Tulajapur Jatre: ಕೊರೆಯುವ ಚಳಿಯ ಮಧ್ಯೆ ಮಹಾರಾಷ್ಟ್ರದ ತುಳಜಾ ಭವಾನಿ ದೇವಸ್ಥಾನಕ್ಕೆ ಹರಿದು ಬರುತ್ತಿದೆ ಕರ್ನಾಟಕ ಭಕ್ತಸಾಗರ

ವಿಜಯಪುರ: ಒಂದೆಡೆ ಕೊರೆಯುವ ಚಳಿ, ಮತ್ತೋಂದೆಡೆ ಇದನ್ನು ಲೆಕ್ಕಿಸದೇ ಸಂಚರಿಸುತ್ತಿರು ಭಕ್ತಪಡೆ.  ಆ ದೇವತೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದರೂ ಕರ್ನಾಟಕ ಭಕ್ತರು ದೇವಿಯ ಆರಾಧಕರಾಗಿದ್ದಾರೆ.

ಮಹಾರಾಷ್ಟ್ರದ ತುಳಜಾಪುರದಲ್ಲಿ ಇರುವ ತುಳಜಾಭವಾನಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲ ಕರ್ನಾಟಕದ ಭಕ್ತರಿಗೂ ಆರಾಧ್ಯ ದೈವವಾಗಿದ್ದಾಳೆ. ಅಷ್ಟೇ ಏಕೆ? ಇಡೀ ದೇಶದ ನಾನಾ ಭಾಗಗಳಲ್ಲಿಯೂ ದೇವಿಯ ಆರಾಧಕರಿದ್ದಾರೆ.  ಆದರೆ, ಈ ದೇವಿಗೆ ಕರ್ನಾಟಕ ಭಕ್ತರ ಸಂಖ್ಯೆ ಸಿಂಹಪಾಲು.  ವಿಜಯದಶಮಿಯಂದು ಕುಕ್ಕುರ ರಕ್ಕಸನ ಜೊತೆಯಲ್ಲಿ ಯುದ್ದದಲ್ಲಿ ವಿಜಯದ ಮಾಲೆ ಧರಿಸುವ ಆ ದೇವಿ, ಅದೇ ದಿನ ವಿಶ್ರಾಂತಿಗಾಗಿ ನಿದ್ರೆಗೆ ಜಾರುತ್ತಾಳೆ.  ಐದು ದಿನಗಳ ಭರ್ಜರಿ ವಿಶ್ರಾಂತಿ ಬಳಿಕ ನಿದ್ರೆಯಿಂದ ಎಚ್ಚರಗೊಳ್ಳುತ್ತಾಳೆ.  ಹೀಗೆ ಎಚ್ಚರಗೊಂಡ ದೇವತೆಯ ಅಭಿಷೇಕ ನಡೆಯುತ್ತೆ.  ‌ಆ ಅಭಿಷೇಕದಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ನಾನಾ ರಾಜ್ಯಗಳಿಂದ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.

ತುಳಜಾಪುರ ಅಂಬಾ ಭವಾನಿ ಮೂರ್ತಿ

ಹಿಂದೂ ಸಾಮ್ರಾಜ್ಯದ ಅನಭಿಷಕ್ತ ದೊರೆ, ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಕುಟುಂಬದ ಆರಾಧ್ಯ ದೈವ ಮಾತೆ ತುಳಜಾ ಭವಾನಿ.  ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯ ತುಳಜಾಪುರದಲ್ಲಿರುವ ಈ ದೇವಸ್ಥಾನ ಆಸ್ತಿಕರ ಶಕ್ತಿಕೇಂದ್ರವೂ ಹೌದು.   ಶಿವಾಜಿ ವಂಶಸ್ಥರು ಮಾತ್ರವಲ್ಲದೆ ಈ ದೇವಿಯನ್ನು ಮಹಾರಾಷ್ಟ್ರ ಹಾಗೂ ಹೊರಗಿನ ಇತರ ರಾಜ್ಯದ ಕುಟುಂಬಗಳು ಆರಾಧಿಸಿಕೊಂಡು ಬಂದಿವೆ.  ಮಹಾರಾಷ್ಟ್ರದ ಮೂರು ಶಕ್ತಿಪೀಠಗಳು ಮತ್ತು ಭಾರತದ ಐವತ್ತೊಂದು ಶಕ್ತಿಪೀಠಗಳಲ್ಲಿ ತುಳಜಾಭವಾನಿ ಒಂದು ಎಂದೇ ಪ್ರತೀತಿ ಇದೆ.

ಹೀಗೆ ತುಳಜಾಪುರದ ಭವಾನಿ ಮಾತೆಯ ದರುಶನಕ್ಕೆ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟ, ಚಿಕ್ಕೋಡಿ, ಕಲಬುರಗಿ ಸೇರಿದಂತೆ ಪಕ್ಕದ ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಆರಂಭಿಸಿದ್ದಾರೆ.  ದಸರಾ ನಿಮಿತ್ತ ಒಂಬತ್ತು ದಿನಗಳ ಕಾಲ ದೇವಿಯ ಒಂಬತ್ತು ಬಗೆಯ ಅವತಾರ ಗಳಲ್ಲಿಪೂಜಿಸುವ ಮತ್ತು ಭಕ್ತಿ ಸಮರ್ಪಿಸಿದ ಬಳಿಕ, ತುಳಜಾಪುರದ ಭವಾನಿ ಮಾತೆಯ ದರುಶನಕ್ಕೆ ಹೋಗುವುದು ಅಸಂಖ್ಯ ಭಕ್ತರ ವಾಡಿಕೆಯಾಗಿದೆ.

ಮಾರ್ಗದುದ್ದಕ್ಕೂ ಕೇಸರಿ ಧ್ವಜ, ಕೇಸರಿ ಶಾಲು, ತಲೆಗೆ ರುಮಾಲು, ಪಲ್ಲಕ್ಕಿ ಹೊತ್ತು, ಕೈಯಲ್ಲಿ ತರಹೇವಾರಿ ಸಂಗೀತ ಸಲಕರಣೆಗಳನ್ನು ಹಿಡಿದು ಹೊರಡುವ ಭಕ್ತರು ಆಯಿ ರಾಧಾ ಉಧೇ.. ಉಧೇ.. ಉಧೇ… ಸದಾ ನಂದಿಚಾ ಉಧೇ.. ಉಧೇ.. ಉಧೇ… ‌ಜೈ ಮಾತಾದಿ, ತುನೇ ಮುಜೆ ಬುಲಾಯಾ ಷೇರಾವಾಲಿಯೇ ಎಂಬ ಜೈಕಾರ ಹಾಕುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ ಎನ್ನುತ್ತಾರೆ ತುಳಜಾ ಭವಾನಿಯ ಅಪ್ಪಟ ಭಕ್ತರಾಗಿರುವ ಬಸವ ನಾಡಿನ ಪತ್ರಕರ್ತ ವಿಜಯ ಸಾರವಾಡ, ಪ್ರತಿಭಾ ಸಾರವಾಡ, ಮತ್ತು ವಿಠ್ಠಲ ಚೌಗುಡೆ.

ನಿದ್ರೆಗೆ ಜಾರಿರುವ ತುಳಜಾ ಭವಾನಿ ಸೀಗಿ ಹುಣ್ಣಿಮೆಯಾದ ಈ ದಿನ ಜಾಗೃತಗೊಳ್ಳುತ್ತಾಳೆ.  ಹೀಗೆ ಜಾಗೃತಗೊಂಡ ಭವಾನಿಗೆ ಅಭಿಷೇಕ ಪೂಜೆ ನಡೆಯುತ್ತದೆ.  ಈ ಅಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು ತಮ್ಮ ಜೀವನ ಸಾರ್ಥಕವಾಯಿತು ಎಂಬ ಭಾವನೆಯಿಂದ ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾದೆ.  ಅಲ್ಲದೆ ರಾತ್ರಿ ಚಳಿಗೆ ನಡುಗುವ ಭಕ್ತರು ಆ ಭವಾನಿ ನಾಮಸ್ಮರಣೆಯಲ್ಲಿ ಆಯಿ ಭವಾನಿ ಘೋಷಣೆ ಹಾಕುತ್ತಾ ಸಾಗುತ್ತಾರೆ.

ಮಹಾರಾಷ್ಟ್ರದ ಸೋಲಾಪುರದ ರೂಪಾ ಭವಾನಿ ಮಂದಿರದಿಂದ ಸಾಗುವ ಪಾದಯಾತ್ರಿಕರಿಗೆ ಮಾರ್ಗ ಮಧ್ಯೆ ನಾನಾ ಗ್ರಾಮಸ್ಥರು, ಭಕ್ತಾದಿಗಳು ಪ್ರಸಾದ, ನೀರು, ಹಣ್ಣು ಹಂಪಲು ವಿತರಿಸುತ್ತಾರೆ.  ಈಗ ಭವಾನಿ ಅಭಿಷೇಕ್ ನೇರವೇರಿದೆ.  ತುಳಜಾಭವಾನಿ ದೇವಸ್ಥಾನ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಪಾದಯಾತ್ರಿಕರ ಸುರಕ್ಷತೆಗೆ ಮಹಾರಾಷ್ಟ್ರ ಸರಕಾರ ಬಿಗಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಇತರ ವ್ಯವಸ್ಥೆ ಮಾಡಿದೆ.

ಕೊರೊನಾ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಮಂದಿರದ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು.  ಈ ಬಾರಿ ತುಳಜಾ ಭವಾನಿ ಕೃಪೆಯಿಂದ ಕೊರೊನಾ ನಾಶವಾಗಿದೆ.  ಹೀಗಾಗಿ ಸಂತಸದಿಂದ, ಭಕ್ತಿಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ ಎನ್ನುತ್ತಾರೆ ಕುಂದಾನಗರಿ ಬೆಳಗಾವಿ ಬಿ ಆರ್ ಡಿ ಎಸ್ ನೌಕರ ಕೃಷ್ಣಾಮಣಿ.

ನೆಲ ಜಲ, ಭಾಷೆಯ ವಿಷಯದಲ್ಲಿ ನೆರೆ ರಾಜ್ಯದೊಂದಿಗೆ ವಿವಾದವಿದ್ದರೂ ಧಾರ್ಮಿಕ ವಿಷಯದಲ್ಲಿ ನಾವೆಲ್ಲರೂ ಭವಾನಿ ಭಕ್ತರು ಎಂಬ ಸಂದೇಶವನ್ನು ಕರ್ನಾಟಕದ ಭಕ್ತರು ಈ ಪಾದಯಾತ್ರೆ ಮೂಲಕ ಸಾಬೀತುಪಡಿಸುತ್ತಿದ್ದಾರೆ.  ಜಗನ್ಮಾತೆ ತುಳಜಾಭವಾನಿ ಕೂಡಾ ಅನ್ಯ ರಾಜ್ಯದ ಭಕ್ತರನ್ನು ಹರಸಿ, ತನ್ನ ಕೃಪಾಕಟಾಕ್ಷ ತೋರಿ ಭಕ್ತರನ್ನು ರಕ್ಷಿಸುತ್ತಿದ್ದಾಳೆ.

Leave a Reply

ಹೊಸ ಪೋಸ್ಟ್‌