಜನ ಆರೋಗ್ಯ ಚಿಕಿತ್ಸೆಗೆ ಬೇರೆ ಜಿಲ್ಲೆಗೆ ಹೋಗಬಾರದು, ಬೇರೆ ಜಿಲ್ಲೆಗಳ ಜನ ಚಿಕಿತ್ಸೆಗಾಗಿ ಇಲ್ಲಿಗೆ ಬರುವಂತಾಗಬೇಕು. ಅದಕ್ಕಾಗಿ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳ ವ್ಯವಸ್ಥೆ ಇರಬೇಕು ಎಂಬುದು ನಮ್ಮ ತಂದೆ ಬಿ.ಎಂ.ಪಾಟೀಲರ ಕನಸಾಗಿತ್ತು. ಅವರ ಆಶಯದಂತೆ ಸುಪರ್‍ಸ್ಪೇಶಾಲಿಟಿ ಆಸ್ಪತ್ರೆ ಆರಂಭಿಸಿದ್ದೇವೆ. ಇಲ್ಲಿ ಇರುವ ಬೆಡ್‍ಗಳ ಸಂಖ್ಯೆಯನ್ನು 500 ಕ್ಕೆ ಹೆಚ್ಚಿಸುವ ಯೋಜನೆ ಇದೆ. ಆಸ್ಪತ್ರೆ ವತಿಯಿಂದ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ನಾನಾ ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗಿತ್ತಿದೆ. ಈ ಮೂಲಕ ಎಲ್ಲ ವರ್ಗಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಜೊತೆಗೆ ಶಸ್ತ್ರಚಿಕಿತ್ಸೆ ವ್ಯವಸ್ಥೆ ಒದಗಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮೂರಿಗೆ ವಿದ್ಯುತ್ ವಿತರಣೆ ಕೇಂದ್ರ ಆರಂಭಿಸುವುದು ಸೇರಿದಂತೆ ಇತರ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲರು ಸ್ಥಳೀಯ ಶಾಸಕರ ಜೊತೆಗೂಡಿ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ವಿರಕ್ತೇಶ್ವರ ಮಠದ ಸೋಮನಾಥ ಶಿವಾಚಾರ್ಯರ ಸ್ವಾಮೀಜಿ, ಕನ್ನೂರ ಶಾಂತಿ ಕುಟೀರದ ಕೃμÁ್ಣಜಿ ಸ್ವಾಮೀಜಿ, ಶಾಸಕ ಡಾ. ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಪೆÇ್ರ.ರಾಜು ಆಲಗೂರ, ವಿಠ್ಠಲ ಕಟಕದೊಂಡ, ಬಿ.ಎಲ್.ಡಿ.ಇ ಆಸ್ಪತ್ರೆ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ತಜ್ಞ ವೈದ್ಯರಿಂದ 1100 ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧಿ ವಿತರಣೆ ಮಾಡಲಾಯಿತು. ಅಲ್ಲದೇ, ಅಗತ್ಯವಿದ್ದವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಯಿತು.
ಬಬಲೇಶ್ವರದಲ್ಲಿ ನಡೆದ ಶಿಬಿರ
ಬಬಲೇಶ್ವರ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರಕ್ಕೆ ಬಿ.ಎಲ್.ಡಿ.ಇ ನಿರ್ದೇಶಕ ವಿ.ಎಸ್.ಪಾಟೀಲ ಚಾಲನೆ ನೀಡಿದರು. 1069 ಜನರ ಉಚಿತ ಆರೋಗ್ಯ ತಪಾಸಣೆ ನಡೆಸಿ 254 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.
ಈ ಸಂದರ್ಭದಲ್ಲಿ ಆಲಗೂರ ಪಂಚಮಸಾಲಿ ಪೀಠದ ಜಗದ್ಗುರು ಡಾ.ಮಹಾದೇವ ಶಿವಾರ್ಯ ಸ್ವಾಮೀಜಿ, ಮುಖಂಡ ವಿ.ಎನ್.ಬಿರಾದಾರ, ಚನ್ನಪ್ಪ ಕೊಪ್ಪ, ವೈದ್ಯರಾದ ಡಾ.ಅರುಣ ಇನಾಮದಾರ, ಡಾ.ಅರವಿಂದ ಪಾಟೀಲ, ಡಾ.ಶೀತಲ ಕಿಣಗಿ ಮತ್ತಿತರು ಉಪಸ್ಥಿತರಿದ್ದರು.
ತಿಕೋಟಾದಲ್ಲಿ 960 ಜನರ ಆರೋಗ್ಯ ತಪಾಸಣೆ
ತಿಕೋಟಾ ಪಟ್ಟಣದಲ್ಲಿ ನಡೆದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರವನ್ನು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಉಪಕುಲಪತಿ ಡಾ. ಆರ್.ಸಿ.ಮುಧೋಳ ಉದ್ಘಾಟಿಸಿದರು.
ಈ ಶಿಬಿರದಲ್ಲಿ ವೈದ್ಯಕೀಯ, ಶಸ್ತ್ರ ಚಿಕಿತ್ಸಾ, ಎಲುಬು ಮತ್ತು ಕೀಲು, ಕಣ್ಣು, ಕಿವಿ, ಮೂಗು ಹಾಗೂ ಗಂಟಲು, ಚರ್ಮ ರೋಗ, ಮಕ್ಕಳ ವಿಭಾಗ ವೈದ್ಯರಿಂದ ಆರೋಗ್ಯ ತಪಾಸಣಾ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಿಜಿಸ್ಟಾರ್ ಡಾ.ಆರ್.ವಿ.ಕುಲಕರ್ಣಿ, ಉಪಪ್ರಾಚಾರ್ಯ ಡಾ. ಎಂ.ಬಿ.ಪಾಟೀಲ, ಡಾ. ಎಂ.ಎಂ.ಪಾಟೀಲ ಗ್ರಾಮದ ಮುಖಂಡರಾದ ಟಿ.ಕೆ.ಹಂಗರಗಿ, ಸೋಮನಾಥ ಬಾಗಲಕೋಟ, ರಾಮು ದೇಸಾಯಿ, ಜಗದೀಶಗೌಡ ಪಾಟೀಲ, ಡಿ.ಎಂ.ಪಾಟೀಲ, ಎಂ.ಬಿ.ಹಂಜಗಿ, ಎಂ.ಬಿ.ಮುಜಾವರ ಹಾಗೂ ರಮೇಶಕುಮಾರ ವೈದ್ಯಕೀಯ, ಅರೆವೈದ್ಯಕೀಯ ಹಾಗೂ ಸರಕಾರಿ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ 960 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಉಕ್ಕಲಿ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ
ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಬಿ.ಎಲ್.ಡಿ.ಇ ಸಂಸ್ಥೆಯ ನ್ಯೂ ಇಂಗ್ಲೀಷ ಪ್ರೌಢ ಶಾಲೆ ಮೈದಾನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರವನ್ನು ಬಿ.ಎಲ್.ಡಿ.ಇ ನಿರ್ದೇಶಕ ಬಸನಗೌಡ ಎಂ.ಪಾಟೀಲ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಿ.ಎಲ್.ಡಿ.ಇ ಸಂಸ್ಥೆಯಿಂದ ಆರೋಗ್ಯ, ಶಿಕ್ಷಣ, ಆರ್ಥಿಕ, ನೀರಾವರಿ, ಕೋಟಿ ವೃಕ್ಷ ಅಭಿಯಾನ, ಗ್ರಾಮೀಣಾಭಿವೃದ್ಧಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಂಸ್ಥೆ ಅಧ್ಯಕ್ಷ ಡಾ. ಎಂ.ಬಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿ.ಎಲ್.ಡಿ.ಇ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಯಡವಣ್ಣವರ ಮಾತನಾಡಿ, ಆರೋಗ್ಯ ತಪಾಸಣೆ ಶಿಬಿರ ಮತ್ತು ಈ ಶಿಬಿರದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಎಂ.ಬಿ.ಪಾಟೀಲ ಇವರ ಜನ್ಮದಿನದ ಅಂಗವಾಗಿ ಜನರ ಮನೆಯ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಕಾರ್ಯವನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಶಿಬಿರದಲ್ಲಿ ಸ್ತ್ರೀರೋಗ ತಜ್ಞೆ ಡಾ. ಅರುಣಾ ಬಿರಾದಾರ, ಸಹಾಯಕ ವೈದ್ಯಕೀಯ ಅಧೀಕ್ಷಕಿ ಡಾ. ಅನ್ನಪೂರ್ಣ ಸಜ್ಜನ, ಗ್ರಾಮ ಪಂಚಾಯತ ಅಧ್ಯಕ್ಷೆ ಸವಿತಾ ಸಜ್ಜನ, ಉಪಾಧ್ಯಕ್ಷ ಅಶೋಕ ಇಂಡಿ, ಶಾಲಾ ಸಲಹಾ ಸಮಿತಿಯ ಸದಸ್ಯರಾದ ಪರಮನಗೌಡ ಬಿರಾದಾರ, ಸುಭಾಷ ಕಲ್ಯಾಣಿ, ಬಾಳಪ್ಪ ಮಸಳಿ, ಬಸಪ್ಪ ಹನುಮಶೆಟ್ಟಿ, ಬಸವರಾಜ ಸಿಂದಗಿ ಮತ್ತು ಡಾ. ಎಂ. ಎಂ. ಪಾಟೀಲ, ಎಂ.ಎಸ್.ಚಂಡಕಿ, ಸಿದ್ಧಲಿಂಗಯ್ಯಸ್ವಾಮಿ, ಅಜಯಗೌಡ, ಬಿ.ಎಲ್. ಡಿ .ಇ ಶಾಲಾ ಕಾಲೇಜು ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.